Advertisement

ಇರ್ಫಾನ್‌ ಪಠಾಣ್‌ ಕ್ರಿಕೆಟ್‌ ವಿದಾಯ

10:38 AM Jan 05, 2020 | Sriram |

ಮುಂಬಯಿ: ಹದಿನಾರು ವರ್ಷಗಳ ಹಿಂದೆ ಕಪಿಲ್‌ದೇವ್‌ ಅವರ ಉತ್ತರಾಧಿಕಾರಿ ಎಂಬ ಹೆಗ್ಗಳಿಕೆಯೊಂದಿಗೆ ಭಾರತ ತಂಡವನ್ನು ಪ್ರವೇಶಿಸಿದ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಶನಿವಾರ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದರು.

Advertisement

ಎಡಗೈ ಸೀಮ್‌ ಬೌಲಿಂಗ್‌ ಆಲ್‌ರೌಂಡ್‌ ಸಾಧನೆಯ ಮೂಲಕ ಮಿಂಚತೊಡಗಿದರೂ ಪದೇಪದೇ ಕಾಡುತ್ತಿದ್ದ ಗಾಯದ ಸಮಸ್ಯೆ ಎನ್ನುವುದು ಇರ್ಫಾನ್‌ ಕ್ರಿಕೆಟ್‌ ಬದುಕಿಗೆ ಕಂಟಕವಾಗಿ ಕಾಡತೊಡಗಿತು. ಹೀಗಾಗಿ ಕಪಿಲ್‌ದೇವ್‌ ಸ್ಥಾನವನ್ನು ತುಂಬಲು ಅವರಿಂದ ಸಾಧ್ಯವಾಗಲೇ ಇಲ್ಲ.

ಸ್ವಿಂಗ್‌ ಸ್ಪೆಷಲಿಸ್ಟ್‌
ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಎಡಗೈ ಸ್ವಿಂಗ್‌ ಎಸೆತಗಳ ಮೂಲಕ ಅಪಾಯಕಾರಿಯಾಗಿ ಗೋಚರಿಸುತ್ತಿದ್ದ ಇರ್ಫಾನ್‌ ಪಠಾಣ್‌ 2003ರ ಆಸ್ಟ್ರೇಲಿಯ ಪ್ರವಾಸದ ವೇಳೆ ಅಡಿಲೇಡ್‌ನ‌ಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿದ್ದರು. 2008ರ ಬಳಿಕ ಯಾವುದೇ ಟೆಸ್ಟ್‌ನಲ್ಲಿ ಕಾಣಿಸಿಕೊಳ್ಳಲಿಲ್ಲ. 2004-2012ರ ಅವಧಿಯಲ್ಲಿ ಏಕದಿನ ತಂಡದ ಸದಸ್ಯರಾಗಿದ್ದರು.

25 ಟೆಸ್ಟ್‌ಗಳಿಂದ 1,105 ರನ್‌, 100 ವಿಕೆಟ್‌; 120 ಏಕದಿನ ಪಂದ್ಯಗಳಿಂದ 1,544 ರನ್‌ ಹಾಗೂ 173 ವಿಕೆಟ್‌; 24 ಟಿ20 ಪಂದ್ಯಗಳಿಂದ 172 ರನ್‌ ಹಾಗೂ 28 ವಿಕೆಟ್‌ ಉರುಳಿಸಿದ್ದು ಇರ್ಫಾನ್‌ ಅವರ ಸಾಧನೆ.

ಟಿ20 ವಿಶ್ವಕಪ್‌ ಹೀರೋ
2007ರ ಚೊಚ್ಚಲ ಟಿ20 ವಿಶ್ವಕಪ್‌ ಪಂದ್ಯಾವಳಿಯ ವೇಳೆ ಭಾರತ ತಂಡದ ಸ್ಟಾರ್‌ ಆಟಗಾರನಾಗಿದ್ದ ಪಠಾಣ್‌, ಪಾಕಿಸ್ಥಾನ ವಿರುದ್ಧದ ಫೈನಲ್‌ ಮುಖಾಮುಖೀಯಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. 2006ರ ಪಾಕಿಸ್ಥಾನ ಪ್ರವಾಸದ ವೇಳೆ ಕರಾಚಿ ಟೆಸ್ಟ್‌ ಪಂದ್ಯದ ಪ್ರಥಮ ಓವರಿನಲ್ಲೇ ಹ್ಯಾಟ್ರಿಕ್‌ ಸಾಧಿಸಿದ್ದು ಪಠಾಣ್‌ ಪರಾಕ್ರಮಕ್ಕೆ ಸಾಕ್ಷಿ. ಕೊನೆಯ 3 ಎಸೆತಗಳಲ್ಲಿ ಅವರು ಸಲ್ಮಾನ್‌ ಬಟ್‌, ಯೂನಿಸ್‌ ಖಾನ್‌ ಮತ್ತು ಮೊಹಮ್ಮದ್‌ ಯೂಸುಫ್ ವಿಕೆಟ್‌ ಉರುಳಿಸಿದ್ದರು.

Advertisement

ಆಸ್ಟ್ರೇಲಿಯ ವಿರುದ್ಧದ 2008ರ ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ಭಾರತದ 72 ರನ್‌ ಜಯದಲ್ಲೂ ಇರ್ಫಾನ್‌ ಕೊಡುಗೆ ಮಹತ್ವದ್ದಾಗಿತ್ತು. ಆದರೆ ಸತತವಾಗಿ ಕಾಡುತ್ತಿದ್ದ ಗಾಯದ ಸಮಸ್ಯೆ ಇರ್ಫಾನ್‌ ಅವರ ಕ್ರಿಕೆಟ್‌ ಬದುಕಿನ ಹಾದಿಯನ್ನೇ ತಪ್ಪಿಸಿತು.

ಜಮ್ಮು ಕಾಶ್ಮೀರ ಪರ ಆಟ
ಮೂಲತಃ ಬರೋಡದ ಕ್ರಿಕೆಟಿಗನಾಗಿರುವ ಇರ್ಫಾನ್‌ ಪಠಾಣ್‌, ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರವನ್ನು ಪ್ರತಿನಿಧಿಸಿದ್ದರು. ಫೆಬ್ರವರಿಯಲ್ಲಿ ಈ ತಂಡದ ಪರವಾಗಿಯೇ ಕೊನೆಯ ಸಲ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next