Advertisement

ವ್ಯಂಗ್ಯತರಂಗ

12:04 PM Jul 07, 2018 | |

ಸಮಾಜ ಅನ್ನೋದು ಸರಿ, ತಪ್ಪುಗಳ ಸಂಕಲನ. ತಪ್ಪುಗಳನ್ನು ತೋರಿಸಲು ಸುಲಭ ಮಾಧ್ಯಮ ಯಾವುದು ಅಂದರೆ ಚಿತ್ರಗಳು. ಅದರಲ್ಲೂ ವ್ಯಂಗ್ಯಚಿತ್ರಗಳು ಇವೆಯಲ್ಲ, ಇದರಷ್ಟು ಪರಿಣಾಮಕಾರಿಯಾಗಿ ತಪ್ಪುಗಳನ್ನು ಎತ್ತಿ ಹೇಳುವ ಸಾಧನ ಮತ್ತೂಂದಿಲ್ಲ. ನವಿರು ಹಾಸ್ಯ, ವ್ಯಂಗ್ಯ, ಕುಚೋದ್ಯ, ವಿಡಂಬನೆ, ಸರಿಯಾಗಿ ನೋಡಿದರೆ ಸಮಸ್ಯೆಗಳಿಗೆ ಪರಿಹಾರ… ಈ ಎಲ್ಲವೂ ಗೆರೆಗಳ ಹಿಂದೆ ಅಡಗಿರುತ್ತದೆ.  

Advertisement

ನಮ್ಮ ಕರ್ನಾಟಕ, ಕಾರ್ಟೂನಿಸ್ಟ್‌ಗಳ ತವರು ಮನೆ. ಹಾಗಾಗಿ, ಹಳ್ಳಿಯಲ್ಲಿ ಕೂತು ಕಾರ್ಟೂನ್‌ಗಳನ್ನು ಗೀಚುವಷ್ಟರ ಮಟ್ಟಿಗೆ ಇದು ಪ್ರಭಾವ ಬೀರಿದೆ.  ಪ್ರಧಾನಿ ನೆಹರು ಕೂಡ ವ್ಯಂಗ್ಯಚಿತ್ರಕಾರ ಶಂಕರ್‌ಗೆ- ನೋಡಪ್ಪಾ, ನನ್ನನ್ನು ನೆಗ್ಲೆಟ್‌ ಮಾಡಬೇಕು. ನಿಮ್ಮ ಕಾರ್ಟೂನ್‌ಗೆ ನನ್ನನ್ನೂ ಸೇರಿಸಿಕೋ ಅಂತ ಹೇಳುತ್ತಿದ್ದರಂತೆ. ನಮ್ಮ ಎಸ್‌.ಎಂ. ಕೃಷ್ಣ, ದೇವೇಗೌಡರು, ಪ್ರಧಾನಿ ಮೋದಿ ಹೀಗೆ ಎಲ್ಲರೂ ಕೂಡ ವ್ಯಂಗ್ಯದ ಗೆರೆಗಳಿಗೆ “ವಸ್ತು’ ಆ ದವರೇ. 

 ಒಂದು ಸಲ ಹೀಗಾಯ್ತು. ಹಿರಿಯ ವ್ಯಂಗ್ಯಚಿತ್ರಕಾರ ನರೇಂದ್ರ ಅವರು ನೈಸ್‌ ರಸ್ತೆಗೆ ಸಂಬಂಧಿಸಿದ ಒಂದು ಕಾರ್ಟೂನ್‌ ಬಿಡಿಸಿದರು. ಅದು ಹೇಗಿತ್ತು ಎಂದರೆ ಗೂಳಿಯನ್ನು ಹೋಲುವ ಹಸು. ಅದರ ಒಂದು ಕೊಂಬಿನಲ್ಲಿ ದೇವೇಗೌಡರು, ಇನ್ನೊಂದರಲ್ಲಿ ಧರ್ಮಸಿಂಗ್‌ ನೇತಾಡುತ್ತಿರುವ ವ್ಯಂಗ್ಯಚಿತ್ರ.  

