ಕಲಾದಗಿ: ಬೀಳಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸದಾಗಿ ಒಂದು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುವುದು, ಒಂದು ಎಕರೆ ರೈತಾವಳಿ ಭೂಪ್ರದೇಶವೂ ಒಣ ಬೇಸಾಯ ಭೂಮಿಯಾಗಿ ಉಳಿಯದಂತೆ ನೀರಾವರಿ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆ ಮಾಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ| ಮುರುಗೇಶ್.ಆರ್.ನಿರಾಣಿ ಹೇಳಿದರು.
ಹಿರೇಶೆಲ್ಲಿಕೇರಿ ಗ್ರಾಮದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡ ಹಾಗೂ ಪಶು ಚಿಕಿತ್ಸಾಲಯದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮತಕ್ಷೇತ್ರದಲ್ಲಿ ಶಿಕ್ಷಣ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.
ವಿವಿಧ ಕೆರೆ ತುಂಬಿಸಲು 108 ಕೋಟಿ ಮಂಜೂರು ಆಗಿದೆ. ಹೆರಕಲ್ ಬಳಿಯ ಬ್ರಿಡ್ಜ್ ಕಂ ಬ್ಯಾರೇಜ್ ಎತ್ತರಿಸಲು 15 ಕೋಟಿ ಮಂಜೂರು ಆಗಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ ಶೀಘ್ರ ಆರಂಭಿಸಲಾಗುವುದು. ಇದರಿಂದ ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿದಂತಾಗಿ ಮುಧೋಳದವರೆಗೂ ಘಟಪ್ರಭಾ ನದಿಯಲ್ಲಿ ನೀರು ನಿಲ್ಲಲಿದೆ. ಇದರಿಂದ ನದಿ ಪಾತ್ರದ ಎರಡು ಬದಿ ಗ್ರಾಮದ ರೈತರಿಗೆ ನೀರಿನ ಸಮಸ್ಯೆ ತಪ್ಪಿದಂತಾಗುತ್ತದೆ ಎಂದರು.
ಹಿರೇಶೆಲ್ಲಿಕೇರಿ ಗ್ರಾಮದಲ್ಲಿನ ಶ್ರೀ ಮಾರುತೇಶ್ವರ ದೇವಸ್ಥಾನದ ದ್ವಾರ ಬಾಗಿಲು ನಿರ್ಮಾಣಕ್ಕೆ ಈಗಾಗಲೇ 5 ಲಕ್ಷ ಮಂಜೂರು ಆಗಿದ್ದು, ಇನ್ನೂ 5 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗುವುದು. ಸದ್ಯ ನನ್ನ ಸ್ವಂತ 2 ಲಕ್ಷ ರೂ ದೇಣಿಗೆ ನೀಡುತ್ತಿದ್ದೇನೆ ಇಂದಿನಿಂದಲೇ ದ್ವಾರ ಬಾಗಿಲು ನಿರ್ಮಾಣ ಕಾಮಗಾರಿ ಆರಂಭಿಸಲು ತಿಳಿಸಿ, ಮಾರುತೇಶ್ವರ ಮಂಗಲ ಭವನ ದುರಸ್ತಿ, ಮೇಲ್ಛಾವಣಿ ಹಾಕಿಸಲು ಅನುದಾನ ಮಂಜೂರು ಮಾಡಿಸಲಾಗುವುದು ಎಂದು ಭವರಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಜಿಪಂ ಮಾಜಿ ಸದಸ್ಯ ಹೂವಪ್ಪ ರಾಠೊಡ, ಬಾಗಲಕೋಟೆ ತಹಶೀಲ್ದಾರ್ ಜಿ.ಎಸ್. ಹಿರೇಮಠ, ಇಒ ಶಿವಾನಂದ ಕಲ್ಲಾಪುರ, ಡಾ| ಆರ್.ಎಸ್. ಪದರ, ಮಾರುತಿ ಸಂಗಳದ, ನಾಗಪ್ಪ ಮಾದರ, ಈರಪ್ಪ ಅಂಗಡಿ, ಹನಮಂತ ಕೋಲಾರ, ಯಲ್ಲಪ್ಪ ಚತ್ರಭಾನುಕೋಟಿ, ಭೀಮಶಿ ತುಳಸಿಗೇರಿ, ಅಶೋಕ ಹೆಳವರ, ಶಿವಲೀಲಾ ಹೆಳವರ, ಗೀತಾ ನಾಯ್ಕರ್, ಗಣಪತಿ ನಾಯ್ಕರ, ದುಂಡಪ್ಪ ತುಳಸಿಗೇರಿ, ಗಂಗಾಧರ ತಳವಾರ ಇದ್ದರು.