Advertisement
ಕೃಷಿ ತೋಟಗಳಿಗೆ ನೀರುಣಿಸುವ ಸುಮಾರು 2 ಕೋಟಿ ರೂ. ವೆಚ್ಚದ ಈ ಏತ ನೀರಾವರಿ ಯೋಜನೆ ನರಿಮೊಗರು ಗ್ರಾ.ಪಂ. ವ್ಯಾಪ್ತಿಯ ವೀರಮಂಗಲದ ಪುಡಿಂಕನಡ್ಕದಲ್ಲಿ ತಲೆ ಎತ್ತಲಿದೆ. ಕುಮಾರಧಾರಾದಿಂದ 40 ಎಚ್.ಪಿ. ಸಾಮರ್ಥ್ಯದ ಪಂಪ್‌ನಿಂದ ನೀರನ್ನು ಮೇಲೆತ್ತಿ ಬೃಹತ್ ಟ್ಯಾಂಕ್‌ಗಳ ಮೂಲಕ ಆ ಭಾಗದ ಕೃಷಿ ತೋಟಗಳಿಗೆ ನೀರು ನೀಡುವ ಮಹತ್ವದ ಉದ್ದೇಶವನ್ನು ಈ ಯೋಜನೆಯ ಮೂಲಕ ಹೊಂದಲಾಗಿದೆ. ಜಿಲ್ಲೆಯಲ್ಲಿ ಕಾಲುವೆ ಮೂಲಕ ನೀರು ನೀಡುವುದು ಕಷ್ಟವಾದ ಕಾರಣ ಇದಕ್ಕಾಗಿ ಪೈಪ್‌ಲೈನ್ ಅಳವಡಿಕೆ ನಡೆದಿದೆ.
ಎರಡು ವರ್ಷಗಳ ಹಿಂದೆ ಆಗಿನ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಸುಮಾರು 100 ಕುಟುಂಬಗಳ ಕೃಷಿಗೆ ಈ ಯೋಜನೆಯಲ್ಲಿ ನೀರು ನೀಡಬಹುದಾಗಿದೆ. ಜತೆಗೆ ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರವಾಗಲಿದೆ. ಈ ಭಾಗದಲ್ಲಿ ಹಲವು ಮನೆಗಳಿಗೆ ಈಗಾಗಲೇ ಪೈಪ್‌ಲೈನ್ ಅಳವಡಿಕೆ ಮಾಡಲಾಗಿದ್ದು, ಇನ್ನುಳಿದ ಪ್ರದೇಶಗಳಿಗೂ ನೀರು ನೀಡಲು ಅನುಕೂಲವಾಗುವಂತೆ ಎರಡು ಪ್ರತ್ಯೇಕ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಅಸಮಾಧಾನಕ್ಕೆ ಕಾರಣ
ಈ ಯೋಜನೆಯ ಅನುಷ್ಠಾನದ ಸಂದರ್ಭ ಸ್ಥಳೀಯ ಗ್ರಾ.ಪಂ. ಸದಸ್ಯರು ಹಾಗೂ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಡೆಸಲಾಗುತ್ತಿದೆ ಎಂಬುದು ಪ್ರಧಾನ ಆರೋಪ. ಏತ ನೀರಾ ವರಿಯ ಪೈಪ್‌ಲೈನ್ ಅಳವಡಿಕೆಗಾಗಿ ತಮ್ಮ ವರ್ಗ ಜಾಗ ಬಿಟ್ಟುಕೊಟ್ಟಿರುವ ಸ್ಥಳೀಯರೂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪ ಡಿಸುತ್ತಿದ್ದಾರೆ. ಸಮಿತಿ ರಚನೆಯಲ್ಲೂ ಸ್ಥಳೀಯ ಫಲಾನುಭವಿಗಳ ಬದಲಿಗೆ ಬೇರೆ ವ್ಯಕ್ತಿಗಳನ್ನು ಆರಿಸಲಾಗಿದೆ. ಸ್ಥಳೀಯಾಡಳಿತ ಗ್ರಾ.ಪಂ.ಗೂ ಈ ಯೋಜನೆ ಕುರಿತು ಮಾಹಿತಿ ನೀಡಿಲ್ಲ ಎಂಬ ಆರೋಪವೂ ವ್ಯಕ್ತವಾಗಿರುವುದು ಯೋಜನೆಯ ಹಿನ್ನಡೆಗೆ ಕಾರಣವಾಗಿದೆ.
