2020ನೇ ಇಸವಿ ಕೊನೆಗೊಂಡು ಹೊಸ ವರ್ಷಕ್ಕೆ ಕಾಲಿಡಲು ಸಜ್ಜಾಗುತ್ತಿದ್ದೇವೆ. ಆದರೆ ಕೋವಿಡ್ ಎಂಬ ಮಹಾಮಾರಿ 2020ನೇ ಇಸವಿಯಲ್ಲಿ ಇಡೀ ಜನಸಮುದಾಯಕ್ಕೆ ಆತಂಕ ಭೀತಿಯನ್ನು ಹುಟ್ಟುಹಾಕಿದ್ದಲ್ಲದೇ ಆರ್ಥಿಕ ಸಂಕಷ್ಟವನ್ನು ತಂದೊಡ್ಡುವ ಮೂಲಕ ಜನಜೀವನದ ಮೇಲೆ ಅಗಾಧ ಪರಿಣಾಮ ಬೀರಿತ್ತು. ಈ ಸೋಂಕಿನ ಅಟ್ಟಹಾಸದ ನಡುವೆಯೇ ಬಾಲಿವುಡ್ ನ ಪ್ರಮುಖ ನಟರು ವಿಧಿವಶರಾಗಿದ್ದರು. ಇದರಲ್ಲಿ ಖ್ಯಾತ ನಟ ಇರ್ಫಾನ್ ಖಾನ್ ಮತ್ತು ಸುಶಾಂತ್ ಸಿಂಗ್ ರಜಪೂತ್ ನಿಧನ ತುಂಬಲಾರದ ನಷ್ಟವನ್ನು ತಂದಿರುವುದು ಸುಳ್ಳಲ್ಲ.
ರಿಷಿ ಕಪೂರ್:
ಬಾಲಿವುಡ್ ನ ಪ್ರಸಿದ್ಧ ಸಿನಿಮಾ ನಿರ್ದೇಶಕ, ನಟ ದಿ.ರಾಜ್ ಕಪೂರ್ ಅವರ ಎರಡನೇ ಪುತ್ರ ರಿಷಿ ರಾಜ್ ಕಪೂರ್. 1970ರಲ್ಲಿ ತೆರೆಕಂಡಿದ್ದ ಮೇರಾ ನಾಮ್ ಜೋಕರ್ ಸಿನಿಮಾದ ಮೂಲಕ ರಿಷಿ ಕಪೂರ್ ಬೆಳ್ಳಿತೆರೆಗೆ ಕಾಲಿಟ್ಟಿದ್ದರು. 1973ರಲ್ಲಿ ಬಾಬಿ ಸಿನಿಮಾದಲ್ಲಿನ ನಟನೆಗಾಗಿ ಉತ್ತಮ ನಟ ಪ್ರಶಸ್ತಿ ಬಂದಿತ್ತು. 1970-80ರ ದಶಕದಲ್ಲಿ ರಿಷಿ ಜನಪ್ರಿಯ ನಟರಾಗಿದ್ದರು. 1979ರಲ್ಲಿ ನೀತೂ ಸಿಂಗ್ ಅವರನ್ನು ರಿಷಿ ವಿವಾಹವಾಗಿದ್ದರು. ದಂಪತಿಗೆ ರಣಬೀರ್ ಕಪೂರ್ ಮತ್ತು ರಿಧೀಮಾ ಕಪೂರ್ ಸೇರಿ ಇಬ್ಬರು ಮಕ್ಕಳು. ಲುಕೇಮಿಯಾದಿಂದ ಬಳಲುತ್ತಿದ್ದ ರಿಷಿ ಕಪೂರ್ ಅವರು 2020ರ ಏಪ್ರಿಲ್ 30ರಂದು ಇಹಲೋಕ ತ್ಯಜಿಸಿದ್ದರು.
