ಕಾಲನ ಕಾಲ್ತುಳಿತಕ್ಕೆ ಸಿಕ್ಕಿ ನನ್ನ ಅದೆಷ್ಟೊ ಆಸೆಗಳು ಅಸುನೀಗಿವೆ. ಆದರೆ, ಹೇಳದೇ ಉಳಿದ ನಿನ್ನ ಮೇಲಿನ ಆ ಪ್ರೀತಿ ಮಾತ್ರ ಚೂರೇ ಚೂರೂ ಬದಲಾಗಿಲ್ಲ. ಗರ್ಭದೊಳಗಿನ ಭ್ರೂಣದಂತೆ ನನ್ನೆದೆಯೊಳಗೆ ಬೆಚ್ಚಗೆ ಮಗ್ಗಲು ಬದಲಿಸದೆ ಮಲಗಿಬಿಟ್ಟಿದೆ.
ಕನಸು ಕಂಡಷ್ಟು ಸಲೀಸಲ್ಲ ನೋಡು, ಆ ಕನಸನ್ನು ನನಸಾಗಿಸಿಕೊಳ್ಳುವುದು. ನನ್ನ ಪಾಲಿಗೆ ನೀನೊಂದು ನನಸಾದ ಕನಸು. ಅದ್ಯಾವ ಸುಂದರ ಘಳಿಗೆಯಲ್ಲಿ ನಿನ್ನಂಥ ಸುಂದರ ಕನಸನ್ನು ನನ್ನ ನಿದಿರೆಯ ಅಂಗಳಕ್ಕೆ ಎಳೆದುಕೊಂಡೆನೋ ಗೊತ್ತಿಲ್ಲ. ಮರುಕ್ಷಣದಲ್ಲಿ ನೀನು ಎದುರಿಗೆ ಬಂದು ನಿಂತಿದ್ದೆ. ಆ ದಿನವೇ, ಆ ಕ್ಷಣವೇ ನನ್ನ ಹೃದಯದ ಊರನ್ನು ನಿನ್ನ ಹೆಸರಿಗೆ ಬರೆದುಕೊಟ್ಟು, ನಿನ್ನ ಮುಂದೆ ಮಂಡಿಯೂರಿ ಕುಳಿತುಬಿಟ್ಟೆ. ಅಂದಿನಿಂದ ಮನದ ಬೀದಿಯಲೆಲ್ಲಾ ನಿನ್ನದೇ ಕನಸಿನ ಜಾತ್ರೆ, ಎದೆಯಂಗಳದ ತುಂಬೆಲ್ಲಾ ನಿನ್ನದೇ ನಗುವಿನ ಬಣ್ಣಬಣ್ಣದ ರಂಗವಲ್ಲಿ.
ಆ ಕ್ಷಣದಿಂದಲೇ ಶುರುವಾಗಿದ್ದು ಈ ಬದುಕೆಂಬ ದೊಂಬರನ ಜೊತೆಗಿನ ನನ್ನ ಬಡಿದಾಟ. ನಿಂತಲ್ಲಿ ನಿಲ್ಲಲಾಗುತ್ತಿಲ್ಲ, ಕುಂತಲ್ಲಿ ಕೂರಲಾಗುತ್ತಿಲ್ಲ, ಜೋರಾಗಿ ಉಸಿರಾಡುವುದಕ್ಕೂ ಹೆದರುವಂತಾಗಿ ಹೋಗಿತ್ತು. ಹಸಿವು ನಿದಿರೆಯ ಹಂಗು ತೊರೆದು ನಿನ್ನ ಪ್ರೀತಿಯನ್ನು ದಕ್ಕಿಸಿಕೊಳ್ಳಲು ಇನ್ನಿಲ್ಲದಂತೆ ಪರದಾಡಿಬಿಟ್ಟೆ. ನನ್ನೆಲ್ಲಾ ಕರ್ತವ್ಯಗಳನ್ನು ಬದಿಗೊತ್ತಿ ನಿನ್ನ ಪ್ರತೀ ಹೆಜ್ಜೆಯನ್ನು ಹಿಂಬಾಲಿಸಿದೆ. ಆದರೆ ಆ ವಿಧಿಯ ನಿರ್ಧಾರವೇ ಬೇರೆಯಾಗಿತ್ತು. ನೀನು ನನ್ನ ಪ್ರೀತಿಸುವ ಮಾತು ಒತ್ತಟ್ಟಿಗಿರಲಿ, ನನ್ನೆಡೆಗೆ ಕಿರುಗಣ್ಣಿನಲ್ಲಿ ನೋಡುವ ಮನಸ್ಸೂ ಮಾಡಲಿಲ್ಲ.
