ಮುಂಬೈ: ಬಹುಮುಖ ಪ್ರತಿಭೆಯ ಖ್ಯಾತ ನಟ ಇರ್ಫಾನ್ ಖಾನ್ ಬುಧವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದರು. ಮಧ್ಯಾಹ್ನ ಅಂಧೇರಿಯ ವರ್ಸೋವಾ ಖಬರ್ ಸ್ತಾನ್ ಗೆ ಶವವನ್ನು ತೆಗೆದುಕೊಂಡು ಹೋಗಿದ್ದು, ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೇವಲ ಕುಟುಂಬದ 20 ಮಂದಿ ಸದಸ್ಯರು ಮಾತ್ರ ಹಾಜರಿದ್ದರು ಎಂದು ವರದಿ ತಿಳಿಸಿದೆ.
ಖಬರ್ ಸ್ತಾನ್ ದೊಳಕ್ಕೆ ಐದು ಮಂದಿಯ ಒಂದೊಂದು ಗುಂಪಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅಂತಿಮ ವಿಧಿವಿಧಾನದ ಬಳಿಕ ಇಂದು 3ಗಂಟೆಗೆ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಶವವನ್ನು ದಫನ್ ಮಾಡಲಾಯಿತು. ಪ್ರತಿಯೊಬ್ಬರು ಖಾನ್ ಗೆ ಅಂತಿಮ ಗೌರವವನ್ನು ಸಲ್ಲಿಸಿದ್ದರು.
ಇರ್ಫಾನ್ ಖಾನ್ ಅವರು ಶಾಂತವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಅವರು ಇಂದು ಉತ್ತಮ ಸ್ಥಳದಲ್ಲಿದ್ದಾರೆ ಎಂದು ನಾವು ಭಾವಿಸುತ್ತೇವೆ. ಅವರು ತುಂಬಾ ಶಕ್ತಿಯುತವಾಗಿ ಹೋರಾಡಿದ್ದರು. ಅಂತಹ ಗಟ್ಟಿಗ ಮನುಷ್ಯನನ್ನು ಕಳೆದುಕೊಳ್ಳುವ ಮೂಲಕ ನಾವು ನಷ್ಟ ಅನುಭವಿಸುವಂತಾಗಿದೆ ಎಂದು ಅಧಿಕೃತವಾಗಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಇರ್ಫಾನ್ ಖಾನ್ ಕುಟುಂಬದ ನಿಕಟವರ್ತಿ ಸಂಬಂಧಿಕರನ್ನು ಹೊರತುಪಡಿಸಿ ಇತರ ಯಾವುದೇ ಸೆಲೆಬ್ರಿಟಿ ನಟರನ್ನು ಖಬರ್ ಸ್ತಾನದೊಳಕ್ಕೆ ಹೋಗಲು ಅನುಮತಿ ನೀಡಿಲ್ಲ. ಮಾರಣಾಂತಿಕ ಕೋವಿಡ್ 19 ವೈರಸ್ ಹನ್ನೆಲೆಯಲ್ಲಿ ಈ ಕಠಿಣ ಕ್ರಮ ತೆಗೆದುಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದ ವಾರಿಯರ್, ದ ನೇಮ್ ಸೇಕ್, ದ ಡಾರ್ಜಿಲಿಂಗ್ ಲಿಮಿಟೆಡ್, ಸ್ಲಮ್ ಡಾಗ್ ಮಿಲಿಯನೇರ್, ನ್ಯೂಯಾರ್ಕ್, ಐ ಲವ್ ಯೂ, ದ ಅಮೆಜಿಂಗ್ ಸ್ಪೈಡರ್ ಮ್ಯಾನ್, ಲೈಫ್ ಆಫ್ ಪೈ, ಜುರಾಸಿಕ್ ವರ್ಲ್ಡ್, ಮಕ್ಬೂಲ್ ಸೇರಿದಂತೆ 50ಕ್ಕೂ ಅಧಿಕ ಸಿನಿಮಾಗಳಲ್ಲಿ ಇರ್ಫಾನ್ ನಟಿಸಿದ್ದರು.