2)ಅಸ್ತಾದ್ ದೇಬೂ
ಬಾಲಿವುಡ್ ನ ಖ್ಯಾತ ನೃತ್ಯಪಟು ಅಸ್ತಾದ್ ದೇಬೂ(73ವರ್ಷ) ಅನಾರೋಗ್ಯದಿಂದ 2020ರ ಡಿಸೆಂಬರ್ 10ರಂದು ಮುಂಬೈನಲ್ಲಿ ವಿಧಿವಶರಾಗಿದ್ದರು. ಭಾರತೀಯ ಮತ್ತು ಪಾಶ್ಚಾತ್ಯ ನೃತ್ಯ ಪ್ರವೀಣರಾಗಿದ್ದ ಅಸ್ತಾದ್ ಅವರು ಅದ್ಭುತವಾದ, ಮರೆಯಲಾರದ ಕೊಡುಗೆಯನ್ನು ನೃತ್ಯ ಕ್ಷೇತ್ರಕ್ಕೆ ನೀಡಿದ್ದರು. ಅಸ್ತಾದ್ 1947ರ ಜುಲೈ 13ರಂದು ಗುಜರಾತ್ ನ ನವ್ ಸಾರಿಯಲ್ಲಿ ಜನಿಸಿದ್ದರು. ತಮ್ಮ ಎಳೆ ವಯಸ್ಸಿನಲ್ಲಿಯೇ ಗುರು ಪ್ರಹ್ಲಾದ್ ದಾಸ್ ಅವರಿಂದ ಕಥಕ್ ನೃತ್ಯ ಅಭ್ಯಸಿಸಿದ್ದರು. ನಂತರ ಇ.ಕೆ.ಪಣಿಕ್ಕರ್ ಅವರ ಬಳಿ ಕಥಕ್ಕಳಿ ಕಲಿತಿದ್ದರು.
3)ಹರೀಶ್ ಶಾ
ಬಾಲಿವುಡ್ ನ ಖ್ಯಾತ ನಿರ್ದೇಶಕ, ನಿರ್ಮಾಪಕ, ನಟ ಹರೀಶ್ ಶಾ (76ವರ್ಷ) ಅವರು ಅನಾರೋಗ್ಯದಿಂದ 2020ರ ಜುಲೈ 7ರಂದು ನಿಧನರಾಗಿದ್ದರು. 1972ರಲ್ಲಿ ತೆರೆಕಂಡಿದ್ದ ರಾಜೇಶ್ ಖನ್ನಾ ನಟನೆಯ ಮೇರೆ ಜೀವನ್ ಸಾಥಿ ಸಿನಿಮಾದ ಮೂಲಕ ಹರೀಶ್ ಶಾ ಸಿನಿ ಜೀವನ ಆರಂಭಿಸಿದ್ದರು. ಕಾಲಾ ಸೋನಾ, ರಾಮ್ ತೇರಿ ಕಿತನೆ ನಾಮ್, ಝಲ್ ಝಾಲಾ, ಅಬ್ ಇನ್ಸಾಫ್ ಹೋಗಾ, ಜಾಲ್ ಸೇರಿದಂತೆ ನೂರಾರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದರು.
4)ಆಸಿಫ್ ಬಸ್ರಾ
ಬಾಲಿವುಡ್ ನಟ ಆಸಿಫ್ ಬಸ್ರಾ 2020ರ ನವೆಂಬರ್ 12ರಂದು ಧರ್ಮಶಾಲಾದ ಹೋಟೆಲ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. 53 ವರ್ಷದ ನಟ ಆಸಿಫ್ ರಂಗಭೂಮಿ ಹಿನ್ನೆಲೆಯಿಂದ ಸಿನಿಮಾ ಕ್ಷೇತ್ರ ಪ್ರವೇಶಿಸಿದ್ದರು. ಬಾಲಿವುಡ್ ನ ಬ್ಲ್ಯಾಕ್ ಫ್ರೈಡೇ, ಏಕ್ ವಿಲನ್, ಲವ್ ಇನ್ ನೇಪಾಳ್, ಜಬ್ ವಿ ಮೆಟ್ ಸಿನಿಮಾಗಳಲ್ಲಿ ನಟಿಸಿದ್ದರು. ಅಲ್ಲದೇ ಸುಶಾಂತ್ ನಟನೆಯ ಕಾಯ್ ಪೂ ಚೆ ಸಿನಿಮಾದಲ್ಲಿ ಹಾಗೂ 2018ರಲ್ಲಿ ಬಿಡುಗಡೆಯಾಗಿದ್ದ ಹಿಚ್ಕಿ ಚಿತ್ರದಲ್ಲಿ ರಾಣಿ ಮುಖರ್ಜಿ ಜತೆ ಅಭಿನಯಿಸಿದ್ದರು.
