Advertisement

ರೈತರಲ್ಲಿ ಸಂತಸ ಅರಳಿಸಿದ ಏತ ನೀರಾವರಿ

10:43 AM Dec 18, 2019 | Suhan S |

ನವಲಗುಂದ: ಕಳಸಾ ಬಂಡೂರಿ,ಮಹದಾಯಿ ಹೋರಾಟ ಯಾವಾಗ ತಾರ್ಕಿಕ ಅಂತ್ಯ ಕಾಣುತ್ತದೆಯೋ ಗೊತ್ತಿಲ್ಲ. ಅದಕ್ಕೂ ಮುಂಚೆಯೇ ತಾಲೂಕಿನ ಅಮರಗೋಳ ಹಾಗೂ ಗೊಬ್ಬರಗುಂಪಿ ಗ್ರಾಮಗಳಲ್ಲಿ ಏತ ನೀರಾವರಿ ಯೋಜನೆ ಮೂಲಕ 10 ಸಾವಿರ ಎಕರೆಗೆ ನೀರುಣಿಸುವ ಮಹತ್ತರ ಕಾರ್ಯಕ್ಕೆ ಸ್ಥಳೀಯ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಪಣತೊಟ್ಟು ನಿಂತಿದ್ದಾರೆ. ಈ ಭಾಗದ ರೈತರು ಹೋರಾಟಕ್ಕೆ ಸದಾ ಮುಂಚೂಣಿಯಲ್ಲಿದ್ದವರು.

Advertisement

ನೀರಿನ ಹೋರಾಟವಂತೂ ಸತತ ನಲವತ್ತು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ.ತಾಲೂಕಿನಲ್ಲಿ ಕಾಲುವೆ ನೀರು ಬಂದರೂ ಕಟ್ಟಕಡೆಯ ಗ್ರಾಮಗಳಿಗೆ ನೀರು ತಲುಪುವುದು ಅಷ್ಟಕ್ಕಷ್ಟೆ. ಹೀಗಾಗಿ ಗಡಿಯಂಚಿನ ರೈತರು ಮಳೆಯಾಶ್ರಿತದಿಂದ ಬೆಳೆ ತೆಗೆದುಕೊಳ್ಳುತ್ತಿದ್ದರು. ಸತತ ಐದು ವರ್ಷಗಳಿಂದ ಬರಗಾಲ-ಅತಿವೃಷ್ಟಿಯಿಂದ ಕಂಗೆಟ್ಟಿದ್ದು, ಮುಂದೊಂದು ದಿನ ಸದವಕಾಶ ಕೂಡಿ ಬರಲಿದೆ ಎಂಬ ಮಹದಾಸೆಗೆ ಈಗ ಕಾಲ ಕೂಡಿಬಂದಿದೆ.

ಶಾಸಕ ಶಂಕರಪಾಟೀಲ ಇಚ್ಛಾಶಕ್ತಿ ಫಲವಾಗಿ ಅಮರಗೋಳ ಹಾಗೂ ಗೊಬ್ಬರಗುಂಪಿ ಏತ ನೀರಾವರಿ ಯೋಜನೆ ಲೋಕಾರ್ಪಣೆಗೊಳ್ಳುತ್ತಿದೆ. 2012 ಜು. 21ರಂದು ಅಳಗವಾಡಿಯಲ್ಲಿ ಅಂದಿನ ಸಿಎಂ ಜಗದೀಶ ಶೆಟ್ಟರ ಭೂಮಿಪೂಜೆ ನೆರವೇರಿಸಿದ್ದ ಯೋಜನೆ ಆರು ವರ್ಷಗಳ ನಂತರ ಕಾರ್ಯಗತವಾಗಿ ಉದ್ಘಾಟನೆಗೊಳ್ಳುತಿದೆ. ದಿ| ಸಿದ್ದು ನ್ಯಾಮೇಗೌಡರು ಚಿಕ್ಕಪಡಸಲಗಿ ಬ್ಯಾರೇಜ್‌ ನಿರ್ಮಾಣ ಮಾಡಿ ಜನಮನದಲ್ಲಿ ಉಳಿದಂತೆ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹಳ್ಳದ ನೀರನ್ನು ಏತ ನೀರಾವರಿಗೆ ಬಳಕೆಮಾಡಿ ರೈತರ ಬಾಳು ಬೆಳಗಿದ್ದಾರೆ. ನೆರೆಯ ರಾಜ್ಯದವರು ಸಹ ಯೋಜನೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಏತ ನೀರಾವರಿಯಿಂದ ನೀರು ಬಂದರಷ್ಟೇ ಸಾಲದು ಎಂಬುದನ್ನು ಅರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಗಳಲ್ಲಿಯ ಉಪಕಾಲುವೆಗಳ ಆಧುನೀಕರಣಕ್ಕಾಗಿ ಶಾಸಕರು ಮುಂದಾಗಿದ್ದಾರೆ. ಸಾವಿರ ಕೋಟಿಯ ನವೀಕರಣ ಕಾಮಗಾರಿಗೂ ಮಂಜೂರಾತಿ ದೊರೆತಿದ್ದು, ಇದೇ ಸಮಯದಲ್ಲಿ ಕೆಲಸಕ್ಕೆ ಚಾಲನೆ ದೊರಕುತ್ತಿದೆ.

