Advertisement

ಟೋಕಿಯೊ ಒಲಿಂಪಿಕ್ಸ್‌ಗೆ ಇರ್ಫಾನ್‌

12:30 AM Mar 18, 2019 | Team Udayavani |

ಹೊಸದಿಲ್ಲಿ: ಜಪಾನಿನಲ್ಲಿ ನಡೆದ “ಏಶ್ಯನ್‌ ರೇಸ್‌ ವಾಕಿಂಗ್‌ ಚಾಂಪಿಯನ್‌ಶಿಪ್‌’ ಕೂಟವನ್ನು 4ನೇ ಸ್ಥಾನದಲ್ಲಿ ಮುಗಿಸಿದ ಭಾರತದ ಆ್ಯತ್ಲೀಟ್‌ ಇರ್ಫಾನ್‌ ಕೆ.ಟಿ. 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಇದರೊಂದಿಗೆ ಅವರು ಟೋಕಿಯೊ ಒಲಿಂಪಿಕ್ಸ್‌ ಆ್ಯತ್ಲೆಟಿಕ್ಸ್‌ ಸ್ಪರ್ಧೆಗೆ ಅರ್ಹತೆ ಸಂಪಾದಿಸಿದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇರಳದ ಇರ್ಫಾನ್‌ 20 ಕಿ.ಮೀ. ಓಟವನ್ನು 1 ಗಂಟೆ, 20 ನಿಮಿಷ, 57 ಸೆಕೆಂಡ್‌ಗಳಲ್ಲಿ ಮುಗಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತಾ ಮಾನದಂಡ 1 ಗಂಟೆ, 21 ನಿಮಿಷ. ಇದರೊಂದಿಗೆ ಸೆಪ್ಟಂಬರ್‌ ತಿಂಗಳಿನಲ್ಲಿ ನಡೆಯಲಿರುವ “ಐಎಎಎಫ್ ವಿಶ್ವ ಚಾಂಪಿಯನ್‌ಶಿಪ್‌’ ಕೂಟದಲ್ಲೂ  ಇರ್ಫಾನ್‌ ಅರ್ಹತೆ ಸಂಪಾದಿಸಿದ್ದಾರೆ. 

Advertisement

ಎರಡನೇ ಒಲಿಂಪಿಕ್ಸ್‌
ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿಕೊಳ್ಳುವ ಮೂಲಕ ಇರ್ಫಾನ್‌ 2ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದಕ್ಕೂ ಮುನ್ನ 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಇರ್ಫಾನ್‌ ಭಾಗವಹಿಸಿದ್ದರು. ಕಳೆದ ವರ್ಷ ಕಾಮನ್ವೆಲ್ತ್‌ ಗೇಮ್ಸ್‌ ಸ್ಪರ್ಧಿಸಿದ್ದ ಇರ್ಫಾನ್‌ “ನೋ ನೀಡಲ್‌ ಪಾಲಿಸಿ’ ಮುರಿದಿದ್ದಾರೆ ಎಂಬ ಕಾರಣಕ್ಕೆ ತವರಿಗೆ ವಾಪಸಾಗಿದ್ದರು.

ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ  ಪಡೆದ ಉಳಿದಿಬ್ಬರು ಭಾರತೀಯರೆಂದರೆ ದೇವಿಂದರ್‌ (1:21.22) ಮತ್ತು ಗಣಪತಿ (1:22.12).  ವನಿತೆಯರ 20 ಕಿ.ಮೀ. ರೇಸ್‌ ವಾಕ್‌ ವಿಭಾಗದಲ್ಲಿ ಸೌಮ್ಯ ಬೇಬಿ 1 ಗಂಟೆ, 36 ನಿಮಿಷ, 08 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ 4ನೇ ಸ್ಥಾನ ಸಂಪಾದಿಸಿದರು. ಹೀಗಾಗಿ ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಶಿಪ್‌ ಕೂಟಗಳೆರಡಕ್ಕೂ ಅರ್ಹತೆ ಪಡೆಯುವಲ್ಲಿ ವಿಫ‌ಲರಾದರು. ಒಲಿಂಪಿಕ್ಸ್‌ ಅರ್ಹತಾ ಮಾನದಂಡ 1:31:00 ಮತ್ತು ವಿಶ್ವ ಚಾಂಪಿಯನ್‌ಶಿಪ್‌ ಅರ್ಹತಾ ಮಾನದಂಡ 1:33:30.

Advertisement

Udayavani is now on Telegram. Click here to join our channel and stay updated with the latest news.

Next