Advertisement

ಮನೆ ಹಂಚಿಕೆಯಲ್ಲಿ ಅವ್ಯವಹಾರ

01:19 PM Dec 25, 2019 | Suhan S |

ಹಾವೇರಿ: ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಗೊಳಗಾದವರಿಗೆ ಮನೆ ಹಂಚಿಕೆ ಮಾಡುವಲ್ಲಿ ಅವ್ಯವಹಾರ ನಡೆದಿರುವುದನ್ನು ಸ್ವತಃ ತಹಶೀಲ್ದಾರರೇ ಒಪ್ಪಿಕೊಂಡ ಘಟನೆ ಮಂಗಳವಾರ ನಡೆದ ತಾಪಂ ಸಾಮಾನ್ಯಸಭೆಯಲ್ಲಿ ನಡೆಯಿತು.

Advertisement

ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರು, ತಾಲೂಕಿನಲ್ಲಿ ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಹಾನಿಗಿಡಾದ ಮನೆಗಳನ್ನು ನ್ಯಾಯಬದ್ಧವಾಗಿ ಪರಿಶೀಲಿಸಿಲ್ಲ. ತಪ್ಪು ಮಾಹಿತಿ ನೀಡಿ ಅಧಿಕಾರಿಗಳು ಅವ್ಯವಹಾರ ಎಸಗುತ್ತಿದ್ದಾರೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ.

ಕೂಡಲೇ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೋರಲಿನಿಂದ ಆಗ್ರಹಿಸಿದರು. ತಾಪಂ ಇಒ ಬಸವರಾಜ, ಮಾತನಾಡಿ, ನೆರೆ ಸಂತ್ರಸ್ತರ ಮನೆ ಪರಿಹಾರ ವಿತರಣೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಅದು ತಹಶೀಲ್ದಾರ್‌ ವ್ಯಾಪ್ತಿಗೆ ಬರುತ್ತದೆ ಎನ್ನುತ್ತಿದ್ದಂತೆ ಸದಸ್ಯರು, ತಹಶೀಲ್ದಾರರನ್ನು ಸಭೆಗೆ ಕರೆಸಲು ಪಟ್ಟು ಹಿಡಿದರು. ಆಗ ತಾಪಂ ಇಒ ಅವರು ತಹಶೀಲ್ದಾರರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದರಿಂದ ಸಭೆಗೆ ತಹಶೀಲ್ದಾರರು ಆಗಮಿಸಿದರು. ಸಭೆಯಲ್ಲಿ ತಹಶೀಲ್ದಾರ್‌ ಶಂಕರ್‌ ಜಿ.ಎಸ್‌. ಮಾತನಾಡಿ, ನೆರೆ ಹಾನಿಗಿಡಾದ ಮನೆಗಳಿಗೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ ಎನ್ನುವ ಮೂಲಕ ಅವ್ಯವಹಾರ ನಡೆದಿರುವುದನ್ನು ಒಪ್ಪಿಕೊಂಡರು. ಕಳೆದ 15ದಿನಗಳ ಹಿಂದೆಯೇ ಸಭೆ ನಡೆಸಿ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಿಡಿಒಗಳಿಗೆ ನೋಟಿಸ್‌ ನೀಡಲಾಗಿದೆ. ಹಾನಿಗಿಡಾದ ಮನೆಗಳ ಪರಿಶೀಲನೆ ನಡೆಸಿ ನ್ಯಾಯಬದ್ಧವಾಗಿದ್ದರೆ ಫಲಾನುಭವಿಗಳಿಗೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಈಗಾಗಲೇ ಸ್ವತಃ ಪರಿಶೀಲಿಸಿ 2-3 ಅರ್ಜಿಗಳನ್ನು ತಿರಸ್ಕರಿಸಿದ್ದು, ಅನರ್ಹ ಫಲಾನುಭವಿಗಳನ್ನು ತೆಗೆದು ಹಾಕಲಾಗುವುದು. ಅವ್ಯವಹಾರ ಎಸಗಿದ ಅಧಿಕಾರಿಗಳ ಮೇಲೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಇನ್ನು ಮನೆ ಕಳೆದುಕೊಂಡು ರೇಷನ್‌ ಕಾರ್ಡ್‌ ಕೊಡದೆ ಇರುವವರು ಬಹಳ ಜನ ಇದ್ದಾರೆ. ಅವರ ಅರ್ಜಿಯನ್ನು ಪ್ರತ್ಯೇಕವಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಪಡಿತರಚೀಟಿ ಕೊಟ್ಟರೆ ಪರಿಹಾರ ದೊರಕಲಿದೆ ಎಂದು ತಹಶೀಲ್ದಾರ್‌ ತಿಳಿಸಿದರು.