ಇದು ಪ್ರಕಟವಾಯಿತು. ಮಾರನೆ ದಿನ ಬೆಳಗ್ಗೆ ನರೇಂದ್ರರಿಗೆ ಕರೆ ಬಂತು. ಆ ಕಡೆ ಅಶೋಕ್‌ ಖೇಣಿ ಸಂತಸದಿಂದ ಮಾತನಾಡುತ್ತಿದ್ದಾರೆ.  ಹೀಗೆ ಮಾತಿನ ಪರಿಚಯವಾಗಿ, ಪರಿಚಯ ವ್ಯಂಗ್ಯಚಿತ್ರದ ಕಡೆ ತಿರುಗಿತು. ಇದರ ಫ‌ಲಶೃತಿಯೇ ದೇಶದ ಪ್ರಥಮ ವ್ಯಂಗ್ಯಚಿತ್ರಗ್ಯಾಲರಿ ಸ್ಥಾಪನೆಗೆ ಕಾರಣವಾಯಿತು. ಎಂ.ಜಿ. ರಸ್ತೆಯಲ್ಲಿರುವ ( ಕಿಡ್ಸ್‌ಕೆಂಪ್‌ ಹತ್ತಿರ) ಮಿಡ್‌ಫೋರ್ಡ ಹೌಸ್‌ನ ಬೇಸ್‌ಮೆಂಟ್‌ನಲ್ಲಿ ಆಗಸ್ಟ್‌ 16. 2007ರಲ್ಲಿ ಶುರುವಾಯಿತು.

ಈಗ ಅದಕ್ಕೆ 11 ವರ್ಷ ತುಂಬಿದೆ: ದೇಶದ ಪ್ರಪ್ರಥಮ ವ್ಯಂಗ್ಯಚಿತ್ರ ಗ್ಯಾಲರಿ ಎನ್ನುವ ಹೆಗ್ಗಳಿಕೆಗೆ ಈ ಸಂಸ್ಥೆ ಪಾತ್ರವಾಗಿದೆ. ಪ್ರಪಂಚದ ನಾನಾ ದೇಶಗಳ ಕಲಾವಿದರು ಇಲ್ಲಿಗೆ ಬಂದು ವ್ಯಂಗ್ಯಚಿತ್ರ ಪ್ರದರ್ಶನ ಮಾಡಿದ್ದಾರೆ.   ಈ ವರೆಗೆ ಹೆಚ್ಚಾ ಕಮ್ಮಿ 150ಕ್ಕೂ ಹೆಚ್ಚು ವ್ಯಂಗ್ಯ ಚಿತ್ರಪ್ರದರ್ಶನಗಳು ಇಲ್ಲಿ ಆಗಿವೆ. ನೂರಾರು  ಹಿರಿ, ಕಿರಿಯ ಕಲಾವಿದರು ಇದರಲ್ಲಿ ಭಾಗವಹಿಸಿದ್ದಾರೆ. ಪ್ರದರ್ಶನ ಮಾಡಲು ಒಂದೇ ಒಂದು ರೂಪಾಯಿ ಕೂಡ ಚಾರ್ಜು ಮಾಡುವುದಿಲ್ಲ ಅನ್ನೋದು ಇನ್ನೊಂದು ವಿಶೇಷ. 

Advertisement

ನಾರ್ವೆ ಕಾರ್ಟೂನಿಸ್ಟ್‌ಗಳು ತಮ್ಮ ಚಿತ್ರಪ್ರದರ್ಶನವನ್ನು ಇಲ್ಲಿ, ಇಲ್ಲಿನ ಕಾರ್ಟೂನಿಸ್ಟ್‌ಗಳು ತಮ್ಮ ಕಾರ್ಟೂನ್‌ ಪ್ರದರ್ಶನವನ್ನು ನಾರ್ವೆಯಲ್ಲಿ ಮಾಡಿದ್ದಾರೆ. ಮೊನ್ನೆ, ಟರ್ಕಿಯ ಇಸ್ತಾನ್‌ಬುಲ್‌ ಅಧಿಕಾರಿಗಳು ಬಂದು ಇಲ್ಲಿ ಪುಸ್ತಕ ಬಿಡುಗಡೆ ಮಾಡಿಹೋಗಿದ್ದಾರೆ. ಅಮೆರಿಕಾದ ವ್ಯಂಗ್ಯಚಿತ್ರಕಾರ್ತಿ ಲೀಸಾ ಡೊನಲಿ ಅವರು ಇಲ್ಲಿನ ಪ್ರದರ್ಶನಕ್ಕೆ ಬರುತ್ತಿದ್ದಾರೆ. ಹೀಗೆ ದೇಶ ವಿದೇಶಗಳೊಂದಿಗೆ ನಮ್ಮ ಜಾಲವನ್ನು ವಿಸ್ತರಿಸಿಕೊಂಡಿದ್ದೇವೆ ಎನ್ನುತ್ತಾರೆ ಸಂಸ್ಥೆಯ ಮ್ಯಾನೇಜಿಂಗ್‌ ಟ್ರಸ್ಟಿ ನರೇಂದ್ರ. 

