ಬದಲಾಗುತ್ತಿರುವ ಈ ಆಧುನಿಕ ಕಾಲಘಟ್ಟದಲ್ಲಿ ಎಲ್ಲವೂ ಯಾಂತ್ರಿಕವಾಗುತ್ತಿದೆ. ಪರಸ್ಪರ ಕೂತು ಹಾಡು ಹರಟೆ ಮಾಡುತ್ತಿದ್ದ ಕಾಲ ಮರೆಯಾಗಿ ಮೊಬೈಲ್ ದಾಸರಾಗುತ್ತಿದ್ದೇವೆ. ಇದೇನಾ ಕಾರ್ಪೊರೇಟ್ ಜಗತ್ತು ಅಂದ್ರೆ? ಜೀವನ ಅಂದ್ರೆ ವ್ಯವಹಾರವೇ? ಸಂಬಂಧ ಭಾವನೆಗಳನ್ನು ಕೊಂಡುಕೊಳ್ಳಲು ಸಾಧ್ಯವೇ?ಅದೆಷ್ಟು ಪ್ರಶ್ನೆ ಹೆಚ್ಚಾಗುತ್ತಿದೆ ಇಂದಿನ ದಿನಗಳಲ್ಲಿ.
ಆಸ್ತಿ – ಅಂತಸ್ತು, ಐಷಾರಾಮಿ ದುಬಾರಿ ವಸ್ತು, ದುಡ್ಡು ಮತ್ತು ಸ್ಟೇಟಸ್‌ಗೆ ಮಹತ್ವ ಕೊಟ್ಟಷ್ಟು ವ್ಯಕ್ತಪಡಿಸುವ ಮನದ ಭಾವಗಳಿಗೆ ಬೆಲೆ ಇಲ್ಲದಾಗಿದೆ? ವ್ಯಕ್ತಿ ಆಗಲಿ ವಸ್ತುವಾಗಲಿ ಉಪಯೋಗಕ್ಕೆ ಬಂದರೆ ಮಾತ್ರ ಸನಿಹಕೆ ಇಲ್ಲದೆ ಹೋದರೆ ಕಾಲಿನ ಕಸಕ್ಕಿಂತ ಕೀಳಾಗಿ ನೋಡುವ ಮನೋಭಾವ ಬೆಳೆಸಿಕೊಂಡು ಬದುಕು ಸಾಗಿಸುವುದು ಅದೆಷ್ಟರ ಮಟ್ಟಕ್ಕೆ ಸರಿ? ಒಬ್ಬರಿಂದ ಸಹಾಯ ಪಡೆದುಕೊಂಡು ಅವರನ್ನೇ ದ್ವೇಷಿಸುವ ಸ್ವಾರ್ಥ ಮನೋಭಾವನೆ ನಾನು ಬದುಕಿದರೆ ಸಾಕು ನನಗಿಂತ ಅವರು ಮುಂದೆ ಹೋಗಬಾರದು ಎನ್ನುವ ಅಸೂಯೆ ನಾನೊಬ್ಬನೇ ಸುಖವಾಗಿ ಬದುಕಬೇಕು.
ಸ್ವಂತ ಸಂಬಂಧಗಳಲ್ಲೇ ಅಸೂಯೆ. ನನ್ನ ಜತೆಗೆ ಹುಟ್ಟಿದವರಿಗೆ ಯಾವ ಆಸ್ತಿಯು ಸಿಗಬಾರ್ದು ನಾನೊಬ್ಬನೇ ಅಧಿಪತಿಯಾಗಿ ಮೆರೆಯಬೇಕು ಎನ್ನುವವರೇ ಜಾಸ್ತಿ? ಅವರು ಬದುಕಲಿ ನನ್ನಂತೆ ಅಂದುಕೊಳ್ಳುವಷ್ಟು ದೊಡ್ಡ ಮನಸು ಇಲ್ಲದಾಗಿದೆ ಈ ಕಾರ್ಪೊರೇಟ್ ಜಗತ್ತಿನಲ್ಲಿ ಸಂಬಂಧಗಳು ವ್ಯವಹಾರವಾಗಿ ಮಾರ್ಪಾಡಾಗುತ್ತಿದೆ ಅಪೇಕ್ಷೆಗಳು ಹೆಚ್ಚಾಗುತ್ತಿದೆ ? ಅವರಿಂದ ಕೆಲಸವಾದರೆ ಮಾತ್ರ ಅವರು ಒಳ್ಳೆಯವರು? ಸಂಬಂಧಗಳ ಭಾರ ದುಡ್ಡಿನಿಂದ ಅಳೆದು ಸಂಬಂಧದ ಮೌಲ್ಯಗಳೇ ಕುಸಿದು ಹೋಗುತ್ತಿದೆ. ಅವರಿಗಿಂತ ಚೆನ್ನಾಗಿ ಬದುಕಬೇಕು. ಅವರಿಗಿಂತ ಒಂದು ಹೆಜ್ಜೆ ಮುಂದೆ ಇರಬೇಕು ಎನ್ನುವ ಪೈಪೋಟಿಯಲ್ಲೇ ಬದುಕು ಸಾಗಿಸುವುದು ಸುಂದರ ಬದುಕೆಂದು ತಮಗೆ ತಾವೇ ಅಂದುಕೊಂಡು ಮತ್ತಷ್ಟು ಪಡೆಯಲು ಹಂಬಲಿಸುವ ಸ್ವಾರ್ಥವೇ ಹೆಚ್ಚಾಗುತಿದೆ.
ನಾನು ನನ್ನದು ಎನ್ನುವ ಭಾವವೇ ನಶ್ವರ ಈ ಜಗತ್ತಿನಲ್ಲಿ ಕೊನೆಗೆ ಉಳಿಯುವುದು ಜಗತ್ತು ಮಾತ್ರ ಒಂದಲ್ಲ ಒಂದು ದಿನ ತೊರೆದು ಹೋಗಲೇಬೇಕು. ಆದರೂ ಏಕೆ ಮೋಹ, ಸ್ವಾರ್ಥ ಮತ್ತು ಅಸೂಯೆಯ ಜ್ವಾಲೆಯಲ್ಲಿ ಬಂಧಿಯಾಗಿ ನರಳಾಟದ ಜೀವನ ಸಾಗಿಸುವುದು ಅರಿತು ಬಾಳಬೇಕು ಬದುಕಿನ ಮರ್ಮ ತಿಳಿಯಲು. ಜೀವನ ಇರುವಂತೆ ಇರಲಾರದು ಇಂದು ಇದ್ದ ಖುಷಿ ನಾಳೆ ಇರದು. ಇಂದು ಬರುವ ದುಃಖ ನಾಳೆ ಇರದು ಬದುಕೇ ಜಟಕಾ ಬಂಡಿ ಸಾಗಿದಂತೆ ಲಾಭವಷ್ಟೇ ಅಲ್ಲ ಜೀವನ, ನಷ್ಟಗಳು ಬಂದಾಗ ಯಾರಾದರೂ ಸಹಾಯಕ್ಕೆ ಬೇಕೇ ಬೇಕು. ಹಾಗಾಗಿ ಭಾವಹೀನರಂತೆ ಬದುಕುವ ಬದಲು ಇದ್ದಷ್ಟು ದಿನ ಪ್ರೀತಿ, ಸ್ನೇಹ ಸಂಬಂಧಗಳ ಬೆಲೆ ಅರಿತು ಅನುಸರಿಸುವಂತವರಾಗೋಣ.
-ವಾಣಿ
ಮೈಸೂರು