Advertisement
ಹಿಂದೆ ಪ್ರತಿ ಹಳ್ಳಿಯಲ್ಲಿಯೂ ಹೀಗೆ ಕುಲುಮೆ ಇಟ್ಟು ರೈತರಿಗೆ ಕುಳ, ಕುಡುಗೋಲು, ಪಿಕಾಸಿ ಮುಂತಾದ ಕಬ್ಬಿಣ ಸಾಮಾನುಗಳನ್ನು ತಯಾರಿಸಿ ಕೊಡುತ್ತಿದ್ದರು. ಕಾಲಾನಂತರ ಈ ರೀತಿಯ ಕೆಲಸಗಾರರು ಹಳ್ಳಿಗಳಿಗೆ ತೆರಳಿ ರೈತರ ಬೇಡಿಕೆಗೆ ತಕ್ಕಂತೆ ಕೃಷಿ ಉಪಯೋಗಿ ವಸ್ತುಗಳನ್ನು ತಯಾರಿಸಿಕೊಡುತ್ತಿದ್ದಾರೆ.
Related Articles
Advertisement
ಕುಲಕಸುಬು ಕೈಬಿಡಲಿಲ್ಲ: ತಮ್ಮ ಕುಟುಂಬವೇ ಕಬ್ಬಿಣದ ಕೆಲಸಗಾರರ ಕುಟುಂಬ. ತಂದೆ ತಾತಂದಿರು ಇದೇ ಕೆಲಸ ಮಾಡುತ್ತಿದ್ದರು. ಗ್ರಾಮದಲ್ಲಿ ಬದುಕಿನ ಅಗತ್ಯಕ್ಕೆ ತಕ್ಕಷ್ಟು ಕೆಲಸ ಸಿಗದಿದ್ದಾಗ ವಲಸೆ ಹೋಗುವ ನಿರ್ಧಾರಕ್ಕೆ ಬಂದೆವು ಎಂದು ದೇವಾಲಾಲ್ ವಿವರಿಸಿದರು. ಹೀಗೆ ವರ್ಷಗಳ ಹಿಂದೆ ವಲಸೆ ಆರಂಭಿಸಿದ ತಮ್ಮ ಕುಟುಂಬವು ದೇಶಾದ್ಯಂತ ಸಂಚರಿಸಿದೆ. ಪ್ರತಿ ವರ್ಷ ಆರು ತಿಂಗಳು ಮಳೆಗಾಲಕ್ಕೆ ಕೃಷಿ ವಸ್ತುಗಳನ್ನು ತಯಾರಿಸಿಕೊಟ್ಟು ಆರು ತಿಂಗಳು ಸ್ವಗ್ರಾಮದಲ್ಲಿ ವಾಸವಿರುತ್ತಾರೆ.
ಚೇತರಿಕೆ ವರೆಗೂ ಕೋಲಾರದಲ್ಲೇ ಠಿಕಾಣಿ: ಹೀಗೆ ಸಂಚರಿಸುತ್ತಲೇ ಕೋಲಾರಕ್ಕೆ ಬಂದಿದ್ದ ದೇವಾಲಾಲ್ ಕುಟುಂಬವು ಪ್ರತಿ ನಗರ, ಪಟ್ಟಣ, ಗ್ರಾಮದಲ್ಲಿ ಒಂದು ಅಥವಾ ಎರಡು ದಿನಗಳು ಮಾತ್ರವೇ ಉಳಿಯುತ್ತಾರೆ. ಆದರೆ, ಕೋಲಾರದಲ್ಲಿ ಒಂದು ವಾರಕ್ಕಿಂತಲೂ ಹೆಚ್ಚು ಅವಧಿಯಲ್ಲಿ ಉಳಿದಿದ್ದಾರೆ. ಹಾಗಂದ ಮಾತ್ರಕ್ಕೆ ಇಲ್ಲಿ ವ್ಯಾಪಾರ ಹೆಚ್ಚು ಎಂದೇನು ಇಲ್ಲ. ಕಬ್ಬಿಣದ ಕೆಲಸ ಮಾಡುತ್ತಿದ್ದ ತಮ್ಮ ಕುಟುಂಬದ ಗರ್ಭಿಣಿ ಮಹಿಳೆಗೆ ರಸ್ತೆ ಬದಿ ವಾಹನವೊಂದು ಬಡಿದು ಅಪಘಾತವಾಗಿತ್ತು. ಆಕೆಯನ್ನು ಅಪಘಾತ ಮಾಡಿದವರೇ ಜಾಲಪ್ಪ ಆಸ್ಪತ್ರೆ ಸೇರಿಸಿದ್ದಾರೆ. ಈಗ ಮಹಿಳೆಗೆ ಹೆರಿಗೆಯಾಗಿದ್ದು, ಅಮ್ಮ ಮಗು ಆರೋಗ್ಯವಾಗಿದ್ದಾರೆ. ಆಕೆ ಚೇತರಿಸಿಕೊಳ್ಳುವವರೆಗೂ ಕೋಲಾರದಲ್ಲಿಯೇ ಬಿಡಾರ ಹೂಡುವಂತಾಗಿದೆಯೆಂದು ವಿವರಿಸುತ್ತಾರೆ.