Related Articles
ಸ್ಥಳೀಯರಲ್ಲಿದ್ದ ವರ್ಗ ಸ್ಥಳದಲ್ಲಿ ಪೈಪ್‌ಲೈನ್ ಅಳವಡಿಕೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೆ ಈಗ ಸಣ್ಣ ನೀರಾವರಿ ಇಲಾಖೆ ಏಕಪಕ್ಷೀಯವಾಗಿ ಕೆಲಸ ಮಾಡುತ್ತಿದೆ. ಸ್ಥಳೀಯರನ್ನು, ಗ್ರಾ.ಪಂ. ಆಡಳಿತ ವ್ಯವಸ್ಥೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಯೋಜನೆಗೆ ಸ್ಥಳೀಯ ವಾಗಿ ಸಮಿತಿಯೊಂದನ್ನು ರಚಿಸಲಾಗಿದ್ದು, ಫಲಾನುಭವಿಗಳಲ್ಲದವರನ್ನು ಹಾಕಿಕೊಂಡು ರಾಜಕೀಯ ನಡೆಸಲಾಗುತ್ತಿದೆ. ಇದರ ವಿರುದ್ಧ ಗ್ರಾ.ಪಂ.ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಮತ್ತು ಸಣ್ಣ ಕೈಗಾರಿಕಾ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ನರಿಮೊಗರು ಗ್ರಾಮ ಪಂಚಾಯತ್ ಸದಸ್ಯ ಬಾಬು ಶೆಟ್ಟಿ ತಿಳಿಸಿದ್ದಾರೆ.
Advertisement
ಸಮಿತಿ ರಚನೆ ಮಾಡಿಲ್ಲಈ ಯೋಜನೆ ಮೂಲ ಸೌಕರ್ಯಗಳಿಗೆ 1.50 ಕೋಟಿ ರೂ. ಹಾಗೂ ಪೈಪ್‌ಲೈನ್ ಅಳವಡಿಕೆಗೆ 50 ಲಕ್ಷ ರೂ. ವೆಚ್ಚವಾಗಲಿದೆ. ಈ ಯೋಜನೆಯಲ್ಲಿ ಯಾವುದೇ ಅಧಿಕೃತ ಸಮಿತಿ ರಚನೆ ಮಾಡಲಾಗಿಲ್ಲ. ಆದರೆ ಮಾಹಿತಿ ನೀಡುವ ಸಭೆ ನಡೆಸಲಾಗಿದೆ. ಈ ಯೋಜನೆಯ ನಿರ್ವಹಣೆಯನ್ನು ಸಣ್ಣ ನೀರಾವರಿ ಇಲಾಖೆ ವತಿಯಿಂದಲೇ ನಡೆಸಲಾಗುತ್ತಿದೆ. ಫಲಾನುಭವಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗಿದೆ. ಶೀಘ್ರ ಲೋಕಾರ್ಪಣೆಗೊಳ್ಳಲಿದೆ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಆನಂದ್. ನನ್ನ ಕನಸಿನ ಯೋಜನೆ
ಈ ಯೋಜನೆಗಾಗಿ 2 ಕೋಟಿ ಅನುದಾನವನ್ನು ಸಣ್ಣ ನೀರಾವರಿ- ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಒದಗಿಸಿ ಕೊಟ್ಟಿದ್ದೇನೆ. ಇಲ್ಲಿ ಅರಣ್ಯ ಪ್ರದೇಶ, ವರ್ಗ ಜಾಗ ಇದ್ದುದರಿಂದ ಆ ಸಂದರ್ಭದಲ್ಲಿ ಸ್ವಲ್ಪ ಮಟ್ಟಿನ ಸಮಸ್ಯೆ ಉಂಟಾಗಿ ವಿಳಂಬವಾಗಿತ್ತು. ಇದು ನನ್ನ ಕನಸಿನ ಯೋಜನೆಯಾಗಿದೆ. ಈ ಯೋಜನೆ ಸಂಪೂರ್ಣ ಗೊಂಡಲ್ಲಿ ರೈತರಿಗೆ ಅನುಕೂಲವಾಗಲಿದೆ.
-ಶಕುಂತಳಾ ಟಿ. ಶೆಟ್ಟಿ, ಮಾಜಿ ಶಾಸಕಿ ರಾಜೇಶ್ ಪಟ್ಟೆ