ಟ್ರೈನಿಂಗ್‌ ಸೆಂಟರ್‌: ವ್ಯಂಗ್ಯಚಿತ್ರಕಾರರ ಸಂಸ್ಥೆಯು ವರ್ಕ್‌ಶಾಪ್‌ಗ್ಳನ್ನೂ ಏರ್ಪಡಿಸುತ್ತದೆ. ಎರಡು ದಿನದ ಫೌಂಡೇಷನ್‌ ಕೋರ್ಸ್‌ನಲ್ಲಿ ಈಗಾಗಲೇ ಸುಮಾರು 500ಕ್ಕೂ ಹೆಚ್ಚು ಮಂದಿ ಕಲಿತು, ಸರ್ಟಿಫಿಕೇಟನ್ನು ಪಡೆದಿದ್ದಾರೆ. ಇದರಲ್ಲಿ ಚಿತ್ರಗಳನ್ನು ಬಿಡಸೋದು ಹೇಗೆ, ಅದನ್ನು ಶುರು ಮಾಡೋದು ಹೇಗೆ, ಯೋಚನೆಗಳನ್ನು ಸೋಸಿ ಗೆರೆಗಳನ್ನೂ ಮೂಡಿಸುವುದು, ಕ್ಯಾರಿಕೇಚರ್‌, ಅನಿಮೇಷನ್‌ವರೆಗೆ ಎಲ್ಲವನ್ನೂ ಹೇಳಿಕೊಡಲಾಗುತ್ತದೆ. ಹಿರಿಯ ಕಲಾವಿದ ಗುಜ್ಜಾರಪ್ಪ ಮತ್ತವರ ತಂಡ ಇದಕ್ಕಾಗಿ ಶ್ರಮಿಸುತ್ತಿದೆ. ” ನಮ್ಮ ಈ ಪ್ರಯತ್ನಕ್ಕೆ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ. ಹೀಗಾಗಿ, ಭವಿಷ್ಯದಲ್ಲಿ ಆರು ತಿಂಗಳ, ವರ್ಷದ ಕೋರ್ಸ್‌ ಮಾಡುವ ಯೋಜನೆ ಹೆಣೆಯುತ್ತಿದ್ದೇವೆ’ ಎನ್ನುತ್ತಾರೆ ನರೇಂದ್ರ. 

ಸಾವಿರಾರು ಚಿತ್ರಗಳ ಭಂಡಾರ: ಸಂಸ್ಥೆಯಲ್ಲಿ ಹೆಚ್ಚುಕಮ್ಮಿ ಹತ್ತು ಸಾವಿರಕ್ಕಿಂತ ಹೆಚ್ಚು ವ್ಯಂಗ್ಯಚಿತ್ರಗಳಿವೆ. ಆರ್‌.ಕೆ ಲಕ್ಷ್ಮಣ್‌, ಡೆವಿಡ್‌ ಲೋ, ಶಂಕರ್‌, ಮಾಯಾಕಾಮತ್‌ ಅವರ ಅತ್ಯಮೂಲ್ಯವಾದ ಚಿತ್ರಗಳು ಇಲ್ಲಿವೆ.  ಆರ್‌. ಕೆ. ಲಕ್ಷ್ಮಣ್‌ ಅವರ ರಾಜಕೀಯ ವ್ಯಂಗ್ಯಚಿತ್ರಗಳು, ಶಂಕರ್‌ ರಚಿಸಿದ  ನೆಹರು ಅವರ ಚಿತ್ರಗಳು, ಮಾರಿಯೋ ಮಿರಾಂಡ ಅವರ ವರ್ಲ್ಡ್ಆಫ್ ಮಾರಿಯೋ ಸಂಗ್ರಹ ಎಲ್ಲವೂ ನಮ್ಮ ಚಿತ್ರ ಜಗತ್ತಿನ ಆಸ್ತಿಯಂತೆ ಕಾಪಿಡಲಾಗಿದೆ. 