ಇಡೀ ಜಗತ್ತಿನ ನೋವನ್ನು ಸ್ವಂತ ನೋವು ಎಂದು ನೀನು ಅನುಭವಿಸುತ್ತಿದ್ದಾಗ, ಅದರಲ್ಲಿ ಯಾವುದಾದರೊಂದು ನೋವು ನನಗೆ ಬರಬಾರದೆ ಎಂದು ಪ್ರಾರ್ಥಿಸಿದ್ದೆ. ಪ್ರಯೋಜನವಾಗಲಿಲ್ಲ, ಜಗತ್ತನ್ನೇ ಬೆದರಿಸುವ ನೋವಿಗೆ ನನ್ನಂಥ ಪಾಪದ ಹೆಣ್ಣು ಜೀವವನ್ನು ತಾಕುವ ಧೈರ್ಯ ಬರಲೇ ಇಲ್ಲ.
ಅದೇನೇ ಆದರೂ, ನಿನ್ನೆಡೆಗೆ ಹೊರಟು ನಿಂತಿದ್ದ ನನ್ನ ಹಾದಿಯನ್ನು ಬದಲಾಯಿಸುವ ಮನಸ್ಸು ಮಾಡಲೇ ಇಲ್ಲ. ಹಠ ಹಿಡಿದವಳಂತೆ ಮನದ ಹೊಸ್ತಿಲಿಗೆ ಒಲವ ತೋರಣ ಕಟ್ಟಿ, ಬಾಗಿಲು ತೆರೆದಿಟ್ಟು ಕಾಯುತ್ತಾ ಕುಳಿತೆ, ಮನದ ಮಂಟಪದೊಳಗೆ ನೀನು ಬಲಗಾಲನ್ನಿಟ್ಟು ಬರುವೆಯೆಂಬ ಭರವಸೆಯಲ್ಲಿ. ನೀನು ಮಾತ್ರ ಸಂಬಂಧವೇ ಇಲ್ಲದವನಂತೆ ನಿನ್ನ ದಾರಿ ಹಿಡಿದು ಹೊರಟುಬಿಟ್ಟೆ. ನನ್ನ ಕಣ್ಣ ರೆಪ್ಪೆಗಳು ಭಾರವಾಗಿ, ಎದೆಯಂಗಳದ ತುಂಬ ಕಪ್ಪನೆಯ ಕಾರ್ಮೋಡ ಸರಿದಾಡುತ್ತಿತ್ತು. ಓಡೋಡಿ ಬಂದು ನಿನ್ನನ್ನೊಮ್ಮೆ ಬಿಗಿಯಾಗಿ ಅಪ್ಪಿ, “ಹೇಳದೆ ಉಳಿದದ್ದು ತಪ್ಪಾಗಿದೆ ಎನ್ನ ದೊರೆಯೇ ಒಪ್ಪಿಸಿಕೊಂಡು ಬಿಡು ಎನ್ನ’ ಎಂದು ಇಡೀ ಜಗತ್ತಿಗೆ ಕೇಳುವಂತೆ ಕೂಗಿಬಿಡೋಣ ಎಂದುಕೊಂಡೆ. ಆದರೆ, ಅತ್ತು ಕರೆದು ರಂಪ ಮಾಡಿ, ನಿನ್ನ ಕಣ್ಣೆದುರು ತಲೆತಗ್ಗಿಸಿ ನಿಲ್ಲಲು ಅಂಜಿಕೆಯಾಗಿ ಸುಮ್ಮನಾದೆ.
