ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ಈಗಾಗಲೇ ಹಲವಾರು ಮಹತ್ವದ ಬದಲಾವಣೆ ತಂದಿದೆ. ಇದೀಗ ರೈಲು ಟಿಕೆಟ್ ಗಾಗಿ ಪ್ರಯಾಣಿಕರು ದೊಡ್ಡ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅಗತ್ಯವೂ ಇಲ್ಲ. ಹೊಸ ತಂತ್ರಜ್ಞಾನ ಆ ಕೆಲಸವನ್ನು ಇನ್ನಷ್ಟು ಸರಳಗೊಳಿಸಿದೆ. ಹೌದು ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಟೂರಿಸಂ ಕಾರ್ಪೋರೇಶನ್ ಗ್ರಾಹಕರಿಗಾಗಿ “ಬುಕ್ ನೌ, ಪೇ ಲೇಟರ್ (ಮೊದಲು ಟಿಕೆಟ್ ಬುಕ್ ಮಾಡಿ ನಂತರ ಹಣ ಪಾವತಿಸಿ) ಎಂಬ ಹೊಸ ಸೇವೆಯನ್ನು ಜಾರಿಗೆ ತಂದಿದೆ.
ಏನಿದು ಬುಕ್ ನೌ, ಪೇ ಲೇಟರ್:
*ಐಆರ್ ಸಿಟಿಸಿಯ ಅಧಿಕೃತ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡುವುದು ಇನ್ನಷ್ಟು ಸಲೀಸಲಾಗಿದ್ದು, ಇ-ಪೇ ಲೇಟರ್ ಆಯ್ಕೆಯನ್ನು ಬಳಸಿಕೊಂಡು ಟಿಕೆಟ್ ಬುಕ್ ಮಾಡಬಹುದಾಗಿದೆ.
*ePay later ಸೇವೆ ಕಾಯ್ದಿರಿಸುವ (ರಿಸರ್ವ್ಡ್) ಹಾಗೂ ತತ್ಕಾಲ್ ಟಿಕೆಟ್ ಗೂ ಲಭ್ಯವಿದೆ ಎಂದು ಐಆರ್ ಸಿಟಿಸಿ ಹೇಳಿದೆ.
*ಈ ಆಯ್ಕೆಯಿಂದ ಹೆಚ್ಚು ಲಾಭ ಗ್ರಾಹಕರಿಗೆ. ಯಾಕೆಂದರೆ ತತ್ಕಾಲ್ ಟಿಕೆಟ್ ಖರೀದಿಸುವಾಗ ಯಾವುದೇ ವಿಳಂಬವಾಗಲಿ ಅಥವಾ ಪಾವತಿ ಗೇಟ್ ವೇ ವಿಫಲವಾಗುವ ಪ್ರಮೇಯವೇ ಇಲ್ಲ
*ಈ ನೂತನ ಸೌಲಭ್ಯ ಇ-ಟಿಕೆಟ್ಸ್ “ಇ-ಪೇ ಲೇಟರ್” ಆಯ್ಕೆ ಮೂಲಕ ಲಭ್ಯವಾಗಲಿದೆ. ಇ ಪೇ ಲೇಟರ್ ಡಿಜಿಟಲ್ ಪಾವತಿ ವಿಧಾನವಾಗಿದ್ದು, ಇದನ್ನು ಅರ್ಥಶಾಸ್ತ್ರ ಫಿನ್ ಟೆಕ್ ಪ್ರೈವೇಟ್ ಲಿಮಿಟೆಡ್ ಅಭಿವೃದ್ದಿಪಡಿಸಿದೆ.
*ಗ್ರಾಹಕರು ಬುಕ್ ನೌ, ಪೇ ಲೇಟರ್ ಆಯ್ಕೆ ಬಳಸಿ ಟಿಕೆಟ್ ಬುಕ್ ಮಾಡಿದ 14 ದಿನದೊಳಗೆ ಹಣ ಪಾವತಿಸಬೇಕಾಗಿದೆ.
*ಗ್ರಾಹಕ/ಗ್ರಾಹಕಿಯರು ಇದಕ್ಕೆ ಶೇ.3.50ರಷ್ಟು ಬಡ್ಡಿ ಹಾಗೂ ಅನ್ವಯವಾಗುವ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.