ಅಮರಗೋಳ ಏತ ನೀರಾವರಿ ಯೋಜನೆ:ಬೆಣ್ಣೆಹಳ್ಳ ಬಳಸಿ 22 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಒಟ್ಟು 4,653 ಎಕರೆ ಪ್ರದೇಶ ನೀರಾವರಿ ವ್ಯಾಪ್ತಿಗೊಳಪಡಲಿದೆ. ಅಮರಗೋಳ, ಅಳಗವಾಡಿ ಹಾಗೂ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮಗಳಿಗೆ ಅನುಕೂಲವಾಗಲಿದೆ. ಯೋಜನೆಗಾಗಿ 36 ಎಕರೆ ಭೂಮಿಯನ್ನು ಬೆಣ್ಣೆಹಳ್ಳದ ದಂಡೆಯಲ್ಲಿ ಪಡೆದು ಇಲ್ಲಿಂದ ನರಗುಂದ ಶಾಖಾ ಕಾಲುವೆ ಡಿ-6, ಹಂಚಿಕೆಯ 17ನೇ ಎಲ್‌-ಉಪಕಾಲುವೆ ವರೆಗೆ 7 ಕಿಮೀ ರೇಸಿಂಗ್‌ ಮೇನ್‌ ಪೈಪ್‌ ಲೈನ್‌ ಅಳವಡಿಕೆ ಮಾಡಲಾಗಿದೆ. ನೀರೆತ್ತಲು 540 ಎಚ್‌ಪಿ ಸಾಮರ್ಥ್ಯದ ಪಂಪ್‌ಗ್ಳು ಇವೆ.

ಗೊಬ್ಬರಗುಂಪಿ ಏತ ನೀರಾವರಿ ಯೋಜನೆ: ತುಪ್ಪರಿ ಹಳ್ಳ ಬಳಸಿ 16 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನ ಮಾಡಲಾಗಿದೆ. ಯೋಜನೆಯಿಂದ ಗೊಬ್ಬರಗುಂಪಿ, ಶಾನವಾಡ ಹಾಗೂ ಬೆಳವಟಗಿ ಗ್ರಾಮದ 5 ಸಾವಿರ ಎಕರೆ ಜಮೀನು ನೀರಾವರಿಗೆ ಒಳಪಡಲಿದೆ. ಗೊಬ್ಬರಗುಂಪಿ-ಅಮರಗೋಳ ಎರಡು ಪ್ಯಾಕೇಜ್‌ ಸೇರಿ ಒಟ್ಟು 48.08 ಕೋಟಿ ನಿಗದಿಯಾಗಿತ್ತು. ಬಳಿಕ ಹೆಚ್ಚುವರಿಯಾಗಿ 6.20 ಕೋಟಿ ಬಳಕೆಯಾಗಿದ್ದು, ಒಟ್ಟು 54 ಕೋಟಿ ರೂ.ಗಳಲ್ಲಿ ಎರಡೂ ಏತ ನೀರಾವರಿ ಯೋಜನೆ ಪೂರ್ಣಗೊಂಡಿದೆ.

Advertisement

 

-ಪುಂಡಲೀಕ ಮುಧೋಳೆ

Advertisement

Udayavani is now on Telegram. Click here to join our channel and stay updated with the latest news.

Next