ನೀನು ಮತ್ತೆ ಎದುರಾಗಿದ್ದು ನನ್ನ ಅರ್ಧ ಬದುಕಿನ ಹಾದಿಯ ತಿರುವೊಂದರಲ್ಲಿ. ಅಷ್ಟೊತ್ತಿಗೆ ಮತ್ತೆ ನಿನ್ನನ್ನು ಕಾಣುತ್ತೇನೆಂಬ ಸಣ್ಣ ನಂಬಿಕೆಯೂ ನನ್ನಲ್ಲಿ ಉಳಿದಿರಲಿಲ್ಲ. ಮರಗಟ್ಟಿದ್ದ ಮನಸ್ಸಿಗೆ ಹೊಸ ಕನಸುಗಳನ್ನು ಅರಗಿಸಿಕೊಳ್ಳುವ ಶಕ್ತಿ ಕುಂದಿಹೋಗಿತ್ತು. ಬದುಕೆಂದರೆ ಇಷ್ಟೇ ಎಂದು ನನಗೆ ನಾನೇ ಸಂತೈಸಿಕೊಂಡು, ಹೆಜ್ಜೆ ಮುಂದಿಟ್ಟು ವರುಷಗಳೇ ಉರುಳಿ ಹೋಗಿದ್ದವು. ನೀನು ಹಿಂತಿರುಗಿದ ದಿನವನ್ನು ಅದ್ಹೇಗೆ ಸಂಭ್ರಮಿಸಲಿ ಹೇಳು? ಕಾಲನ ಕಾಲು¤ಳಿತಕ್ಕೆ ಸಿಕ್ಕಿ ನನ್ನ ಅದೆಷ್ಟೋ ಆಸೆಗಳು ಅಸುನೀಗಿವೆ. ಆದರೆ, ಹೇಳದೇ ಉಳಿದ ನಿನ್ನ ಮೇಲಿನ ಆ ಪ್ರೀತಿ ಮಾತ್ರ ಚೂರೇ ಚೂರೂ ಬದಲಾಗಿಲ್ಲ. ಗರ್ಭದೊಳಗಿನ ಭ್ರೂಣದಂತೆ ನನ್ನೆದೆಯೊಳಗೆ ಬೆಚ್ಚಗೆ ಮಗ್ಗಲು ಬದಲಿಸದೆ ಮಲಗಿಬಿಟ್ಟಿದೆ. ಜಗತ್ತಿನ ಅರಿವಿಗೆ ಬಾರದ ಪ್ರತಿಯೊಂದೂ ಕೌತುಕವೇ. ನನ್ನ ಪ್ರೀತಿಯೂ ಸಹ ನಿನ್ನ ಪಾಲಿಗೆ ಕೌತುಕವಾಗೇ ಉಳಿದುಬಿಡಲಿ. ಇತ್ತೀಚೆಗಷ್ಟೆ ಹೃದಯ ಬಿಕ್ಕುವುದ ಮರೆತು ಚೇತರಿಸಿಕೊಳ್ಳುತ್ತಿದೆ. ನಿನ್ನ ಬಿಸಿಯುಸಿರು ಸಣ್ಣಗೆ ನನ್ನ ಮೈ ಸವರಿದರೂ ಸಾಕು; ಮರುಕ್ಷಣವೆ ನಾನು ನಾನಾಗಿರದೆ ನನ್ನೊಳಗಿಲ್ಲದ ನೀನಾಗಿಬಿಡುತ್ತೇನೆ. ಸುಟ್ಟ ಗಾಯದ ಮೇಲೆ ಉಪ್ಪು ಸವರುವುದು ಸರಿಯಾ, ನೀನೇ ನಿರ್ಧರಿಸು.
ಸತ್ಯಾ ಗಿರೀಶ್