Advertisement

ನೀರಾವರಿ ಯೋಜನೆ: ಮೋದಿ ಜತೆ ಚರ್ಚೆ

11:11 PM Aug 06, 2019 | Lakshmi GovindaRaj |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರದ ಹಲವು ಸಚಿವರನ್ನು ಮಂಗಳವಾರ ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ರಾಜ್ಯದ ಅಭಿವೃದ್ಧಿಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಚರ್ಚಿಸಿದರು. ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್‌ ಜೋಶಿ, ಶಾಸಕರಾದ ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಜತೆ ಪ್ರಧಾನಿಯನ್ನು ಭೇಟಿ ಮಾಡಿದ ಯಡಿಯೂರಪ್ಪ, ರಾಜ್ಯದ ನೀರಾವರಿ ಯೋಜನೆಗಳು ಹಾಗೂ ಇತರ ಪ್ರಮುಖ ವಿಚಾರಗಳ ಬಗ್ಗೆ ಪ್ರಧಾನಿ ಜತೆ ಮಾತುಕತೆ ನಡೆಸಿದರು.

Advertisement

ಕೃಷ್ಣಾ ಜಲವಿವಾದ ನ್ಯಾಯಾಧಿಕರಣ-2ರ ವರದಿ, ಮಹದಾಯಿ ಜಲವಿವಾದ ನ್ಯಾಯಾಧಿಕರಣದ ವರದಿ ಸಂಬಂಧ ಗೆಜೆಟ್‌ ಅಧಿಸೂಚನೆ ಹೊರಡಿಸಬೇಕು. ಮೇಕೆದಾಟು ಕುಡಿಯುವ ನೀರು ಹಾಗೂ ಸಮ ತೋಲಿತ ಜಲಾಶಯ ನಿರ್ಮಾಣ ಯೋಜನೆಯ ಸಮಗ್ರ ಯೋಜನಾ ವರದಿಗೆ ಅನುಮೋದನೆ ನೀಡಬೇಕೆಂದು ಮನವಿ ಮಾಡಿದರು. ಜತೆಗೆ, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತವನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ, ಆರ್ಥಿಕ ನೆರವು ನೀಡಬೇಕು. ಹುಬ್ಬಳ್ಳಿ- ಧಾರವಾಡದಲ್ಲಿ ಅಖೀಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ ಸ್ಥಾಪಿಸಬೇಕೆಂದು ಪ್ರಧಾನಿಯನ್ನು ಕೋರಿದರು.

ನಡ್ಡಾ ಭೇಟಿ: ಯಡಿಯೂರಪ್ಪ ಅವರು ಸಂಸತ್‌ ಭವನದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು ಎಂದರು.

ನೀಲನಕ್ಷೆ ಬದಲಾವಣೆಗೆ ಸೂಚನೆ: ನವದೆಹಲಿಯಲ್ಲಿನ ಕರ್ನಾಟಕ ಭವನದ ನೂತನ ಕಟ್ಟಡ ನಿರ್ಮಾಣ ಪ್ರಗತಿ ಕುರಿತು ಮಂಗಳವಾರ ಬೆಳಗ್ಗೆ ಸಭೆ ನಡೆಸಿದ ಮುಖ್ಯಮಂತ್ರಿ, ನೂತನ ಕರ್ನಾಟಕ ಭವನದಲ್ಲಿ ರಾಜ್ಯದ ಸಂಸ್ಕೃತಿ ಬಿಂಬಿಸಲು, ಅತಿಥಿ ಸತ್ಕಾರಕ್ಕೆ ಹೆಚ್ಚು ಕೊಠಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡಿ, ನೀಲನಕ್ಷೆ ಬದಲಾವಣೆ ಮಾಡಬೇಕೆಂದು ಸೂಚಿಸಿದರು.

