Advertisement

ಗೇರಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ಅವ್ಯವಹಾರ

04:47 PM Apr 13, 2022 | Team Udayavani |

ಕನಕಪುರ: ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆಸಿರುವ ಅಧ್ಯಕ್ಷರು ಹಾಗೂ ಅಧಿಕಾರಿಗಳನ್ನು ಸಂಘದ ಸರ್ವ ಸದಸ್ಯರ ಮಹಾಸಭೆಯಲ್ಲಿ ಗೇರಹಳ್ಳಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

Advertisement

ತಾಲೂಕಿನ ಸಾತನೂರು ಹೋಬಳಿಯ ಗೇರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸಭೆಯಲ್ಲಿ ಸಂಘದ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಡೆಸಿರುವ ಅವ್ಯವಹಾರದ ಬಗ್ಗೆ ಗ್ರಾಮಸ್ಥರು ಪ್ರಶ್ನೆಗಳ ಸುರಿಮಳೆಗೈದರು.

ಸಭೆಯಲ್ಲಿ ಕೆಲಕಾಲ ಗೊಂದಲ ಗದ್ದಲ ಏರ್ಪಟ್ಟಿತು. ಗ್ರಾಮದ ರವಿ ಕಿರಣ್‌, ಪ್ರಶಾಂತ್‌ ಸೇರಿದಂತೆ ಹಲವು ಗ್ರಾಮಸ್ಥರು ಮಾತನಾಡಿ ಹಾಲು ಉತ್ಪಾದ ಕರ ಸಹಕಾರ ಸಂಘ ರಚನೆಯಾದ ಕಳೆದ 24 ವರ್ಷಗಳಿಂದ ಚಿಕ್ಕೇಗೌಡ ಅವರೇ ಅಧ್ಯಕ್ಷರಾಗಿದ್ದಾರೆ. ಚುನಾವಣೆ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಬೇಕಾದರೆ ಸಂಘದಲ್ಲಿ ಸದಸ್ಯರಾಗಿ ಷೇರು ಹೊಂದಿರಬೇಕು. ಆದರೆ ಇವರು ಸಂಘದ ಸದಸ್ಯರಲ್ಲ, ಹೈನುಗಾರಿಕೆಯಲ್ಲೂ ತೊಡಗಿಕೊಂಡಿಲ್ಲ. ಸಂಘಕ್ಕೆ ಹಾಲು ಪೂರೈಕೆಯನ್ನು ಮಾಡುತ್ತಿಲ್ಲ. ಬೇರೊಬ್ಬ ರೈತರ ಹಾಲನ್ನು ತಮ್ಮ ಹೆಸರಿನಲ್ಲಿ ಸಂಘಕ್ಕೆ ಪೂರೈಕೆ ಮಾಡುತ್ತಿದ್ದಾರೆ. ಅಧಿಕಾರಿಗಳೊಂದಿಗೆ ಶಾಮೀಲಾಗಿ ತಮಗೆ ಅರ್ಹತೆ ಇಲ್ಲದಿದ್ದರೂ 24 ವರ್ಷದಿಂದ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ ಎಂದು ಅಪಾದಿಸಿದರು.

ಇವರಿಗೆ ಪ್ರತಿಸ್ಪರ್ಧಿ ಇರಬಾರದೆಂದು ಸಂಘದಲ್ಲಿ ಬೇರೆ ಯಾರಿಗೂ ಅವಕಾಶ ಸಿಗದಂತೆ ಸದಸ್ಯರಿಗೆ ಷೇರು ನೀಡದೆ ವಂಚಿಸಿದ್ದಾರೆ. ಕಳೆದ ಎರಡು ದಶಕಗಳಿಂದ ಯಾವುದೇ ಚುನಾವಣೆ ಗಳನ್ನು ಮಾಡದೆ ತಮ್ಮ ಸಂಬಂಧಿಕರು, ಪರಿಚಯ ಸ್ಥರನ್ನು ನಿರ್ದೇಶಕರನ್ನಾಗಿ ಮಾಡಿಕೊಂಡಿದ್ದಾರೆ.ಡೈರಿ ಯಿಂದ ಪ್ರತಿದಿನ 1.5 ಲೀ.ಹಾಲನ್ನು ಮನೆಗೆ ಬಳಸಿ ಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಮುಖ್ಯ ಕಾರ್ಯನಿರ್ವಾಹಕರಾಗಿದ್ದ ಶಿವರಾಜು ಅವರು ನಿವೃತ್ತಿಯಾದ ನಂತರ ಇವರ ಮಗ ಅಶ್ವತ್ಥ್ ಕುಮಾರ್‌ ಅವರು ತಾತ್ಕಾಲಿಕವಾಗಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾಯಂ ಆಗಿ ಹುದ್ದೆಯಲ್ಲಿ ಮುಂದುವರಿಯಲು ನಿರ್ದೇಶಕರ ಸಹಿಯನ್ನು ನಕಲು ಮಾಡಿ ಅಕ್ರಮ ಎಸಗಿದ್ದಾರೆ.

