ಬೆಂಗಳೂರು: ಇತ್ತೀಚೆಗೆ ಗಂಗಾ ಕಲ್ಯಾಣ ಯೋಜನೆಯ ಹಗರಣ ಸಂಬಂಧ ಪ್ರಕರಣ ದಾಖಲಿಸಿದ್ದ ಸರ್ಕಾರ, ಇದೀಗ ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರಕ್ಕೆ ಕಳಪೆ ಗುಣಮಟ್ಟದ ಬಟ್ಟೆ ಪೂರೈಕೆ ಮಾಡಿದ್ದ ಆರೋಪದ ಮೇರೆಗೆ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ ನಿಯಮಿತ ಅಧಿಕಾರಿಗಳ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ವಂಚನೆಗೆ ಸಂಬಂಧಿಸಿದಂತೆ ಜವಳಿ ಆಯುಕ್ತ ಬಿ. ಶ್ರೀಧರ್ ನಾಯಕ್ ಎಂಬುವರು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಎಸ್. ಮುದ್ದಯ್ಯ, ತಾಂತ್ರಿಕ ವ್ಯವಸ್ಥಾಪಕ ಬಿ.ಜಿ. ಶ್ರೀಧರ್ ಹಾಗೂ ಎಸ್ಟೇಟ್ ಆಫೀಸರ್ ಬಿ. ಲಕ್ಷ್ಮಣ್ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಿಗೆ ನೋಟಿಸ್ ಕೊಡಲು ಪೊಲೀಸರು ನಿರ್ಧರಿಸಿದ್ದಾರೆ. 2021-22ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲಾ 1ರಿಂದ 10ನೇ ತರಗ ತಿಯ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮವಸ್ತ್ರ ಪೂರೈಸಲು ರಾಜ್ಯಾದ್ಯಂತ 1,34,05,729 ಮೀಟರ್‌ಗಳ ಎರಡು ಜತೆ ಸಮವಸ್ತ್ರ ಬಟ್ಟೆ ಅಗತ್ಯವಿತ್ತು. ಹೀಗಾಗಿ ಉತ್ತಮ ಗುಣಮಟ್ಟದ ಬಟ್ಟೆ ಪೂರೈಕೆ ಮಾಡಲು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಸೂಚಿಸಲಾಗಿತ್ತು. ಆದರೆ, ಆರೋಪಿತ ಅಧಿಕಾರಿಗಳು ಗುಣಮಟ್ಟದ ಬಟ್ಟೆ ಪೂರೈಕೆ ಮಾಡಿಲ್ಲ. ಈ ವಿಚಾರದಲ್ಲಿ ಆರೋಪಿತ ಅಧಿಕಾರಿ ಮುದ್ದಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ.
ಅಲ್ಲದೆ ಪೀಣ್ಯಾ 2ನೇ ಹಂತದಲ್ಲಿರುವ ಪ್ರಿಯ ದರ್ಶಿನಿ ಸಂಸ್ಕರಣಾ ಕೇಂದ್ರದ 2 ಎಕರೆ 34 ಗುಂಟೆ ವಿಸ್ತೀರ್ಣದಲ್ಲಿರುವ ಏಳು ಕೈಗಾರಿಕಾ ಶೆಡ್ ಬಾಡಿಗೆ ಮತ್ತು ಗುತ್ತಿಗೆ ಆಧಾರದ ಮೇಲೆ ಸಾರ್ವಜನಿಕರಿಗೆ ನೀಡಲು ಸಕ್ಷಮ ಪ್ರಾಧಿಕಾರದಿಂದ ಮಾರುಕಟ್ಟೆ ದರದ ಬಗ್ಗೆ ವರದಿಯನ್ನು ಪಡೆದಿಲ್ಲ. ಆದರೂ ಶೆಡ್‌ಗಳನ್ನು 22 ವರ್ಷಗಳ ದೀರ್ಘಾವಧಿಗೆ ಬಾಡಿಗೆ ನೀಡಲು ಅವರ ಹಂತದಲ್ಲೇ ತೀರ್ಮಾನಿಸಿ ಅಲ್ಪಾವಧಿ ಟೆಂಡರ್ ಕರೆಯಲು ನಿರ್ಧರಿಸಿದ್ದಾರೆ. ಅಲ್ಲದೆ, ಟೆಂಡರ್ ನೋಟಿಫಿಕೇಷನ್ ಕೂಡ ಹೊರಡಿಸಿದ್ದಾರೆ.
ಈ ಮೂಲಕ ಮುದ್ದಯ್ಯ ಕರ್ತವ್ಯ ಲೋಪ ಎಸಗಿದ್ದಾರೆ. ಈ ಕೃತ್ಯಕ್ಕೆ ಇತರೆ ಇಬ್ಬರು ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ಶ್ರೀಧರ್ ನಾಯಕ್ ದೂರಿನಲ್ಲಿ ಆರೋಪಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿತ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸದ್ಯದಲ್ಲೇ ನೋಟಿಸ್ ನೀಡಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದರು. ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.