Advertisement

ದೂರು-ದುಮ್ಮಾನಗಳಿಗೆ ಪಾಲಿಕೆ ಕಿವುಡು

01:31 PM Jun 14, 2019 | Suhan S |

ಹುಬ್ಬಳ್ಳಿ: ಮೂಲಭೂತ ಸೌಲಭ್ಯಗಳ ಕೊರತೆ ಸೇರಿದಂತೆ ಇತರೆ ದೂರು-ದುಮ್ಮಾನಗಳ ಬಗ್ಗೆ ಪಾಲಿಕೆ ಅಧಿಕಾರಿಗಳ ದಿವ್ಯಮೌನ ವಹಿಸಿರುವುದು ಮಹಾನಗರ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ನಾಗರಿಕ ಸಮಸ್ಯೆಗಳಿಗೆ ತಿಂಗಳುಗಟ್ಟಲೆ ಪರಿಹಾರ ಇಲ್ಲದಿರುವುದು ಗಮನಿಸಿದರೆ ಪಾಲಿಕೆ ಜೀವಂತ ಇದೆಯೋ, ಇಲ್ಲವೋ ಎಂಬ ಅನುಮಾನ ಅನೇಕರನ್ನು ಕಾಡತೊಡಗಿದೆ.

Advertisement

ಜನತೆ ಸಮಸ್ಯೆಗಳ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಂಟ್ರೋಲ್ ರೂಂಗೆ ದೂರು ನೀಡಿದರೂ ಪಾಲಿಕೆ ಸಂಬಂಧಿಸಿದ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಜನರ ಸಮಸ್ಯೆ, ದೂರು-ದುಮ್ಮಾನಗಳನ್ನು ಸ್ವೀಕರಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ರವಾನಿಸುವುದು ಹಾಗೂ ಸಮಸ್ಯೆಗೆ ಪರಿಹಾರ ನಂತರ ದೂರುದಾರರಿಗೆ ಮಾಹಿತಿ ನೀಡುವ ಮಹತ್ವದ ಉದ್ದೇಶದಿಂದ ಪಾಲಿಕೆ ಕಂಟ್ರೋಲ್ ರೂಂ ಆರಂಭಿಸಲಾಗಿದೆ. ಆದರೆ ಜನರು ಕಂಟ್ರೋಲ್ ರೂಂಗೆ ದೂರು ನೀಡುವುದಷ್ಟೇ ನಡೆಯುತ್ತಿದ್ದು, ಪಾಲಿಕೆಯಿಂದ ಪರಿಹಾರ ಇರಲಿ ಬಹುತೇಕ ಸ್ಪಂದನೆಯೂ ಇಲ್ಲವಾಗುತ್ತಿದೆ ಎಂಬ ಅಳಲು ನಾಗರಿಕರದ್ದಾಗಿದೆ.

ಪರಿಹಾರ ಶೂನ್ಯ: ಬೀದಿ ದೀಪ ಸರಿಯಾಗಿ ಉರಿಯುತ್ತಿಲ್ಲ ಎಂದು ಸಾರ್ವಜನಿಕರೊಬ್ಬರು ಕಳೆದ ತಿಂಗಳು ದೂರು ನೀಡಿದ್ದಾರೆ. ಇದಕ್ಕೆ ಪಾಲಿಕೆ ಅಧಿಕಾರಿಯೊಬ್ಬರ ದೂರವಾಣಿ ಸಂಖ್ಯೆ ನೀಡಲಾಗಿದೆ. ಅವರಿಗೆ ಫೋನಾಯಿಸಿದರೆ ಅವರು ಮತ್ತೂಬ್ಬರ ದೂರವಾಣಿ ಸಂಖ್ಯೆ ನೀಡುತ್ತಿದ್ದಾರೆಯೇ ವಿನಃ ಸಮಸ್ಯೆಗೆ ಪರಿಹಾರವಂತೂ ಕಾಣುತ್ತಿಲ್ಲ.