5)ನಿಶಿಕಾಂತ್ ಕಾಮತ್
ಬಾಲಿವುಡ್ ನಲ್ಲಿ ಭರ್ಜರಿಯಾಗಿ ಸದ್ದು ಮಾಡಿ ಹಿಟ್ ಆಗಿದ್ದ ಅಜಯ್ ದೇವಗನ್, ತಬು ನಟನೆಯ ದೃಶ್ಯಂ, ಪೋರ್ಸ್, ಇರ್ಫಾನ್ ಖಾನ್ ನಟನೆಯ ಮದಾರಿಯಂತಹ ಸಿನಿಮಾಗಳನ್ನು ನಿರ್ದೇಶಿಷಿದ್ದ ನಿಶಿಕಾಂತ್ ಕಾಮತ್ (50ವರ್ಷ) 2020ರ ಆಗಸ್ಟ್ 17ರಂದು ಹೈದರಾಬಾದ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಪೋರ್ಸ್ ಸಿನಿಮಾದಲ್ಲಿ ಜಾನ್ ಅಬ್ರಹಾಂ ಅಭಿನಯಿಸಿದ್ದರು.
6)ರಜತ್ ಮುಖರ್ಜಿ:
ಬಾಲಿವುಡ್ ನ ನಿರ್ದೇಶಕ ರಜತ್ ಮುಖರ್ಜಿ 2020ರ ಜುಲೈ 19ರಂದು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದರು. ರಜತ್ ಮುಖರ್ಜಿ ಅವರು ಪ್ಯಾರ್ ತೂನೇ ಕ್ಯಾ ಕಿಯಾ, ವಿವೇಕ್ ಒಬೇರಾಯ್ ನಟನೆಯ ರೋಡ್ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಕೋವಿಡ್ ಸೋಂಕು ದೃಢವಾದ ನಂತರ ಸುಮಾರು ಒಂದು ತಿಂಗಳ ಕಾಲ ಉಸಿರಾಟ ತೊಂದರೆ ಅನುಭವಿಸಿದ್ದ ನಿರ್ದೇಶಕ ರಜತ್ ಅವರು ಚಿಕಿತ್ಸೆ ಫಲಕಾರಿಯಾದೆ ನಿಧನರಾಗಿದ್ದರು.
7) ಬಾಲಿವುಡ್ ನ ಖ್ಯಾತ ಹಾಸ್ಯ ನಟ ಜಗದೀಪ್
ಹಿಂದಿ ಚಿತ್ರರಂಗದ ಹಿರಿಯ ಹಾಸ್ಯ ನಟ ಜಗದೀಪ್ ಅಲಿಯಾಸ್ ಸೈಯದ್ ಇಶ್ತಿಯಾಖ್ ಶೋಲೆ, ಪುರಾನಾ ಮಂದಿರ್, ಅಂದಾಜ್ ಅಪನಾ ಅಪ್ನಾ ಸೇರಿದಂತೆ 400ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು. 2020ರ ಜುಲೈ 9ರಂದು ಜಗದೀಪ್ (81) ವಿಧಿವಶರಾಗಿದ್ದರು. ಜಗದೀಪ್ ಅಮೃತ್ ಸರದಲ್ಲಿ 1939ರ ಮಾರ್ಚ್ 29ರಂದು ಜನಿಸಿದ್ದರು.
