ಚಿಂಚೋಳಿ: ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ವ್ಯಾಪ್ತಿಯ ಒಟ್ಟು 9,713 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸುವ ಉದ್ದೇಶವಿದೆ. ಯೋಜನೆ ಕೊನೆ ಭಾಗದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಿ ಕೊಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಯೋಜನೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಕಾಸ ಕುಲಕರ್ಣಿ ತಿಳಿಸಿದರು.
ತಾಲೂಕಿನ ರೋಹಿಲಾ ತಾಂಡಾದ ಹತ್ತಿರ ಕೆಳದಂಡೆ ಮುಲ್ಲಾಮಾರಿ ಯೋಜನೆ ಬಲದಂಡೆ ಮುಖ್ಯ ಕಾಲುವೆ ನವೀಕರಣ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಬಲದಂಡೆ ಮುಖ್ಯ ಕಾಲುವೆ
ಆಧುನೀಕರಣವಾಗದ ಕಾರಣ ನೀರು ಸೋರಿಕೆಯಿಂದಾಗಿ ರೈತರ ಹೊಲಗಳಿಗೆ ತಲುಪುತ್ತಿಲ್ಲ. ಹೀಗಾಗಿ ಈಗ ಸಿಮೆಂಟ್
ಕಾಂಕ್ರಿಟ್ ಕಾಲುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಅನೇಕ ವರ್ಷಗಳ ನಂತರ ಬಲದಂಡೆ ಮುಖ್ಯ ಕಾಲುವೆ ಆಧುನೀಕರಣ ಕಾಮಗಾರಿ ನಡೆಯುತ್ತಿದೆ. ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಅಲ್ಲದೇ ನಾನು ಪ್ರತಿನಿತ್ಯ ಕಾಮಗಾರಿ ವೀಕ್ಷಿಸುತ್ತಿದ್ದೇನೆ. ನಮ್ಮ ಭಾಗದ ನೀರಾವರಿ ಯೋಜನೆಗಳು ಅಭಿವೃದ್ಧಿ ಆಗಬೇಕು ಎಂಬುದು ಸರಕಾರದ ಮುಖ್ಯಗುರಿ ಆಗಿದೆ ಎಂದು ತಿಳಿಸಿದರು.
ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಬಲದಂಡೆ ಮುಖ್ಯ ಕಾಲುವೆ 80 ಕಿಮೀ ವರೆಗೆ ನವೀಕರಣ ಮಾಡುತ್ತಿರುವುದರಿಂದ ಕಾಲುವೆಯಲ್ಲಿನ ಹೂಳು ಕಲ್ಲಿನ ಪರಸಿ ಮತ್ತು ಗಿಡಗಂಟಿ ಕಿಳಲಾಗಿದೆ. ಮರುಮ ಹಾಕಿ ಸಮತಟ್ಟಾಗಿ ಲೈನಿಂಗ್ ಮಾಡಲಾಗುತ್ತಿದೆ. ಈಗಾಗಲೇ ಸಿಮೆಂಟ್ ಲೈನಿಂಗ್ ಕೆಲಸ ಶೇ. 60ರಷ್ಟು ಪೂರ್ಣಗೊಂಡಿದೆ ಎಂದು ವಿವರಿಸಿದರು. ಬಲದಂಡೆ ಮುಖ್ಯಕಾಲುವೆ ಪೂರ್ಣಗೊಂಡರೆ ಯೋಜನೆ ವ್ಯಾಪ್ತಿಯ ಚಿಮ್ಮನಚೋಡ, ತಾಜಲಾಪುರ, ದೋಟಿಕೊಳ, ಖೋದಂಪುರ, ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಪೋಲಕಪಳ್ಳಿ, ಅಣವಾರ, ಮೋತಕಪಳ್ಳಿ, ರಾಮತೀರ್ಥ, ಚಿಮ್ಮಾಇದಲಾಯಿ, ದಸ್ತಾಪುರ, ಯಾಕಾಪುರ, ಬೆಡಕಪಳ್ಳಿ, ಕೊಡಂಪಳ್ಳಿ, ಕೆರೋಳಿ, ಕರ್ಚಖೇಡ ಗ್ರಾಮಗಳ ರೈತರು ಇನ್ನು ಮುಂದೆ ನೀರಾವರಿ ಸೌಲಭ್ಯಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.