ಅದೃಷ್ಟವಿದ್ದಂತೆ ವ್ಯಾಪಾರ: ದೇವಾಲಾಲ್ ಕುಟುಂಬವು ದೇಶಾದ್ಯಂತ ಸುತ್ತಾಡಿ ಕಬ್ಬಿಣದ ವಸ್ತುಗಳನ್ನು ತಯಾರಿಸಿಕೊಡುತ್ತಿದ್ದರೂ ಎಲ್ಲೆಡೆ ಒಂದೇ ರೀತಿಯಲ್ಲಿ ವ್ಯಾಪಾರವಾಗುವುದಿಲ್ಲ. ಪ್ರತಿ ನಿತ್ಯವೂ ಒಂದೊಂದು ಕುಟುಂಬವು 20 ರಿಂದ 30 ವಸ್ತುಗಳನ್ನು ತಯಾರಿಸುತ್ತಾರೆ. ಆದರೆ, ವ್ಯಾಪಾರವಾಗುವುದು ಕನಿಷ್ಠ 200 ರಿಂದ ಗರಿಷ್ಠ 2000 ವರೆಗೂ ಮಾತ್ರವೇ. ಕೆಲವೊಮ್ಮೆ ಇಡೀ ದಿನ ಕೆಲಸ ಮಾಡಿದರೂ ಬಿಡಿಗಾಸು ವ್ಯಾಪಾರವಾಗುವುದಿಲ್ಲ. ಇಂತ ಏರಿಳಿತಗಳನ್ನು ಕಂಡರೂ ದೇವಾಲಾಲ್ ಕುಟುಂಬಕ್ಕೆ ಕುಲಕಸುಬೇ ಆಧಾರ.
ವಿವಿಧ ವಸ್ತುಗಳ ತಯಾರಿ: ಸಾಮಾನ್ಯವಾಗಿ ರೈತರು ಬಳಸುವ ಮಚ್ಚು, ಕೊಡಲಿ, ಗುದ್ದಲಿ, ಚಲಿಕೆ, ಪಿಕಾಶಿ, ಸುತ್ತಿ, ಗೃಹಬಳಕೆಯ ಕತ್ತಿ ಇತ್ಯಾದಿ ವಸ್ತುಗಳನ್ನು ತಾವೇ ಕಬ್ಬಿಣ ಖರೀದಿಸಿ ಮಾಡಿಕೊಡುತ್ತಾರೆ. ಇಲ್ಲವೇ ಜನರು ಹಳೆಯ ಕಬ್ಬಿಣ ತಂದು ಕೊಟ್ಟರೆ ಅದನ್ನು ಅವರ ಮುಂದೆಯೇ ಕಾಯಿಸಿ ಬೇಕಾದ ಆಕಾರ ಮಾಡಿ ಕೊಡುತ್ತಾರೆ.
ದೇವಾಲಾಲ್ ಕುಟುಂಬವು ಕುಲಕಸಬನ್ನೇ ಆಧಾರವಾಗಿ ಬದುಕುತ್ತಿದ್ದು, ಯುವತಿ ಪ್ರಿಯಾಂಕರಿಂದ ಹಿಡಿದು ಇವರ 40 ಮಂದಿ ಕುಟುಂಬದಲ್ಲಿ ಕಾಣಿಸುತ್ತಿದ್ದ ಹತ್ತಾರು ಮಂದಿ ಮಕ್ಕಳಲ್ಲಿ ಯಾರೂ ಶಾಲೆಗೆ ಹೋದವರಲ್ಲ. ಓದಿದವರಲ್ಲ. ಕುಲಕಸಬನ್ನು ನಂಬಿಯೇ ಅವರು ಬದುಕುತ್ತಿದ್ದಾರೆ. ಅತ್ಯಾಧುನಿಕ ಯುಗದಲ್ಲಿಯೂ ಅಕ್ಷರಾಭ್ಯಾಸ ಇಲ್ಲದೇ ಕೆಲಸಕ್ಕಾಗಿ ಕೈಯೊಡ್ಡದೆ ಕುಲಕಸಬನ್ನೇ ಆಧರಿಸಿ ಊರಿಂದ ಊರಿಗೆ ವಲಸೆ ಮಾಡುತ್ತಾ ಬದುಕುತ್ತಿರುವ ದೇವಾಲಾಲ್ ಕುಟುಂಬಕ್ಕೆ ಸರ್ಕಾರದ ಯಾವುದೇ ಸೌಲಭ್ಯಗಳ ಹಂಗಿಲ್ಲ. ತಾವಾಯಿತು, ತಮ್ಮ ಶ್ರಮವಾಯಿತು, ಪೂರ್ವಕರಿಂದ ಬಳುವಳಿಯಾಗಿ ಬಂದಿರುವ ವೃತ್ತಿ ಕೌಶಲ್ಯವೇ ಅವರ ಬದುಕು ಬೆಳಗುತ್ತಿದೆ.
● ಕೆ.ಎಸ್.ಗಣೇಶ್