ಅಫಜಲಪುರ: ವೈದ್ಯಾಧಿಕಾರಿಯಾಗಿ ಬಂದು ಕೇವಲ 15 ದಿನದಲ್ಲಿ 10ಕ್ಕೂ ಹೆಚ್ಚು ಸಭೆ ನಡೆಸಿದರೂ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಸರಿಪಡಿಸಲು ಸಿಬ್ಬಂದಿ ಕೈ ಜೋಡಿಸುತ್ತಿಲ್ಲ ಎಂದು ಡಾ| ಅಭಯಕುಮಾರ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯ ವೈದ್ಯರು, ಶುಶ್ರೂಷಕಿಯರು, ಗ್ರೂಪ್ ಡಿ ಸಿಬ್ಬಂದಿಗೆ ಉತ್ತಮ ಸೇವೆ ನೀಡುವಂತೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಉನ್ನತ ವ್ಯಾಸಂಗ ಮಾಡಿ ಸಣ್ಣ ಕೆಲಸ ಮಾಡೋಣವೇ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ 36 ಗ್ರೂಪ್ ಡಿ ನೌಕರರ ಪೈಕಿ 16 ಜನರಿಗೆ ನೋಟಿಸ್ ಕಳಿಸಿದ್ದೇನೆ. ಕೆಲವರು ಸೇರಿ ತಮ್ಮ ಸಂಬಳದಲ್ಲೇ ಒಂದಿಷ್ಟು ಕೂಡಿಸಿ ನಾಲ್ವರು ಖಾಸಗಿಯವರನ್ನು ನೇಮಿಸಿ ಆಸ್ಪತ್ರೆಯ ಸ್ವಚ್ಛತಾ ಕೆಲಸಕ್ಕೆ ಇಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಸಾಕಷ್ಟು ಅವಾಂತರಗಳಿವೆ. ಇವುಗಳನ್ನು ಸರಿಪಡಿಸಲು ಸಾಕಷ್ಟು ಶ್ರಮಿಸುತ್ತಿದ್ದೇನೆ. ಈ ಕುರಿತು ಮೇಲಧಿಕಾರಿಗಳಿಗೂ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಆಂಬ್ಯುಲೆನ್ಸ್‌ಗಳಿಗೆ ಇಂಧನ ಹಾಕಿಸಲು ಅನುದಾನ ಬಂದಿಲ್ಲ. ಕಳೆದ ಜುಲೈ 25ರಿಂದ ಇಂಧನ ಹಾಕಿಸುವುದನ್ನು ನಿಲ್ಲಿಸಲಾಗಿದೆ. ಪೆಟ್ರೋಲ್ ಬಂಕ್ ಮಾಲೀಕರು ಹಳೆ ಬಾಕಿ ನೀಡುವ ವರೆಗೆ ಇಂಧನ ಹಾಕುವುದಿಲ್ಲ ಎಂದಿದ್ದಾರೆ. ಹೀಗಾಗಿ ಶಾಸಕರು, ಡಿಎಚ್‌ಒ ಗಮನಕ್ಕೆ ತಂದಿದ್ದೇನೆ. ಅಲ್ಲದೇ ಆಸ್ಪತ್ರೆಯಲ್ಲಿ ಕಳೆದ ಜುಲೈ 25ರಿಂದ ಅಕ್ಟೋಬರ್ 24ರ ವರೆಗೆ ಜಮೆಯಾಗಿದ್ದ 1,90,000 ರೂ.ಗಳನ್ನು ಇಂಧನಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಅನುದಾನದ ಕೊರತೆಯಿಂದ ಬಾಣಂತಿಯರಿಗೆ ಉಪಹಾರ ನೀಡಲು ಆಗುತ್ತಿಲ್ಲ. ಅಲ್ಲದೇ ಹೆರಿಗೆಗೆ ಬರುವರ ಬಳಿ ಸಿಬ್ಬಂದಿ ಹಣ ಕೇಳುತ್ತಿರುವುದು ಕಂಡುಬಂದಿದೆ. ಅವರಿಗೆ ಹೀಗೆ ನಡೆದುಕೊಳ್ಳದೇ ಇರಲು ಹೇಳಿದರೂ ಕೇಳುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು.
ಇದೇ ವೇಳೆ ಸ್ಥಳದಲ್ಲಿದ್ದ ವಕೀಲ ಸುರೇಶ ಅವಟೆ ಮಾತನಾಡಿ, ತಾಲೂಕು ಸರ್ಕಾರಿ ಆಸ್ಪತ್ರೆ ಅವಾಂತರಗಳ ಗೂಡಾಗಿದೆ. ಇಲ್ಲಿನ ಸಮಸ್ಯೆಗಳಿಗೆ ಯಾರೂ ಶಾಶ್ವತ ಪರಿಹಾರ ಒದಗಿಸುತ್ತಿಲ್ಲ. ಇಲ್ಲಿನ ಮುಖ್ಯ ವೈದ್ಯಾಧಿಕಾರಿಯಿಂದ ಡಿ ಗ್ರೂಪ್ ನೌಕರರ ವರೆಗೆ ಎಲ್ಲರನ್ನು ತೆಗೆದು ಹೊಸಬರನ್ನು ನೇಮಿಸಬೇಕು. ಅಂದಾಗ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖಂಡರಾದ ಹಾಜಿಮಲಂಗ ಮೋರಟಗಿ, ಸದ್ದಾಂ ನಾಕೇದಾರ, ಯಲ್ಲಪ್ಪ ಗ್ಯಾನಾಗೋಳ, ಹೈಬತರಾಯ ಪಾಟೀಲ ಈ ಸಂದರ್ಭದಲ್ಲಿದ್ದರು.