Advertisement
ಗ್ರಾಮೀಣಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಮತ್ತು ಜಿಲ್ಲಾ ಪಂಚಾಯಿತಿಗಳ ನಿರ್ವಹಣೆ ಮಾಡುತ್ತಿರುವ ಸುಮಾರು 22 ಸಾವಿರಕ್ಕೂ ಹೆಚ್ಚು ಕೆರೆಗಳನ್ನು ತಮಗೆ ಬಿಟ್ಟು ಕೊಡಿ ಎಂದು ಸಣ್ಣ ನೀರಾವರಿ ಇಲಾಖೆ ಬೇಡಿಕೆ ಇಟ್ಟಿದೆ. ಆದರೆ, ಯಾವ ಕಾರಣಕ್ಕೂ ಇದು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಹೇಳಿದೆ. ಹೀಗೆ ಎರಡೂ ಇಲಾಖೆಗಳ ನಡುವೆ ಕೆರೆ ಜಗಳ ನಡೆದಿದೆ.
Related Articles
Advertisement
ನಮ್ಮದು ಬಹುಪಯೋಗಿ ಕೆರೆಗಳು: ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಕೇವಲ ನೀರಾವರಿ ಕೆರೆಗಳು ಬರುತ್ತವೆ. ಆದರೆ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿರುವ ಕೆರೆಗಳು ಬಹುಪಯೋಗಿ ಕೆರೆಗಳು. ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಕೆರೆಗಳು ಇದಾಗಿವೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಶೇ.90ರಷ್ಟು ಕೆರೆಗಳೇ ಆಧಾರವಾಗಿದೆ. ಒಂದು ವೇಳೆ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಗೆ ಬಿಟ್ಟುಕೊಟ್ಟರೆ ಅವುಗಳನ್ನು ಕೃಷಿ ಮತ್ತು ನೀರಾವರಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯೆತೆಯನ್ನು ಅಲ್ಲಗಳೆಯುವಂತಿಲ್ಲ. ಒಂದೊಮ್ಮೆ ಈ ರೀತಿ ಆದರೆ, ಗ್ರಾಮೀಣ ಭಾಗದ ಜಲಮೂಲವೇ ಕಳೆದಕೊಳ್ಳಬೇಕಾದಿತು. ಅಷ್ಟಕ್ಕೂ ಅನೇಕ ವರ್ಷಗಳಿಂದ ಈ ಕೆರೆಗಳನ್ನು ನಮ್ಮ ಇಲಾಖೆಯೇ ಸಂರಕ್ಷಣೆ ಮತ್ತು ನಿರ್ವಹಣೆ ಮಾಡುತ್ತಿದೆ. ಹಾಗಾಗಿ, ಯಾವುದೇ ಕಾರಣಕ್ಕೂ ನಮ್ಮ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಗೆ ಬಿಟ್ಟುಕೊಡುವುದಿಲ್ಲ ಎನ್ನುವುದು ಗ್ರಾಮೀಣಾಭಿವೃದ್ಧಿ ಇಲಾಖೆಯ ವಾದವಾಗಿದೆ.
ನಮ್ಮ ಇಲಾಖೆಯ ಕೆರೆಗಳನ್ನು ತಮಗೆ ಕೊಡಿ ಎಂದು ಸಣ್ಣ ನೀರಾವರಿ ಇಲಾಖೆ ಕೇಳುತ್ತಿರುವುದು ಯಾಕೆಂದು ಗೊತ್ತಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ ಅಷ್ಟೂ ಕೆರೆಗಳನ್ನು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಲ್ಲೇ ಉಳಿಸಿಕೊಳ್ಳುತ್ತೇವೆ. ಅಷ್ಟಕ್ಕೂ, ಕೆರೆಗಳನ್ನು ನಮಗೆ ಕೊಡಿ ಎಂದು ಕೇಳುತ್ತಿರುವುದೇ ಕಾನೂನು ಬಾಹಿರ. ಹಾಗಾಗಿ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಯಾವುದೇ ಕಾರಣಕ್ಕೂ ನಮ್ಮ ಇಲಾಖೆಯ ಕೆರೆಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಸಣ್ಣ ನೀರಾವರಿ ಇಲಾಖೆಗೆ ಸ್ಪಷ್ಟವಾಗಿ ಹೇಳಿದ್ದೇವೆ.– ಎಚ್.ಕೆ ಪಾಟೀಲ್. ಗ್ರಾಮೀಣಾಭಿವೃದ್ಧಿ ಸಚಿವ ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣೆ ದೃಷ್ಟಿಯಿಂದ ಎಲ್ಲ ಕೆರೆ-ಕುಂಟೆಗಳು ಕೆರೆ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ತರಬೇಕಾಗಿದೆ. ಅದಕ್ಕಾಗಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಗೆ ವ್ಯಾಪ್ತಿಗೆ ತೆಗೆದುಕೊಳ್ಳಲು ಪ್ರಸ್ತಾವನೆ ಸಿದ್ದಪಡಿಸಲಾಗಿದೆ. ಅದನ್ನು ಸಚಿವ ಸಂಪುಟದ ಮುಂದೆ ತರುವ ಮೊದಲು ಸಂಬಂಧಪಟ್ಟ ಇಲಾಖೆಯ ಅಭಿಪ್ರಾಯ ಕೇಳಬೇಕಾಗುತ್ತದೆ. ಹಾಗಾಗಿ ಪ್ರಸ್ತಾವನೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕಳಿಸಲಾಗಿದೆ. ಅಲ್ಲಿಂದ ಅಭಿಪ್ರಾಯ ಬಂದ ಮೇಲೆ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು.
- ಆರ್. ರುದ್ರಯ್ಯ, ಕಾರ್ಯದರ್ಶಿ, ಸಣ್ಣ ನೀರಾವರಿ ಇಲಾಖೆ. *ರಫೀಕ್ ಅಹ್ಮದ್