ವಿಜಯಪುರ: ರಾಜ್ಯದಲ್ಲಿ ಕೈಗೊಂಡಿರುವ ಹಲವು ನೀರಾವರಿ ಯೋಜನೆಗೆ ಕೇಂದ್ರದಿಂದ ಎರಡು ವರ್ಷವಾದರೂ ನೆರವು ಬಂದಿಲ್ಲ.ಪರಿಣಾಮ ರಾಜ್ಯದ ಜಲ ಸಂಪನ್ಮೂಲ ಇಲಾಖೆ ಸಂಕಷ್ಟಕ್ಕೆ ಸಿಲುಕಿದೆ ಎಂದು ಜಲ ಸಂಪನ್ಮೂಲ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.
ನಗರದಲ್ಲಿ ಬುಧವಾರ ಆರಂಭಗೊಂಡ “ಬರಮುಕ್ತ ಭಾರತ’ಕ್ಕಾಗಿ ಹಮ್ಮಿಕೊಂಡಿರುವ ರಾಷ್ಟ್ರೀಯ ಜಲ ಸಂರಕ್ಷಣೆ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ನಾನು ರಾಜಕೀಯ ಆರೋಪ ಮಾಡುತ್ತಿಲ್ಲ, ರಾಜ್ಯದ ಸ್ಥಿತಿ ವಿವರಿಸುತ್ತಿದ್ದೇನೆ. ರಾಜ್ಯದ ನೀರಾವರಿಗಾಗಿ ಕಳೆದ ಎರಡು ವರ್ಷಗಳಿಂದ ಕೇಂದ್ರದಿಂದ ಬರಬೇಕಿರುವ 1,500 ಕೋಟಿ ರೂ. ಆರ್ಥಿಕ ನೆರವು ಬಂದಿಲ್ಲ, ರಾಜ್ಯದ ಮಟ್ಟಿಗೆ ಕೃಷ್ಣಾ ನ್ಯಾಯಾ ಧಿಕರಣದಿಂದ ಅನ್ಯಾಯವಾಗಿದೆ’ ಎಂದು ದೂರಿದ ಸಚಿವರು, “ಅಂತಾರಾಜ್ಯ ಜಲವಿವಾದ ಇತ್ಯರ್ಥಕ್ಕೆ ರಚನೆಗೊಳ್ಳುವ ನ್ಯಾಯಾ ಧಿಕರಣಗಳು ಆದೇಶ ನೀಡುವಲ್ಲಿ ವಿಳಂಬ ಮಾಡುತ್ತಿದ್ದು, ನೀರಾವರಿ ಯೋಜನೆ ಅನುಷ್ಠಾನದಲ್ಲಿ ಅನಗತ್ಯ ಹಿನ್ನಡೆ ಆಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸಂತ್ರಸ್ತರಾದರೂ ನೀರು ಸಿಕ್ಕಿಲ್ಲ: ವಿಜಯಪುರ ಜಿಲ್ಲೆಯಲ್ಲಿ ಬ್ರಿಟಿಷರ ಕಾಲದಲ್ಲೇ ಬರ ನಿವಾರಣಾ ಕೇಂದ್ರ ಸ್ಥಾಪನೆ ಆಗಿರುವುದು ಜಿಲ್ಲೆಯ ಸ್ಥಿತಿಗೆ ಸಾಕ್ಷಿ. ಮತ್ತೂಂದೆಡೆ ಕೃಷ್ಣಾ ಮೇಲ್ದಂಡೆ ಯೋಜನೆ ಜಲಾಶಯ ನಿರ್ಮಾಣಕ್ಕಾಗಿ ಅವಿಭಜಿತ ವಿಜಯಪುರ ಜಿಲ್ಲೆ 2 ಲಕ್ಷ ಎಕರೆ ಜಮೀನು ಕಳೆದುಕೊಂಡು ಸಂತ್ರಸ್ತವಾಗಿದೆ. ಇದೀಗ ಜಲಾಶಯ ಎತ್ತರದಿಂದ ಮತ್ತೆ 75 ಸಾವಿರ ಎಕರೆ ಜಮೀನು ಕಳೆದುಕೊಂಡರೂ ಸಂತ್ರಸ್ತ ಜಿಲ್ಲೆಗೆ ನೀರಾವರಿ ಸೌಲಭ್ಯ ದೊರಕಿರಲಿಲ್ಲ ಎಂದು ಹೇಳಿದರು.
ಮಹದಾಯಿ ನದಿಯ ಸುಮಾರು 200 ಟಿಎಂಸಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿಯುತ್ತಿದೆ. ರಾಷ್ಟ್ರೀಯ ಜಲ ಸಂಪತ್ತು ವ್ಯರ್ಥವಾಗಲು ನ್ಯಾಯಾಧಿಕರಣದ ವಿಳಂಬ ನಡೆಯೇ ಕಾರಣ. ಹೀಗಾಗಿ, ರಾಷ್ಟ್ರೀಯ ಸಂಪತ್ತಾಗಿರುವ ನದಿಗಳ ಜಲ ಸದ್ಬಳಕೆ ವಿಷಯದಲ್ಲಿ ಜನಾಗ್ರಹದ ಅಗತ್ಯವಿದೆ.
– ಎಚ್.ಕೆ. ಪಾಟೀಲ, ಗ್ರಾಮೀಣಾಭಿವೃದ್ಧಿ ಸಚಿವ