ಕನಕಪುರ: ಕುರಿ ಮತ್ತು ಉಣ್ಣೆ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಚೆಲುವರಾಜ್ ಮತ್ತು ಸುಂದರ್ ಸೇರಿದಂತೆ ಹಲವು ಸದಸ್ಯರು ಆರೋಪಿಸಿದರು. ನಗರದ ರೋಟರಿ ಭವನದಲ್ಲಿ ರಾಮನಗರ ಜಿಲ್ಲೆಯ ಕುರಿ ಮತ್ತು ಉಣ್ಣೆ ಸಹಕಾರ ಸಂಘದ 2018-19ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಸಂಘದ ವಿರುದ್ಧ ಸದಸ್ಯರು ಹಲವು ಆರೋಪಗಳನ್ನು ಮಾಡಿದರು.
ಸಂಘಕ್ಕೆ ಹಣ ಪಾವತಿ ಮಾಡಿಲ್ಲ: ಕಳೆದ ಅವಧಿಯಲ್ಲಿ ಸಂಘದ ಅಧ್ಯಕ್ಷರಾಗಿದ್ದ ಎಚ್.ಕೆ. ತಮ್ಮಯ್ಯ ಅವರು 38 ಜನರ ಸಂಘದ ಸದಸ್ಯತ್ವಕ್ಕೆ ಹಣ ಪಡೆದು, ಸದಸ್ಯತ್ವದ ರಶೀದಿ ಕೊಡದೇ ಸದಸ್ಯತ್ವವನ್ನು ನೀಡದೆ 38 ಜನರಿಂದ 52 ಸಾವಿರ ಪಡೆದು ಸಂಘಕ್ಕೆ ಹಣ ಪಾವತಿ ಮಾಡಿಲ್ಲ. ಈ ಬಗ್ಗೆ ಸಂಘದ ಆಡಳಿತ ಮಂಡಳಿಗೆ ಮತ್ತು ಸಹಕಾರ ಸಂಘದ ಅಧಿಕಾರಿ ಸಿಇಒಗೆ ದೂರು ನೀಡಿದ್ದೇವೆ. ಮಾಜಿ ಅಧ್ಯಕ್ಷ ಎಚ್.ಕೆ.ತಮ್ಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಸಂಘದ ಅಧಿಕಾರಿಗಳು ಅಧ್ಯಕ್ಷರಿಗೆ ಸೂಚಿಸಿದ್ದಾರೆ.
ಅಧ್ಯಕ್ಷ ಚೂಡ ಲಿಂಗೇಗೌಡ ಅವರು ಮಾಜಿ ಅಧ್ಯಕ್ಷ ಎಚ್.ಕೆ. ತಮ್ಮಯ್ಯ ಅವರಿಗೆ ನೋಟಿಸ್ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ನೋಟಿಸ್ ಕೊಟ್ಟಿರುವ ನಕಲು ಪ್ರತಿ ಕೇಳಿದರೆ ಕೊಡದೇ ಸಮಜಾಯಿಸಿ
ನೀಡುತ್ತಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಚೂಡ ಲಿಂಗೇಗೌಡ ಮಾತನಾಡಿ, ಎಚ್.ಕೆ. ತಮ್ಮಯ್ಯ ಅವಧಿಯಲ್ಲಿ ನಡೆದಿರುವ ಲೋಪದೋಷಗಳನ್ನು 7 ದಿನದಲ್ಲಿ ಬಗೆಹರಿಸಲಾಗುವುದು ಎಂದು ಹೇಳಿದರು.
ಸಾತನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ್ ದೇವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಬಿ.ಎಸ್.ಗೌಡ, ಸಂಘದ ಉಪಾಧ್ಯಕ್ಷ ಜೈರಾಮ್, ನಿರ್ದೇಶಕರಾದ ಅರುಣ್‌ಗೌಡ, ಮಾಗಡಿ ಸದಸ್ಯ ಕೃಷ್ಣಮೂರ್ತಿ, ಮಹಿಳಾ ಸದಸ್ಯೆ ರೇವತಿ ಮತ್ತು ಸದಸ್ಯರು ಪಾಲ್ಗೊಂಡಿದ್ದರು.