ನೂತನ ಕಟ್ಟಡ ನೀಲನಕ್ಷೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಿದ ಯಡಿಯೂರಪ್ಪ, ಹಳೆಯ ನಕ್ಷೆಯಲ್ಲಿ ಕಚೇರಿ ಕಟ್ಟಡಕ್ಕೆ ಎರಡು ಅಂತಸ್ತು ಕಾಯ್ದಿರಿಸಿದ್ದು, ಕರ್ನಾಟಕ ಸಂಸ್ಕೃತಿಯ ಬಿಂಬವೇ ಕಾಣುತ್ತಿಲ್ಲ. ಹಾಗಾಗಿ, ನೀಲನಕ್ಷೆಯಲ್ಲಿ ಬದಲಾವಣೆ ಮಾಡಿ ಕಚೇರಿಯ ಕಟ್ಟಡವನ್ನು ಒಂದು ಅಂತಸ್ತಿಗೆ ಸೀಮಿತಗೊಳಿಸಿ. ಅತಿಥಿ ಕೊಠಡಿ, ಸಂಸ್ಕೃತಿ ಪ್ರತಿಬಿಂಬಕ್ಕೆ ಆದ್ಯತೆ ನೀಡುವ ಹೊಸ ನೀಲನಕ್ಷೆಯನ್ನು ಬುಧವಾರ ಸಂಜೆಯೊಳಗೆ ಸಿದ್ಧಪಡಿಸಿ. ಆ.15ರ ಬಳಿಕ ಹಳೆಯ ಕಟ್ಟಡ ತೆರವು ಕಾರ್ಯಕ್ಕೆ ಚಾಲನೆ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಮಾಜಿ ಸಚಿವ ಗೋವಿಂದ ಕಾರಜೋಳ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌, ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್, ಮುಖ್ಯಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮೀನಾರಾಯಣ್‌, ಕರ್ನಾಟಕ ಭವನದ ಸ್ಥಾನಿಕ ಆಯುಕ್ತ ಅತುಲ್‌ ಕುಮಾರ್‌ ಇತರರು ಈ ವೇಳೆ ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೇಂದ್ರದ ವಿವಿಧ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ನಿರ್ಮಲಾ ಸೀತಾರಾಮನ್‌, ಕೇಂದ್ರ ಹಣಕಾಸು ಸಚಿವೆ
* ರಾಜ್ಯಕ್ಕೆ ಸಂಬಂಧಪಟ್ಟ ಕೆಲ ಪ್ರಮುಖ ವಿಚಾರಗಳ ಬಗ್ಗೆ ಮಾತುಕತೆ.

* ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 10 (29ಎ)ರ ಅನ್ವಯ ಆದಾಯ ತೆರಿಗೆ ವಿನಾಯಿತಿ ನೀಡಬೇಕು.

* ರಾಜ್ಯದ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 14ನೇ ಹಣಕಾಸು ಆಯೋಗದಡಿ ಬಾಕಿ ಇರುವ ಕಾರ್ಯ ನಿರ್ವಹಣಾ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ.

ನರೇಂದ್ರ ಸಿಂಗ್‌ ತೋಮರ್‌, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ
* ಪ್ರಧಾನ ಮಂತ್ರಿ ಫ‌ಸಲ್‌ ಬಿಮಾ ಯೋಜನೆಯಡಿ ನೋಂದಣಿ ಅವಧಿಯನ್ನು ಆ.14ರವರೆಗೆ ವಿಸ್ತರಿಸುವಂತೆ ಮನವಿ.

* ಬೆಳೆ ವಿಮೆಯ ಹಿಂದಿನ ಕ್ಲೇಮುಗಳನ್ನು ಇತ್ಯರ್ಥಪಡಿಸಲು ಕ್ರಮ ವಹಿಸಬೇಕು.

* ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 2019-20ರ ಅನುದಾನ ಬಿಡುಗಡೆ ಮಾಡಬೇಕು.

* ರಾಜ್ಯ ಸರ್ಕಾರವು 2015-16, 2016-17 ಹಾಗೂ 2019-20ನೇ ಹಣಕಾಸು ವರ್ಷದಲ್ಲಿ ಪಾವತಿಸಿರುವ ಮುಂಗಡ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು.

* ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ರಾಜ್ಯದ ಎಲ್ಲ ಅರ್ಹ ರೈತರಿಗೂ ಹಣ ಬಿಡುಗಡೆ ಮಾಡಬೇಕು.

ನಿತಿನ್‌ ಗಡ್ಕರಿ, ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ
* ರಾಜ್ಯದ ಪ್ರಮುಖ ಹೆದ್ದಾರಿ ಯೋಜನೆಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳುವುದರ ಜತೆಗೆ ಶಿವಮೊಗ್ಗ ನಗರಕ್ಕೆ ವರ್ತುಲ ರಸ್ತೆ ನಿರ್ಮಾಣ ಯೋಜನೆಗೆ ಅನುಮೋದನೆ ನೀಡಲು ಮನವಿ

Advertisement

Udayavani is now on Telegram. Click here to join our channel and stay updated with the latest news.

Next