ನವಿಮುಂಬಯಿ: ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ವತಿಯಿಂದ ಶ್ರೀ ಹನುಮಾನ್ ಜಯಂತಿ ಮಹೋತ್ಸವವು ಮಾ. 31ರಂದು ಅಪರಾಹ್ನ 2.30ರಿಂದ ಐರೋಲಿಯ ಸೆಕ್ಟರ್ 15ರಲ್ಲಿರುವ ಹೆಗ್ಗಡೆ ಭವನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು. ಸಂಜೆ 4.30 ರಿಂದ ಬನ್ನಂಜೆ ಶ್ರೀ ರಾಘವೇಂದ್ರತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ವಿಶ್ವಶಾಂತಿ ಮತ್ತು ಶನಿದೋಷ ಪರಿಹಾರ ಹಾಗೂ ಸಕಲ ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಶನಿ ದೇವರಿಗೆ ಸಾಮೂಹಿಕ ಎಳ್ಳುಗಂಟು ದೀಪೋತ್ಸವವು ವಿಜೃಂಭಣೆಯಿಂದ ನಡೆಯಿತು.
ಇದೇ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಬನ್ನಂಜೆ ಶ್ರೀ ರಾಘವೇಂದ್ರ ತೀರ್ಥ ಸ್ವಾಮೀಜಿಗಳು, ವಿಶ್ವಶಾಂತಿ ಮತ್ತು ಶನಿದೋಷ ಪರಿಹಾರಕ್ಕಾಗಿ ನಡೆಸಿದ ಈ ಸಾಮೂಹಿಕ ಎಳ್ಳುಗಂಟು ದೀಪೋತ್ಸವದಿಂದ ನಮ್ಮ ಸಕಲ ಇಷ್ಟಾರ್ಥಗಳು ಸಿದ್ಧಿಯಾಗಿ ಶನಿ ದೋಷವು ನಿವಾರಣೆಯಾಗುತ್ತದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಯುವ ಪೀಳಿಗೆಯಲ್ಲಿ ಧಾರ್ಮಿಕ ಚಿಂತನೆ ಬೆಳೆಯುತ್ತದೆ. ಹೆಗ್ಗಡೆ ಸೇವಾ ಸಂಘವು ಹನುಮಾನ್ ಜಯಂತಿಯ ಸುಸಂದರ್ಭದಲ್ಲಿ ಬಹಳ ಅಪರೂಪ ಎಂಬಂತೆ ಅಚ್ಚುಕಟ್ಟಾಗಿ ಶ್ರೀ ಶನಿ ದೇವರಿಗೆ ಸಾಮೂಹಿಕ ಎಳ್ಳುಗಂಟು ದೀಪೋತ್ಸವವನ್ನು ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ನನ್ನನ್ನು ಇಲ್ಲಿಗೆ ಕರೆಸಿ, ಇಂತಹ ಒಂದು ಪುಣ್ಯ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ವನ್ನು ಕಲ್ಪಿಸಿಕೊಟ್ಟಿದ್ದೀರಿ. ಭಾಗಿಯಾದ ಎಲ್ಲರಿಗೂ ಶ್ರೀ ಶನಿದೇವರು ಹಾಗೂ ಹನುಮಾನ್ ದೇವರು ಆಯುರಾರೋಗ್ಯ, ಸಂಪತ್ತನ್ನು ಕರುಣಿಸಲಿ ಎಂದು ನುಡಿದು ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಬನ್ನಂಜೆ ಶ್ರೀ ರಾಘವೇಂದ್ರ ತೀರ್ಥ ಸ್ವಾಮೀಜಿಗಳನ್ನು ಹೆಗ್ಗಡೆ ಸೇವಾ ಸಂಘ ಮುಂಬಯಿ ವತಿಯಿಂದ ಸಂಸ್ಥೆಯ ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಿದರು. ಸಂಜೆ 5 ರಿಂದ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಿತು. ಸಮಾಜ ಬಾಂಧವರು ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು. ಸಂಜೆ 5 ರಿಂದ ಭಕ್ತ ಸುಧಾಮ ಹರಿ ಕಥಾಮೃತವು ವಿದ್ವಾನ್ ಕೈರಬೆಟ್ಟು ಶ್ರೀ ವಿಶ್ವನಾಥ್ ಭಟ್ ಬಳಗದವರಿಂದ ನಡೆದು ಭಕ್ತಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಯಿತು.
ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ವಿಜಯ ಬಿ. ಹೆಗ್ಡೆ, ಗೌರವಾಧ್ಯಕ್ಷ ಸಂಜೀವ ಪಿ. ಹೆಗ್ಡೆ, ಗೌರವ ಪ್ರಧಾನ ಕಾರ್ಯದರ್ಶಿ ಶಂಕರ್ ಆರ್. ಹೆಗ್ಡೆ, ಕೋಶಾಧಿಕಾರಿ ರಮೇಶ್ ಎಂ. ಹೆಗ್ಡೆ, ಉಪಾಧ್ಯಕ್ಷ ಸುರೇಶ್ ಹೆಗ್ಡೆ, ಜತೆ ಕಾರ್ಯದರ್ಶಿ ರವಿ ಎಸ್. ಹೆಗ್ಡೆ, ಜತೆ ಕೋಶಾಧಿಕಾರಿ ಚಂದ್ರಶೇಖರ್ ಬಿ. ಹೆಗ್ಡೆ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು ಹಾಗೂ ಸದಸ್ಯರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮವು ಜರಗಿತು. ಮುಂಬಯಿ, ನವಿಮುಂಬಯಿ ಹಾಗೂ ಇತರ ಉಪನಗರಗಳ ವಿವಿಧ ತುಳು-ಕನ್ನಡ ಹಾಗೂ ಜಾತೀಯ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಭಕ್ತಾಭಿಮಾನಿಗಳು, ಹಿತೈಷಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಸ್ಥಳೀಯ ಉದ್ಯಮಿಗಳು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
ಕೊನೆಯಲ್ಲಿ ರಶ್ಮಿ ಕ್ಯಾಟರರ್ ಐರೋಲಿ ಇವರಿಂದ ಅನ್ನ ಸಂತರ್ಪಣೆಯನ್ನು ಆಯೋಜಿಸ ಲಾಗಿತ್ತು. ಪರಿಸರದ ತುಳು-ಕನ್ನಡಿಗರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ: ಸುಭಾಷ್ ಶಿರಿಯಾ