ಕೆ.ಆರ್.ಪೇಟೆ: ಪಟ್ಟಣದಲ್ಲಿ ಸರ್ಕಾರಿ ಜಾಗಗಳ ಒತ್ತುವರಿ ಮಾಡಿಕೊಂಡು ಪರವಾನಗಿ ಪಡೆಯದೆ ಅಕ್ರಮ ಕಟ್ಟಡಗಳು ತಲೆ ಎತ್ತಿರುವುದರಿಂದ ಪಟ್ಟಣದ ಸೌಂದರ್ಯ, ಸ್ವಚ್ಛತೆ ಹಾಳಾಗುವ ಜೊತೆಗೆ ಸುಗಮ ಸಂಚಾರಕ್ಕೆ ಕಿರಕಿರಿ ಉಂಟು ಮಾಡುತ್ತಿವೆ.
23 ವಾರ್ಡ್‌ಗಳ ಹೊಂದಿರುವ ಕೆ.ಆರ್.ಪೇಟೆ ಪುರಸಭೆ ಪಟ್ಟಣ ಮತ್ತು ಹೊಸಹೊಳಲು ಗ್ರಾಮದವರೆಗೆ ವ್ಯಾಪ್ತಿ ಹೊಂದಿದೆ. ಜಯನಗರ ಬಡಾವಣೆ, ನಾಗಮಂಗಲ ರಸ್ತೆ, ಹೊಸ ಕಿಕ್ಕೇರಿ ರಸ್ತೆ ಸೇರಿದಂತೆ ಇತರೆಡೆಗಳಲ್ಲಿ ಸರ್ಕಾರಿ ಸ್ಥಳಗಳಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತಿರುವುದು ಪಟ್ಟಣದಲ್ಲಿ ಪಟ್ಟಣದ ಅಭಿವೃದ್ಧಿಗೆ ಅಡಚಣೆಯಾಗಿದೆ.
ರಸ್ತೆಗೆ ಕೊಳಚೆ ನೀರು: ಏಕೆಂದರೆ ಮಾಲೀಕರು ತಮ್ಮ ನಿವೇಶನಕ್ಕಿಂತಲೂ ಹೆಚ್ಚು ಪ್ರದೇಶ ಆವರಿಸಿಕೊಂಡು ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಜೊತೆಗೆ ಇನ್ನೂ ಪೂರ್ಣಗೊಳ್ಳದ ಒಳ ಚರಂಡಿಗೆ ನೇರ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ. ಕಟ್ಟಡದ ಶೌಚಾಲಯದ ನೀರು ಪೈಪ್ ಮೂಲಕ ರಸ್ತೆಯ ಮಧ್ಯಭಾಗದಲ್ಲಿರುವ ಮ್ಯಾನ್‌ಹೋಲ್ನಿಂದ ಕೊಳಚೆ ನೀರು ಹೊರಬಂದು ರಸ್ತೆಯಲ್ಲಿ ಹರಿಯುತ್ತದೆ.
ರಸ್ತೆ ಒತ್ತುವರಿ: ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಅಕ್ರಮವಾಗಿ ನೂರಾರು ನಿವೇಶನಗಳ ವಿತರಣೆ ಮಾಡಿರುವ ಬಗ್ಗೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ಮುಗಿಯುವವರೆಗೂ ಹೇಮಾವತಿ ಬಡಾವಣೆಯಲ್ಲಿ ಮನೆ ನಿರ್ಮಾಣ, ನಿವೇಶನ ಮಾರಾಟ ಸೇರಿದಂತೆ ಯಾವುದೇ ಬದಲಾವಣೆ ಮಾಡಬಾರದು ಎಂದು ಲೋಕಾಯುಕ್ತ ಅಧಿಕಾರಿಗಳು ಸೂಚಿಸಿ, ಕಟ್ಟಡ ನಿರ್ಮಾಣಕ್ಕೂ ತಡೆ ಒಡ್ಡಿದ್ದಾರೆ.
ಅಧಿಕಾರಿಗಳ ಕುಮ್ಮಕ್ಕು: ಹೇಮಗಿರಿ ರಸ್ತೆಯಲ್ಲಿ ಸುಮಾರು 5 ಲಕ್ಷ ಖರ್ಚು ಮಾಡಿ ಹಾಕಿಸಿದ್ದ ಆರ್‌ಸಿಸಿಯನ್ನೇ ಜೆಸಿಬಿಯಿಂದ ಕೆಡವಿ ಹಾಕಿದ್ದರು. ಆದರೂ ಪುರಸಭೆಯ ಕೆಲ ಅಧಿಕಾರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ಮನೆ ಮಾಲೀಕರು ಹೇಮಾವತಿ ಬಡಾವಣೆಯಲ್ಲಿ ಮನೆ ನಿರ್ಮಾಣಕ್ಕೆ ಯಾವುದೇ ಪರವಾನಗಿ ಪಡೆಯದಿದ್ದರೂ ಅಕ್ರಮವಾಗಿ ಮನೆ ನಿರ್ಮಾಣ ಮಾಡುವ ಜೊತೆಗೆ ಚರಂಡಿಯನ್ನೂ ದಾಟಿ ರಸ್ತೆಯಲ್ಲಿ ಪಿಲ್ಲರ್ ಹಾಕಿಕೊಂಡು ಮನೆ ನಿರ್ಮಾಣ ಮಾಡುತ್ತಿದ್ದಾರೆ.
ಮತ್ತೆ ಕೆಲವರು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡಗಳ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತದೆ ಎಂದು ಸ್ಥಳೀಯರು ಹಲವಾರು ದೂರು ನೀಡಿದ್ದರೂ ಅಧಿಕಾರಿಗಳು ಜಾಣಕುಡುರು ಪ್ರದರ್ಶಿಸಿ ಅಕ್ರಮ ಮಾಡುತ್ತಿರುವವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಪುರಸಭೆಗೆ 50 ಲಕ್ಷ ನಷ್ಟ: ನೂರಾರು ವರ್ಷಗಳ ಹಿಂದೆ ನಿರ್ಮಿಸಿರುವ ಹಳೆ ಮನೆಗಳಿಗೆ ತೆರಿಗೆ ವಸೂಲಿ ಮಾಡುವ ಅಧಿಕಾರಿಗಳು ಅಕ್ರಮವಾಗಿ ವಾಣಿಜ್ಯ ಮತ್ತು ಮನೆಗಳ ನಿರ್ಮಾಣ ಮಾಡಿಕೊಂಡು ಮಾಸಿಕ ಲಕ್ಷಾಂತರ ರೂ. ಬಾಡಿಗೆ ಪಡೆಯುವವರಿಂದ ತೆರಿಗೆ ವಸೂಲಿ ಮಾಡುವುದಿಲ್ಲ. ಇದರಿಂದ ವಾರ್ಷಿಕ ಕನಿಷ್ಟ 50 ಲಕ್ಷ ರೂ.ಪುರಸಭೆಗೆ ನಷ್ಟವಾಗುತ್ತಿದೆ. ಇದಕ್ಕೆ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯವೇ ಕಾರಣ.
● ಎಚ್.ಬಿ.ಮಂಜುನಾಥ್