ಕೋಲಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನಡೆಯುವ ಅವ್ಯವಹಾರದ ತನಿಖೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ಧಿ ಸಮಿತಿ ನಗರದಲ್ಲಿನ ಉಪನಿರ್ದೇಶಕ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿತು. ಜಿಲ್ಲೆಯಲ್ಲಿ ಇಲಾಖೆಗೆ ಒಳಪಡುವ 5 ಎಂಎಸ್‌ಪಿಟಿಸಿಗಳು ಕಾರ್ಯನಿರ್ವಹಿಸುತ್ತಿದ್ದು, ಒಬ್ಬರೇ ಉಸ್ತುವಾರಿ ಆಗಿದ್ದಾರೆ.
ಇದರಿಂದ ಹಲವು ಕಡೆ ಅವ್ಯವಹಾರ ಮತ್ತು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಕೋಲಾರ ಎಂಎಸ್ ಪಿಟಿಸಿಯಲ್ಲೂ ಅವ್ಯಹಾರ ನಡೆದಿದೆ ಎಂದು ಆರೋಪಿಸಿದರು.
ಈ ಅವ್ಯವಹಾರದ ಬಗ್ಗೆ ಪ್ರಭಾರ ಉಪನಿರ್ದೇಶಕರಾಗಿದ್ದ ಎಂ.ಸೌಮ್ಯಾ ಮೇಲಧಿಕಾರಿಗೆ ವರದಿ ಸಲ್ಲಿಸುತ್ತಾರೆ ಎಂದು ತಿಳಿದು ಪ್ರಭಾರವನ್ನು ರದ್ದುಪಡಿಸಿ, ಈ ಸ್ಥಾನಕ್ಕೆ ಎಂಜಿ ಪಾಲಿ ಅವರನ್ನು ವರ್ಗ ಮಾಡಿಸಿಕೊಂಡು ಬಂದು, ಎಂಎಸ್ ಪಿಟಿಸಿಯ ಕಾರ್ಯದರ್ಶಿಯನ್ನು ಮುಂದುವರಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಖರೀದಿಯಲ್ಲಿ ಅನುಮಾನ: ಶ್ರೀನಿವಾಸಪುರ ಎಂಎಸ್ ಟಿಪಿಸಿಯಲ್ಲಿ 2015ರಿಂದ ಈವರೆಗೆ 20 ಟನ್ ಅಕ್ಕಿ, 22 ಟನ್ ಗೋಧಿಗೆ ಲೆಕ್ಕ ನೀಡದೆ ಇಂದಿಗೂ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅಕ್ಕಿಯನ್ನು ಕೇಜಿಗೆ 27 ರೂ.ನಂತೆ, ಗೋಧಿಯನ್ನು 22 ರೂ.ನಂತೆ ಮುಕ್ತ ಮಾರುಕಟ್ಟೆಯಿಂದ ಖರೀದಿಸಲಾಗುತ್ತಿದೆ. ಈ ಬಗ್ಗೆ ಉಪನಿರ್ದೇಶಕರ ಗಮನಕ್ಕೆ ತಂದಿದ್ದರೂ ನಿರ್ಲಕ್ಷ್ಯವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆಪಾದಿಸಿದರು.
ವರ್ಗಾವಣೆಗೆ ಆಗ್ರಹ: ಎಂಎಸ್‌ಪಿಟಿಸಿಗಳಲ್ಲಿ ನಡೆಯುತ್ತಿರುವ ಅವ್ಯವಹಾರ ಮತ್ತು ಭ್ರಷ್ಟಾಚಾರದ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳು ಅಥವಾ ಇಲಾಖೆ ಮೇಲಧಿಕಾರಿಗಳಿಂದ ತನಿಖೆ ನಡೆಸಲಿ ಆದೇಶಿಸಬೇಕು, ಇಲಾಖೆ ಆದೇಶಗಳನ್ನು ಉಲ್ಲಂಘಿಸುತ್ತಿರುವ ಅಧಿಕಾರಿ ಮೇಲೆ ಕ್ರಮ ಕೈಗೊಂಡು ಅವರನ್ನು ಅಮಾನತ್ತಿನಲ್ಲಿಡಬೇಕು ಅಥವಾ ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಹೇಳಿದರು.
ವರ್ಷಕೊಬ್ಬರು ಗುತ್ತಿಗೆದಾರರ ಬದಲಿಸಿ: ಜಾತಿ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಕೋಲಾರ ಸಿಡಿಪಿಒ ರಮೇಶ್ ಅವರನ್ನು ವರ್ಗಾವಣೆ ಮಾಡಬೇಕು, 10ರಿಂದ 15 ವರ್ಷಗಳಿಂದ ಒಬ್ಬರೇ ಆಹಾರ ಸರಬರಾಜು ಮಾಡುವ ಗುತ್ತಿಗೆದಾರರು ಹಲವು ಕಡೆ ಮೋಸ ಮಾಡುತ್ತಿದ್ದು, ಗುತ್ತಿಗೆ ರದ್ದುಪಡಿಸಿ ವರ್ಷಕ್ಕೆ ಒಬ್ಬರಂತೆ ಗುತ್ತಿಗೆದಾರರನ್ನು ಬದಲಿಸಬೇಕು ಎಂದು ಆಗ್ರಹಿಸಿದರು.
ಸ್ಥಳೀಯರಿಗೆ ಆದ್ಯತೆ ನೀಡಿ: ಕೇಂದ್ರ ಕಚೇರಿಯ ಆದೇಶದಂತೆ ಪ್ರತಿ ತಿಂಗಳು 5ನೇ ತಾರೀಖೀನೊಳಗೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗೌರವಧನ ಪಾವತಿಸಲು ಕ್ರಮ ವಹಿಸಬೇಕು, ಮೊಟ್ಟೆ ಮತ್ತು ತರಕಾರಿ ಹಣವನ್ನು ಪ್ರತಿ ತಿಂಗಳು ಕಾರ್ಯಕರ್ತೆಯರ ಬ್ಯಾಂಕ್ ಖಾತಗೆ ಜಮಾ ಮಾಡಬೇಕು, ಖಾಲಿಯಾಗಿರುವ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಕೋಲಾರ ತಾಲೂಕು ಮತ್ತು ಜಿಲ್ಲೆಯ ಹೊರಗೆ ಕಾರ್ಯನಿರ್ವಹಿಸುತ್ತಿರುವ ಆಯಾ ತಾಲೂಕುಗಳ ವ್ಯಾಪ್ತಿಗೆ ಬರುವ ಕಾರ್ಯಕರ್ತೆಯರಿಗೆ ಮೊದಲ ಆದ್ಯತೆ ನೀಡಬೇಕು, ಇನ್ನಿತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಸಮಿತಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಕಲ್ವಮಂಜಲಿ ಸಿ.ಶಿವಣ್ಣ, ರಾಜ್ಯಾಧ್ಯಕ್ಷ ಎಸ್.ನಾರಾಯಣಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ ರಾಮು ಶಿವಣ್ಣ, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ,ಅಂಗನವಾಡಿ ಕಾರ್ಯಕರ್ತೆಯರು ಇತರರಿದ್ದರು.