Advertisement
ಕೋವಿಡ್-19 ಹರಡುವುದನ್ನು ತಡೆಯಲು ಇಲ್ಲಿಯೂ ಲಾಕ್ ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ವರಾಡ್ಕರ್ ಸ್ವತಃ ಸೋಂಕಿತರ ಚಿಕಿತ್ಸೆಗೆ ಇಳಿದು, ವೈದ್ಯಕೀಯ ಸಮುದಾಯದ ಮುಂಚೂಣಿಯಲ್ಲಿ ನಿಂತಿದ್ದಾರೆ. ಇದರಿಂದ ವೈದ್ಯಕೀಯ ಸಮುದಾಯಕ್ಕೂ ನೈತಿಕ ಬೆಂಬಲ ಸಿಕ್ಕಂತಾಗಿದೆ.
ಎರಡು ತಿಂಗಳ ಹಿಂದೆಯಷ್ಟೇ ವರಾಡ್ಕರ್‌ಗೆ ವಿಫಲ ಪ್ರಧಾನಿ ಎಂಬ ಹಣೆಪಟ್ಟಿ ಇತ್ತು. ವಸತಿ ಸಮಸ್ಯೆಯನ್ನು ಬಗೆಹರಿಸಲು ವಿಫಲರಾದರೆಂಬ ಟೀಕೆಗೆ ಗುರಿಯಾಗಿದ್ದರು. ಫೆಬ್ರವರಿಯಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಅವರ ಪಕ್ಷ ತೃತೀಯ ಸ್ಥಾನಕ್ಕೆ ಕುಸಿದಿದೆ. ಆದರೂ ಅವರು ಉಸ್ತುವಾರಿ ಪ್ರಧಾನಿಯಾಗಿ ಈಗಲೂ ಅಧಿಕಾರದಲ್ಲಿದ್ದಾರೆ. ದೇಶದಲ್ಲಿ ಕೋವಿಡ್-19 ಹಾವಳಿ ತೀವ್ರಗೊಳ್ಳುತ್ತಿರುವಂತೆಯೇ ಡಾ| ವರಾಡ್ಕರ್ ತನ್ನ ವೈದ್ಯಕೀಯ ಸೇವೆಯನ್ನು ಮರು ನೋಂದಣಿ ಮಾಡಿ ರಂಗಕ್ಕಿಳಿದರು. ವಾರದಲ್ಲಿ ಅರ್ಧ ದಿನ ಸೋಂಕು ಇದೆ ಎಂಬ ಶಂಕೆಯಿಂದ ಕರೆ ಮಾಡುವ ಜನರಿಗೆ ಸಲಹೆ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಉಳಿದ ಸಮಯ ಆಸ್ಪತ್ರೆಗಳಿಗೆ, ಪ್ರಯೋಗಾಲಯಗಳಿಗೆ ಭೇಟಿ ನೀಡುವುದು, ಸೋಂಕು ತೀವ್ರವಾಗಿರುವ ಪ್ರದೇಶಗಳನ್ನು ನಿರಂತರವಾಗಿ ಪರಾಮರ್ಶಿಸುವ ಕಾರ್ಯಗಳಲ್ಲಿ ನಿರತರಾಗಿದ್ದಾರೆ.
Related Articles
Advertisement
ಐರ್‌ಲ್ಯಾಂಡಿನಲ್ಲಿ ಇಷ್ಟರ ತನಕ 270ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ ಹಾಗೂ ಸುಮಾರು 6,500 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿನ ವಿರುದ್ಧ ಹಗಲಿರುಳು ಹೋರಾಡುತ್ತಿರುವ ವೈದ್ಯಕೀಯ ಸಮುದಾಯಕ್ಕೆ ಸ್ವತಃ ಪ್ರಧಾನಿಯೇ ಮುಂಚೂಣಿಯಲ್ಲಿ ನಿಂತು ತಮ್ಮನ್ನು ಮುನ್ನಡೆಸುತ್ತಿರುವುದು ಭಾರೀ ಸ್ಫೂರ್ತಿ ನೀಡಿದೆ.