Advertisement

ಕಳೆದ ಎರಡು ದಶಕಗಳಿಂದ ಒಂದೇ ಒಂದು ಸರ್ವ ಸದಸ್ಯರ ಸಭೆಯನ್ನು ಕರೆಯದೆ ಸರ್ವಾಧಿಕಾರಿ ಧೋರಣೆ ನಡೆಸಿಕೊಂಡು ಬಂದಿದ್ದಾರೆ. ತಮಗೆ ಇಷ್ಟ ಬಂದ ಹಾಗೆ ಆಡಿಟ್‌ ಮಾಡಿ ಸಂಘದಲ್ಲಿ ಅವ್ಯವಹಾರ ನಡೆಸಿದ್ದಾರೆ. ಸಂಘದ ಮೇಲ್ಚಾವಣಿಗೆ ಅಗತ್ಯಕ್ಕಿಂತಲೂ ಹೆಚ್ಚು ಖರ್ಚುವೆಚ್ಚ ತೋರಿದ್ದಾರೆ. ಸಂಘಕ್ಕೆ ನೂತನ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಮತ್ತು ಹಾಲು ಪರೀಕ್ಷಕರನ್ನು ನಿಯೋಜನೆ ಮಾಡಲು ಅಗತ್ಯ ಕ್ರಮಕೈಗಂಡು ಸಂಘದಲ್ಲಿ ನಡೆದಿರುವ ಎಲ್ಲಾ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಗೇರಹಳ್ಳಿ ಗ್ರಾಮಸ್ಥರು ಪಟ್ಟು ಹಿಡಿದು ಕುಳಿತರು.

ತಪ್ಪೊಪ್ಪಿಗೆ: ಕೊನೆಗೆ ತಮ್ಮ ತಪ್ಪನ್ನು ಒಪ್ಪಿಕೊಂಡ ಅಧ್ಯಕ್ಷ ಚಿಕ್ಕೆಗೌಡ ನಮ್ಮ ಅವಧಿಯಲ್ಲಿ ಆಗಿರುವ ಲೋಪದೋಷಗಳಿಗೆ ನಾವೇ ಜವಾಬ್ದಾರರು. ಹಣ ದುರ್ಬಳಕೆಯಾಗಿದ್ದಾರೆ ಮರುಪಾವತಿ ಮಾಡು ತ್ತೇನೆ. ಪ್ರತಿದಿನ ಮನೆಗೆ ಬಳಸಿಕೊಂಡಿರುವ ಹಾಲಿನ ದರವನ್ನು ಸಂಘಕ್ಕೆ ಪಾವತಿ ಮಾಡುವುದಾಗಿ ಒಪ್ಪಿಕೊಂಡರು.

ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹ: ಸಭೆಯಲ್ಲಿ ನಡೆದ ಎಲ್ಲ ಘಟನಾವಳಿಗಳನ್ನು ನಮೂದಿಸಿ ರೆಗ್ಯು ಲೇಷನ್‌ ಮಾಡಲಾಯಿತು. ಸಭೆಯ ನಡಾವಳಿ ಗಳನ್ನು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ವಿಸ್ತರಣಾಧಿಕಾರಿಗಳಿಗೆ ಒತ್ತಾಯ ಮಾಡಿದರು. ಆದರೆ ವಿಸ್ತರಣಾಧಿಕಾರಿಗಳು ಇದು ನಮ್ಮ ಕೆಲಸವಲ್ಲ. ನೀವೇ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಎಂದು ಕರ್ತವ್ಯದಿಂದ ಜಾರಿಕೊಂಡರು.

ಮೇಲಧಿಕಾರಿಗಳು ಇತ್ತ ಗಮನಹರಿಸಿ ಸಂಘದಲ್ಲಿ ನಡೆದಿರುವ ಅವ್ಯವಹಾರದ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯ ಮಾಡಿದರು.

ಈ ಸಭೆಯಲ್ಲಿ ಬೆಂಗಳೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಪ್ರಕಾಶ್‌, ವಿಸ್ತರಣಾಧಿಕಾರಿ ಪರ್ಹಾಜಬೀನ್‌, ಆಡಳಿತ ಮಂಡಳಿಯ ನಿರ್ದೇಶಕರು, ಗ್ರಾಮಸ್ಥರಾದ ರವೀಶ್‌, ಕಿರಣ್‌, ಕಂಚಿ ವರದರಾಜು, ಲೋಕೇಶ್‌,ಶ್ರೀನಿವಾಸ್‌, ಪ್ರಸನ್ನ, ಸರ್ವೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next