ಇವಲ್ಲದೆ, ಚಿತ್ರ ಜಗತ್ತಿಗೆ ಸಂಬಂಧಿಸಿದ ಅಪರೂಪದ ಪುಸ್ತಕಗಳ ಭಂಡಾರವೂ ಇಲ್ಲಿದೆ. ಅಧ್ಯಯನ ಮಾಡುವವರಿಗೆ ಇದೊಂದು ವಿಶ್ವಕೋಶವೇ ಸರಿ. ಇದಕ್ಕಾಗಿ ಸದಾ ಸಂಸ್ಥೆಯ ಬಾಗಿಲು ತೆರೆದಿರುತ್ತದೆ. ” ಮುಂದಿನ ಜನಾಂಗಕ್ಕೆ ಉಪಯೋಗವಾಗಲು ಎಲ್ಲವನ್ನೂ ಡಿಜಿಟಲೈಸ್‌ ಮಾಡುವ ಯೋಜನೆ ಜಾರಿ ಮಾಡುತ್ತಿದ್ದೇವೆ ಎನ್ನುತ್ತಾರೆ ನರೇಂದ್ರ. ಒಂದೇ ಮಾತಿನಲ್ಲಿ ಹೇಳುವುದಾದರೆ, ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯೊಳಗೆ ಕಾಲಿಟ್ಟರೆ ವ್ಯಂಗ್ಯ ಜಗತ್ತಿನ ದಿಗ್ಗಜರನ್ನು ಭೇಟಿ ಮಾಡಿದ ಹಾಗೇ ಆಗುತ್ತದೆ. 

“ಇತ್ತೀಚೆಗೆ ವ್ಯಂಗ್ಯಚಿತ್ರಗಳ ಕಲಿಕೆಗೆ ಉತ್ತಮ ಪ್ರತ್ರಿಕ್ರಿಯೆ ದೊರೆಯುತ್ತಿದೆ. ವಂಗ್ಯಪ್ರಪಂಚದ ವಿಶ್ವವಿದ್ಯಾಲಯದಂತಿರುವ ನಮ್ಮ ಸಂಸ್ಥೆ ಮೂಲಕ ವರ್ಷದ ಕಲಿಕಾ ಕೋರ್ಸ್‌ಗಳನ್ನು ಶುರುಮಾಡುವ ಯೋಚನೆ ಮಾಡುತ್ತಿದ್ದೇವೆ. ಹಾಗೆಯೇ, ನಮ್ಮಲ್ಲಿರುವ ಅಭೂತಪೂರ್ವ ಪುಸ್ತಕ ಭಂಡಾರದ  ಡಿಜಟಲೀಕರಣಕ್ಕೂ ಸಿದ್ಧತೆಗಳನ್ನು ಮಾಡುತ್ತಿದ್ದೇವೆ. ಇದರಿಂದ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಮಹತ್ವದ ಕಾರ್ಯವನ್ನು ನಮ್ಮ ಸಂಸ್ಥೆ ಮಾಡಿದಂತಾಗುತ್ತದೆ’ 
-ನರೇಂದ್ರ, ಮ್ಯಾನೇಜಿಂಗ್‌ ಟ್ರಸ್ಟಿ.

-ದೇಶ ವಿದೇಶದ ಕಲಾವಿದರಿಂದ 150ಕ್ಕೂ ಹೆಚ್ಚು ಪ್ರದರ್ಶನ.
-500 ಜನರಿಗೆ ತರಬೇತಿ
-10ಸಾವಿರಕ್ಕೂ ಹೆಚ್ಚು ಅಮೂಲ್ಯ ವ್ಯಂಗ್ಯಚಿತ್ರಗಳ ಸಂಗ್ರಹ
 -ಸಾವಿರಾರು ಪುಸ್ತಕಗಳ ಭಂಡಾರ

Advertisement

Udayavani is now on Telegram. Click here to join our channel and stay updated with the latest news.

Next