ಭಾರತ ಮೂಲದವರುಡಾ| ಲಿಯೊ ವರಾಡ್ಕರ್ ಭಾರತೀಯ ಮೂಲದವರು. ಅವರ ತಂದೆ ಅಶೋಕ್ ವರಾಡ್ಕರ್ ಮೂಲ ಮನೆ ಮಹಾರಾಷ್ಟ್ರದ ರತ್ನಗಿರಿ ಸಮೀಪ ಇದೆ. ಅಶೋಕ್ ವರಾಡ್ಕರ್ ಮುಂಬಯಿಯಲ್ಲಿ ವೈದ್ಯರಾಗಿದ್ದರು. 1960ರಲ್ಲಿ ಬ್ರಿಟನ್‌ಗೆ ವಲಸೆ ಹೋಗಿ ಅಲ್ಲಿಯೇ ನೆಲೆಯಾದರು. ಅಲ್ಲಿನ ನರ್ಸ್ ಮರಿಯಂ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಡಾ| ಲಿಯೊ ವರಾಡ್ಕರ್ ಡಬ್ಲಿನ್‌ನಲ್ಲಿ ಜನಿಸಿದರು. ಪ್ರಶಂಸೆಗಳ ಸುರಿಮಳೆ
ಯಾವ ಜನರು ಡಾ| ವರಾಡ್ಕರ್ ಅವರನ್ನು ವಿಫಲ ನಾಯಕ ಎಂದು ಜರೆದಿದ್ದಾರೋ ಅವರೇ ಈಗ ಸೋಂಕಿನ ವಿರುದ್ಧ ಕೈಗೊಂಡಿರುವ ಕ್ರಮಗಳನ್ನು ನೋಡಿ ಸಮರ್ಥ ನಾಯಕ ಎಂದು ಪ್ರಶಂಸಿಸುತ್ತಿದ್ದಾರೆ. ಸೋಂಕು ತೀವ್ರಗೊಳ್ಳುವ ಮುನ್ಸೂಚನೆ ಸಿಕ್ಕಿದ ಕೂಡಲೇ ವರಾಡ್ಕರ್ ಜನಪ್ರಿಯ ಪ್ಯಾಟಿಕ್ಸ್ ಡೇ ಉತ್ಸವವನ್ನು ನಿರ್ದಾಕ್ಷಿಣ್ಯವಾಗಿ ರದ್ದುಗೊಳಿಸಿದರು. ಪ್ರಾಥಮಿಕ ಹಂತದಲ್ಲೇ ಜನರನ್ನು ಕೋವಿಡ್ ಪರೀಕ್ಷೆಗೊಳಪಡಿಸಿದರು. ಹೊಟೇಲ್, ಪಬ್ ಮತ್ತು ಶಾಲೆಗಳನ್ನು ಮುಚ್ಚಿಸಿದರು. ಚುನಾವಣೆ ಬಳಿಕ ವರಾಡ್ಕರ್ ರಾಜಕೀಯ ನಾಯಕರ ಶ್ರೇಯಾಂಕದಲ್ಲಿ ಆರು ಅಥವಾ ಏಳನೇ ಸ್ಥಾನಕ್ಕೆ ಜಾರಿದ್ದರು. ಆದರೆ ಈಗ ಮರಳಿ ಅಗ್ರಸ್ಥಾನಕ್ಕೇರಿದ್ದಾರೆ. ಈಗ ಡಾ|ವರಾಡ್ಕರ್ ಐರ್‌ಲ್ಯಾಂಡಿನ ಜನಪ್ರಿಯ ನಾಯಕನಾಗಿ ಮಿಂಚುತ್ತಿದ್ದಾರೆ. ನಾವು ಕೋವಿಡ್ ಹರಡುವುದನ್ನು ತಡೆಯಬೇಕಿದೆ. ಜತೆಗೆ ಕೋವಿಡ್ ಕುರಿತಾದ ಭಯ ಹರಡುವುದನ್ನೂ ತಡೆಯಬೇಕು. ಭೀತಿಯೂ ಒಂದು ವೈರಸ್ ಇದು ಡಾ| ವರಾಡ್ಕರ್ ದೇಶದ ಜನರಿಗೆ ನೀಡಿದ ಅಭಯ. ವರಾಡ್ಕರ್‌ರ ಸಹೋದರಿಯರು ಮತ್ತು ಅವರ ಪತಿಯಂದಿರೂ ವೈದ್ಯಕೀಯ ಕ್ಷೇತ್ರದಲ್ಲಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಜನಸೇವೆ ಮಾಡುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಸೂಪರ್‌ಹೀರೊಗಳು ಟೋಪಿ ಧರಿಸಿರಲೇಬೇಕೆಂದಿಲ್ಲ. ಅವರು ಮಾಸ್ಕ್ ಮತ್ತು ಗೌನ್ (ವೈದ್ಯಕೀಯ) ಧರಿಸಿರಬಹುದು. – ಡಾ| ವರಾಡ್ಕರ್