ಹಳೇಹುಬ್ಬಳ್ಳಿ ಆನಂದನಗರ ಬಳಿ ಇರುವ ಸಿದ್ಧರಾಮೇಶ್ವರ ನಗರದಲ್ಲಿ ಬೀದಿದೀಪ ಉರಿಯುತ್ತಿಲ್ಲವೆಂದು ಸಾರ್ವಜನಿಕ ಹನುಮಂತ ಈಳಗೇರ ಎಂಬುವರು ಮೇ 4ರಂದು ದೂರು ನೀಡಿದ್ದಾರೆ. ಕಂಪ್ಲೇಟ್ ನಂ(9704) ಇದ್ದು, ದೂರು ನೀಡಿ ಒಂದೂವರೆ ತಿಂಗಳಾದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ.

ಫೇಸ್‌ಬುಕ್‌ನಲ್ಲಿ ಆಕ್ರೋಶ: ಇಲ್ಲಿನ ಭವಾನಿ ನಗರದ ನಿವಾಸಿಯೊಬ್ಬರು ಭವಾನಿ ನಗರದ ಮುಖ್ಯ ರಸ್ತೆಯಲ್ಲಿರುವ ಅರ್ಪಾರ್ಟ್‌ಮೆಂಟ್‌ನ ಚೇಂಬರ್‌ ಬ್ಲಾಕ್‌ ಆಗಿ ರಸ್ತೆಯ ಮೇಲೆಲ್ಲ ಚರಂಡಿ ನೀರು ಹರಿಯುತ್ತಿದೆ ಎಂದು ಪಾಲಿಕೆ ಕಂಟ್ರೋಲ್ ರೂಂಗೆ ಜೂ.7ರಂದು ದೂರು ನೀಡಿದ್ದು, ಕಂಪ್ಲೇಟ್ ನಂಬರ್‌ 19493ಇದ್ದು, ಪಾಲಿಕೆಯಿಂದ ಸರಿಯಾದ ಸ್ಪಂದನೆ ಇಲ್ಲ ಎಂದು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಪಾಲಿಕೆ ಹಿಂಭಾಗ ಕೇಳುವವರೇ ಇಲ್ಲ: ಹು-ಧಾ ಮಹಾನಗರ ಪಾಲಿಕೆ ಹಿಂಭಾಗದಲ್ಲಿರುವ ಚಿಟಗುಪ್ಪಿ ಪಾರ್ಕ್‌ ಕೇಳುವವರೇ ಇಲ್ಲದಂತಾಗಿದೆ. ಹಲವಾರು ತಿಂಗಳಿಂದ ಈ ಭಾಗದಲ್ಲಿ ಬೀದಿ ದೀಪಗಳೇ ಇಲ್ಲ. ಈ ಹಿಂದೆ ಪಾಲಿಕೆಗೆ ದೂರು ನೀಡಲಾಗಿತ್ತು. ಬೀದಿದೀಪದ ಲೈನ್‌ ಅನ್ನು ಹೆಸ್ಕಾಂನವರು ಕಟ್ ಮಾಡಿದ್ದಾರೆಂದು ಹೇಳಿ ಹೊರಟು ಹೋಗಿದ್ದರು. ಹೆಸ್ಕಾಂನವರಿಗೆ ದೂರು ನೀಡಿದರೆ ಪಾಲಿಕೆಯವರು ವಿದ್ಯುತ್‌ ಕಂಬಗಳಿಗೆ ಮೀಟರ್‌ ಅಳವಡಿಸಿಲ್ಲ ಆದ್ದರಿಂದ ಕಟ್ ಮಾಡಲಾಗಿದೆ ಎಂದು ಉತ್ತರ ನೀಡುತ್ತಾರೆ. ಪಾಲಿಕೆ ಹಿಂಭಾಗದಲ್ಲೇ ಇರುವ ಈ ಸ್ಥಿತಿ ಬಗ್ಗೆ ಪಾಲಿಕೆ ಅಧಿಕಾರಿಗಳು ಗಮನ ನೀಡದಿರುವುದು ವಿಪರ್ಯಾಸ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next