ತಾಪಂ ಸದಸ್ಯ ಯಲ್ಲಪ್ಪ ಉಂಡಿ ಮಾತನಾಡಿ, ಮೇವುಂಡಿಯಲ್ಲಿ ಮಳೆಗೆ 30 ಕುರಿ ಸತ್ತಿದ್ದು, ಈವರೆಗೂ ಪರಿಹಾರ ಬಂದಿಲ್ಲ. ಬೆಳೆವಿಮೆ ಪರಿಹಾರ ಬಂದಿಲ್ಲ ಎಂದು ತಿಳಿಸಿದರು. ಇದಕ್ಕೆ ತಹಶೀಲ್ದಾರ್‌ ಮಾತನಾಡಿ, ತಾಲೂಕಿನಲ್ಲಿ ಮಳೆ ಸತ್ತಿರುವ ತಾಲೂಕಿನ ಎಲ್ಲ ಕುರಿಗಳ ಮಾಹಿತಿ ತೆಗೆದುಕೊಂಡು ಬಂದರೆ ಪರಿಹಾರ ಕೊಡುವುದಾಗಿ ಹೇಳಿದರು.

Advertisement

ತಾಪಂ ಸದಸ್ಯ ಮಾಲತೇಶ ಬನ್ನಿಮಟ್ಟಿ ಮಾತನಾಡಿ, ಹಾವನೂರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ 3 ವರ್ಷ ಕಳೆದರೂ ಶುದ್ಧ ಕುಡಿಯುವ ನೀರು ಜನರಿಗೆ ಸಿಗುತ್ತಿಲ್ಲ. ಪಕ್ಕದ ಹಳ್ಳಿಗೆ ಹೋಗಿ ನೀರು ತರುವ ಪರಿಸ್ಥಿಗೆ ಬಂದಿದೆ. ಇದರ ಬಗ್ಗೆ ಪ್ರತಿ ಸಭೆಯಲ್ಲಿ ಅಧಿ ಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಗ್ರಾಮೀಣ ಕುಡಿಯುವ ನೀರು ಇಲಾಖೆ ಇಂಜಿನಿಯರ್‌ ಮಾತನಾಡಿ, ತಾಲೂಕಿನಲ್ಲಿ 111 ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದು ಅದರಲ್ಲಿ ಕೇವಲ 45 ಘಟಕಗಳು ಇಲಾಖೆ ಅಧೀನದಲ್ಲಿದ್ದು, ಸದ್ಯ ಸುಸ್ಥಿತಿಯಲ್ಲಿವೆ.

ಇನ್ನುಳಿದ ಘಟಕಗಳು ಬೇರೆ ಬೇರೆ ಇಲಾಖೆ ಏಜೆನ್ಸಿಗಳ ಮೂಲಕ ನಿರ್ವಹಣೆಯಾಗುತ್ತಿದ್ದು, ಅವುಗಳ ಬಗ್ಗೆ ಮಾಹಿತಿ ಇಲ್ಲ ಎಂದರು. ಆಗ ತಾಪಂ ಸದಸ್ಯ ಸತೀಶ ಸಂದಿಮನಿ, ಘಟಕ ನಿರ್ವಹಣೆಯಲ್ಲಿ ಕೊಳ್ಳೆ ಹೊಡೆಯುವ ಕೆಲಸ ಮಾಡಬೇಡಿ. ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದರು. ಇಒ ಬಸವರಾಜ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಸಮಗ್ರ ಮಾಹಿತಿ ಕೇಳಿದ್ದಾರೆ. ಸಂಪೂರ್ಣ ಮಾಹಿತಿ ಕಲೆ ಹಾಕಿ ಸರ್ಕಾರಕ್ಕೆ ತಲುಪಿಸಬೇಕಾಗಿದೆ. ಯಾವ ಘಟಕಗಳು ಸ್ಥಗಿತಗೊಂಡಿವೆ ಅವುಗಳನ್ನು ಪುನರ್‌ ಪ್ರಾರಂಭಿಸುತ್ತೇವೆ ಎಂದರು.

ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ಇಲಾಖೆ, ರೇಷ್ಮೆ ಇಲಾಖೆ, ಆರೋಗ್ಯ ಇಲಾಖೆ ಪ್ರಗತಿ ಪರಿಶೀಲಿಸಲಾಯಿತು. ಸಭೆಯಲ್ಲಿ ತಾಪಂ ಅಧ್ಯಕ್ಷೆ ಕಮಲವ್ವ ಪಾಟೀಲ, ತಾಪಂ ಉಪಾಧ್ಯಕ್ಷೆ ಸುವರ್ಣ ಸುಕಳಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಶಿಲ್ಪಾ ಗೋಟನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next