8)ಇರ್ಫಾನ್ ಖಾನ್
ಬಾಲಿವುಡ್ ನ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಖ್ಯಾತ ನಟ ಇರ್ಫಾನ್ ಖಾನ್ 2020ರ ಏಪ್ರಿಲ್ 29ರಂದು ಕೊನೆಯುಸಿರೆಳೆದಿದ್ದರು. ಇರ್ಫಾನ್ ಸಾವಿಗೂ ಮೂರು ದಿನದ ಮೊದಲು ತಾಯಿ ತೀರಿಕೊಂಡಿದ್ದರು. 1967ರ ಜನವರಿ 7ರಂದು ಇರ್ಫಾನ್ ರಾಜಸ್ಥಾನದಲ್ಲಿ ಜನಿಸಿದ್ದರು. ಮೂರು ದಶಕಗಳ ಸಿನಿ ಜೀವನದಲ್ಲಿ ಇರ್ಫಾನ್ ಸಲಾಂ ಬಾಂಬೆ, ಹಾಸಿಲ್, ಮಕ್ಬೂಲ್, ಲೈಫ್ ಇನ್ ಎ ಮೆಟ್ರೋ, ಪಾನ್ ಸಿಂಗ್ ತೋಮರ್, ದ ಲಂಚ್ ಬಾಕ್ಸ್, ಪೀಕು, ತಲ್ವಾರ್, ಸ್ಲಮ್ ಡಾಗ್ ಮಿಲೇನಿಯರ್, ನ್ಯೂ ಯಾರ್ಕ್, ಹೈದರ್, ಅಂಗ್ರೇಜಿ ಮೀಡಿಯಂ, ಲೈಫ್ ಆಫ್ ಪೈ ಪ್ರಮುಖ ಸಿನಿಮಾವಾಗಿದೆ.
9)ಸುಶಾಂತ್ ಸಿಂಗ್ ರಜಪೂತ್
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34ವರ್ಷ) 2020ರ ಜೂನ್ 14ರಂದು ಮುಂಬೈನ ಬಾಂದ್ರಾ ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಸುಶಾಂತ್ ನಟನೆಯ ಮಾನವ್ ದೇಶಮುಖ್ ಸಿನಿಮಾ ಲಕ್ಷಾಂತರ ಪ್ರೇಕ್ಷಕರ ಮನಗೆದ್ದಿತ್ತು. 2013ರಲ್ಲಿ ತೆರೆಕಂಡಿದ್ದ ಕಾಯ್ ಪೊ ಚೇ ಸಿನಿಮಾ, ಎಂಎಸ್ ಧೋನಿ, ಅಲ್ ಟೋಲ್ಡ್ ಸ್ಟೋರಿ, ಛಿಚೋರೆ ಸಿನಿಮಾ ಹಿಟ್ ಆಗಿದ್ದವು. ಸುಶಾಂತ್ ಸಿಂಗ್ 1986ರ ಜನವರಿ 21ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ್ದರು. ಸಿಂಗ್ ಆತ್ಮಹತ್ಯೆ ಇಡೀ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ನಂತರ ಸುಶಾಂತ್ ಪ್ರಕರಣದಲ್ಲಿ ಮಾದಕ ದ್ರವ್ಯ ಜಾಲ ತಳುಕು ಹಾಕಿಕೊಂಡ ಪರಿಣಾಮ ಬಾಲಿವುಡ್ ನ ಖ್ಯಾತ ನಟ, ನಟಿಯರು ವಿಚಾರಣೆ ಎದುರಿಸುವಂತಾಗಿತ್ತು.
10)ಸರೋಜ್ ಖಾನ್
ಹಿಂದಿ ಚಿತ್ರರಂಗದ ಪ್ರಮುಖ ನೃತ್ಯ ನಿರ್ದೇಶಕರಲ್ಲಿ ಒಬ್ಬರಾದ ಸರೋಜ್ ಖಾನ್ (71ವರ್ಷ) ಅವರು 2020ರ ಜುಲೈ 3ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಬಾಲಿವುಡ್ ನಲ್ಲಿ ಮಾಸ್ಟರ್ ಜೀ ಎಂದೇ ಖ್ಯಾತರಾಗಿದ್ದ ಸರೋಜ್ ಖಾನ್ ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ನಿರ್ಮಲಾ ನಾಗ್ ಪಾಲ್ ಅಲಿಯಾಸ್ ಸರೋಜ್ ಖಾನ್ ಬಾಲ ನಟಿಯಾಗಿ ಬೆಳ್ಳಿತೆರೆಗೆ ಪ್ರವೇಶಿಸಿದ್ದರು. ಮೊದಲು ಸಹಾಯಕ ಕೋರಿಯೋಗ್ರಾಫರ್ ಆಗಿದ್ದ ಸರೋಜ್ ಖಾನ್ 1974ರಲ್ಲಿ ಗೀತಾ ಮೇರಾ ನಾಮ್ ಸಿನಿಮಾದ ಮೂಲಕ ನೃತ್ಯ ನಿರ್ದೇಶಕರಾಗಿ ಭಡ್ತಿ ಪಡೆದಿದ್ದರು.