ಲಂಡನ್: ಐರ್ಲೆಂಡ್‌ನ ಲೇಖಕ ಪೌಲ್ ಲಿಂಚ್ ಅವರ “ಪ್ರಾಫೆಟ್ ಸಾಂಗ್’ ಪ್ರಸಕ್ತ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಲಂಡನ್ ಮೂಲದ ಭಾರತೀಯ ಸಂಜಾತ ಲೇಖಕಿ ಚೇತನಾ ಮರೂ ಅವರ ಚೊಚ್ಚಲ “ವೆಸ್ಟರ್ನ್ ಲೇನ್’ ಕಾದಂಬರಿಯನ್ನು ಹಿಂದಿಕ್ಕಿ “ಪ್ರಾಫೆಟ್ ಸಾಂಗ್’ ಬೂಕರ್‌ಗೆ ಭಾಜನವಾಗಿದೆ.
ಲಿಂಚ್(46) ಅವರು ಈ ಕಾದಂಬರಿಯಲ್ಲಿ ನಿರಂಕುಶ ಪ್ರಭುತ್ವದ ಹಿಡಿತದಲ್ಲಿರುವ ಐರ್ಲೆಂಡ್‌ನ ನರಕಕೂಪದಂಥ ಸ್ಥಿತಿಯನ್ನು ಪ್ರಸ್ತುತಪಡಿಸಿದ್ದಾರೆ.
ಪ್ರಜಾಸತ್ತಾತ್ಮಕ ನಿಯಮಗಳನ್ನೇ ಅನುಸರಿಸಿಕೊಂಡು ಬಂದಿದ್ದ ಕುಟುಂಬವೊಂದಕ್ಕೆ ಎದುರಾಗುವ ಹೊಸ ಭಯಾನಕ ಜಗತ್ತು, ಅಲ್ಲಿ ಕಣ್ಮರೆಯಾಗುತ್ತಿರುವ ಪ್ರಜಾಸತ್ತಾತ್ಮಕ ಮೌಲ್ಯಗಳು, ಇದರಿಂದ ಆ ಕುಟುಂಬ ಪಡುವ ಪಾಡು, ಗೊಂದಲವೇ ಈ ಕಥೆಯ ತಿರುಳು.
ಲಿಂಚ್ ಅವರು ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಪಡೆಯುತ್ತಿರುವ 5ನೇ ಐರಿಶ್ ಲೇಖಕ.
ಕಳೆದ ವರ್ಷ ಶ್ರೀಲಂಕಾದ ನಾಗರಿಕ ಯುದ್ಧವನ್ನು ಕೇಂದ್ರವಾಗಿಸಿಕೊಂಡು ಶೇಹನ್ ಕರುಣತಿಲಕ ಅವರು ಬರೆದಿದ್ದ “ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೆಡಾ’ ಬೂಕರ್‌ಗೆ ಭಾಜನವಾಗಿತ್ತು.