ಹೊಸದಿಲ್ಲಿ : ಪೆಟ್ರೋಲ್ ಮತ್ತು ಡೀಸಿಲ್ ದರಗಳನ್ನು ತೈಲ ಮಾರಾಟ ಕಂಪೆನಿಗಳು 1 ಪೈಸೆಯಷ್ಟು ಇಳಿಸಿರುವುದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ “ಇದು ಪ್ರಧಾನಿ ನರೇಂದ್ರ ಮೋದಿ ಅವರ ಕಳಪೆ ಅಭಿರುಚಿಯ ಮಕ್ಕಳಾಟ’ ಎಂದು ಲೇವಡಿ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರು ಪ್ರಧಾನಿಯವರನ್ನು ದೂಷಿಸಲು ಎಂದಿನಂತೆ ಟ್ವಿಟರ್ ಬಳಸಿಕೊಂಡು ಈ ಪ್ರತಿಕ್ರಿಯೆ ನೀಡಿದ್ದಾರೆ.
“ಪ್ರಿಯ ಪ್ರಧಾನಿಯವರೇ, ನೀವು ಪೆಟ್ರೋಲ್ ಮತ್ತು ಡೀಸಿಲ್ ದರವನ್ನು 1 ಪೈಸೆಯಷ್ಟು ಇಳಿಸಿದ್ದೀರಿ. ಒಂದು ಪೈಸೆ ! ಇದು ನಿಮ್ಮ ಚೋದ್ಯದ ಆಲೋಚನೆ ಹೌದೆಂದಾದರೆ, ಇದು ಬರೀ ಕಳಪೆ ಅಭಿರುಚಿಯ ಮಕ್ಕಳಾಟ. ಕಳೆದ ವಾರ ನಾನು ನಿಮಗೆ ಹಾಕಿದ್ದ ಇಂಧನ ಚ್ಯಾಲೆಂಜ್‌ಗೆ ಒಂದು ಪೈಸೆ ಕಡಿತ ಸರಿಯಾದ ಉತ್ತರವಲ್ಲ” ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಐಓಸಿ ವೆಬ್‌ಸೈಟ್‌ನಲ್ಲಿ ಇಂದು ದಿಲ್ಲಿ ಮತ್ತು ಮುಂಬಯಿ ಯಲ್ಲಿ ಪೆಟ್ರೋಲ್ ಮತ್ತು ಡೀಸಿಲ್ ದರಗಳು ಅನುಕ್ರಮವಾಗಿ ಲೀಟರ್‌ಗೆ 60 ಮತ್ತು 59 ಪೈಸೆ ಇಳಿದಿರುವುದಾಗಿ ಪ್ರಕಟಿಸಲಾಗಿತ್ತು.
ಅದಾಗಿ ಸ್ವಲ್ಪವೇ ಹೊತ್ತಿನ ಬಳಿಕ ಐಓಸಿ ತನ್ನ ಈ ಪ್ರಕಟನೆಯನ್ನು ಸರಿಪಡಿಸಿ ಪೆಟ್ರೋಲ್ , ಡೀಸಿಲ್ ದರ ಕೇವಲ 1 ಪೈಸೆ ಇಳಿದಿರುವುದಾಗಿ ಸ್ಪಷ್ಟಪಡಿಸಿತು.
ಅಂತೆಯೇ ನಾಲ್ಕು ಮೆಟ್ರೋಪಾಲಿಟನ್ ನಗರಗಳಾಗಿರುವ ದಿಲ್ಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರಿಗೆ ಅನುಕ್ರಮವಾಗಿ 78.42, 81.05, 86.25 ಮತ್ತು 81.42 ರೂ ಇರುವುದಾಗಿ ಐಓಸಿ ಅಧಿಕೃತವಾಗಿ ಹೇಳಿದೆ.
ಹಾಗೆಯೇ ದಿಲ್ಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಡೀಸಿಲ್ ಲೀಟರ್ ದರ ಅನುಕ್ರಮವಾಗಿ 69.30, 71.85, 73.78 ಮತ್ತು 73.17 ರೂ. ಇರುವುದಾಗಿ ಅದು ತಿಳಿಸಿತು.