Advertisement
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ಎಂ. ಲತಾ ರವಿಕುಮಾರ್ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯುತ್ತಿದ್ದಾಗ ಸದಸ್ಯ ಮಹಾಲಿಂಗಪ್ಪ ಮಾತನಾಡಿ, ಚಿಕ್ಕನಾಯಕನಳ್ಳಿ ಅಕ್ಷರದಾಸೋಹದಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ. ಈ ಅವ್ಯವಹಾರವನ್ನು ಕಂಪ್ಯೂಟರ್ ಆಪರೇಟರ್ ಆಗಿದ್ದ ಶ್ರುತಿ ಎಂಬುವವರ ಮೇಲೆ ಹೊರಿಸಿ 16 ಲಕ್ಷ ರೂ. ಹಣ ಕಟ್ಟಿಸಿದ್ದಾರೆ. ಬಡ ಕುಟುಂಬ ನೋವು ತಾಳಲಾರದೇ ಆತ್ಮಹತ್ಯೆಗೂ ಯತ್ನಿಸಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
Related Articles
Advertisement
ಉನ್ನತ ಮಟ್ಟದ ತನಿಖೆ: ಅಕ್ಷರ ದಾಸೋಹದಲ್ಲಾಗಿರುವ ಅವ್ಯವಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅವ್ಯಹಾರದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಪ್ರಾಥಮಿಕ ತನಿಖೆಯಿಂದ ಅಕ್ರಮವಾಗಿರುವುದು ಖಚಿತವಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ತನಿಖೆ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್ ಭರವಸೆ ನೀಡಿದರು.
1.99 ಕೋಟಿ ರೂ. ವಾಪಸ್: ಅನುಪಾಲನಾ ವರದಿಯಲ್ಲಾದ ಲೋಪಗಳ ಬಗ್ಗೆ ಎತ್ತಿಹಿಡಿದ ಸದಸ್ಯ ವೈ.ಎಚ್. ಹುಚ್ಚಯ್ಯ, ಅಧಿಕಾರಿಗಳು ಕಾಟಾಚಾರದ ಕೆಲಸ ಮಾಡುತ್ತಾರೆ. ಸಭೆಯಲ್ಲಿ ಆಗುವುದೊಂದು, ನಿರ್ಣಯ ಬರೆಯುವುದೇ ಮತ್ತೂಂದು. ಗ್ರಾಮೀಣಾಭಿವೃದ್ಧಿ ಯೋಜನೆಯ 1.99 ಕೋಟಿ ರೂ. ವಾಪಸ್ ಹೋಗಿದೆ. ಇದಕ್ಕೆ ಹೊಣೆಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸದಸ್ಯರಾದ ಕೆಂಚಮಾರಯ್ಯ, ಜಿ.ಜೆ. ರಾಜಣ್ಣ ದನಿಗೂಡಿಸಿದರು.
ಸದಸ್ಯೆ ಶಾಂತಲಾ ರಾಜಣ್ಣ ಮಾತನಾಡಿ, ಸರಿಯಾದ ರೀತಿಯಲ್ಲಿ ನಿರ್ಣಯ ಆಗದಿದ್ದರೆ ಸಭೆಯ ಅವಶ್ಯಕತೆ ಏನು ಎಂದು ಪ್ರಶ್ನಿಸಿದರು. ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. 13ನೇ ಹಣಕಾಸು ಯೋಜನೆಯಿಂದ ಪ್ರಾರಂಭವಾದ ಕಾಮಗಾರಿ ಪೂರ್ಣಗೊಂಡಿಲ್ಲ. ಉಳಿಕೆ ಕಾಮಗಾರಿಗೆ ವಿಶೇಷ ಅನುದಾನ ತರಿಸಿ ಪೂರ್ಣಗೊಳಿಸಿ ಎಂದು ಆಗ್ರಹಿಸಿದರು.
ಸೂಕ್ತ ದಿನಾಂಕದೊಳಗೆ ಬಿಲ್ ಪಾವತಿಸಿರುವ ಬಗ್ಗೆ ಖಾತರಿಪಡಿಸಿಕೊಂಡು ಬಿಲ್ ರದ್ದಾಗಿರುವ ಬಗ್ಗೆ ಪರಿಶೀಲನೆ ನಡೆಸಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸಿಇಒ ಸೂಚಿಸಿದರು.ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಪಂ ಸದಸ್ಯರಿದ್ದರು.