Advertisement

ಅಮೆರಿಕ ವಿರುದ್ಧ ಇರಾನ್‌ ಪರೋಕ್ಷ ಯುದ್ಧ?

11:27 AM Jan 05, 2020 | sudhir |

ಟೆಹರಾನ್‌: ಪ್ರಭಾವಿ ಸೇನಾ ಕಮಾಂಡರ್‌ ಜ. ಖಾಸಿಮ್‌ ಸೋಲೆಮನಿಯನ್ನು ಕೊಂದು ಹಾಕಿದ ಅಮೆರಿಕದ ವಿರುದ್ಧ ಅತ್ಯುಗ್ರ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್‌ ಘೋಷಿಸಿದೆಯಾದರೂ, ಅಮೆರಿಕದ ವಿರುದ್ಧ ನೇರವಾಗಿ ಯುದ್ಧ ಸಾರುವಷ್ಟು ಸಾಮರ್ಥ್ಯ ಇರಾನ್‌ಗಿಲ್ಲ. ಆದರೆ, ಈ ದೇಶವು ಅಮೆರಿಕದ ಮೇಲೆ ಇತರೆ ಪರೋಕ್ಷ ವಿಧಾನಗಳ ಮೂಲಕ ಸಮರ ಸಾರುವ ಸಾಧ್ಯತೆಯಂತೂ ಇದ್ದೇ ಇದೆ.

Advertisement

ಇರಾನ್‌ ಹೊಂದಿರುವ ಸೇನಾ ಬಲ ಅತ್ಯಲ್ಪ. ಆದರೆ ಮಧ್ಯಪ್ರಾಚ್ಯ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇರಾನ್‌ ತನ್ನ ಪರ ಒಲವು ಹೊಂದಿರುವವರ ಗುಂಪನ್ನು ರಚಿಸಿಕೊಂಡಿದೆ. ಅವರ ಮೂಲಕ ಸೈಬರ್‌ ವಾರ್‌, ಆತ್ಮಾಹುತಿ ದಾಳಿ ಸೇರಿದಂತೆ ಹಲವು ರೀತಿಯಲ್ಲಿ “ಅಸಾಂಪ್ರದಾಯಿಕ ಯುದ್ಧ’ ನಡೆಸಬಹುದು. ಏಕೆಂದರೆ ಸದ್ಯ ಕೊಲ್ಲಲ್ಪಟ್ಟಿರುವ ಸೋಲೆಮನಿ ಅಂಥ ಯುದ್ಧ ತಂತ್ರಗಳಲ್ಲಿ ನಿಪುಣ.

ಯೆಮೆನ್‌ನಲ್ಲಿ ಹುತಿ ಬಂಡುಕೋರರಿಗೆ, ಇರಾಕ್‌ನಲ್ಲಿ ಶಿಯಾ ಉಗ್ರರಿಗೆ, ಲೆಬನಾನ್‌ನಲ್ಲಿ ಹಿಜೂºಲಾ ಸಂಘಟನೆಗೆ ಇರಾನ್‌ ಬೆಂಬಲ ನೀಡುತ್ತಿದೆ. ಹೀಗಾಗಿ, ಅಸಾಂಪ್ರದಾಯಿಕ ರೀತಿಯಲ್ಲಿ ಕಾದಾಟಕ್ಕೆ ಇಳಿಯುವ ಸಾಧ್ಯತೆಯೇ ಅಧಿಕ ಎಂದು ಶ್ವೇತ ಭವನದಲ್ಲಿ ಮಧ್ಯ ಪ್ರಾಚ್ಯ ಮತ್ತು ಕೊಲ್ಲಿ ರಾಷ್ಟ್ರಗಳ ಸಂಯೋಜಕರಾಗಿದ್ದ ರಾಬರ್ಟ್‌ ಮಲ್ಲೆ, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಬೆನ್‌ ರೋಡ್ಸ್‌ ಅಮೆರಿಕದ ವಿಶೇಷ ರಾಯಭಾರಿಯಾಗಿದ್ದ ಬ್ರೆಟ್‌ ಮೆಕ್‌ಗ್ರುಕ್‌ ಪ್ರತಿಪಾದಿಸಿದ್ದಾರೆ.

1. ಮಧ್ಯಪ್ರಾಚ್ಯದಾದ್ಯಂತ ದಾಳಿ:
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನೆ, ರಾಯಭಾರ ಕಚೇರಿಗಳನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗೆ ಸೋಲೆಮನ್‌ ಯೋಜನೆ ರೂಪಿಸಿದ್ದ ಎನ್ನುವುದು ಪೆಂಟಗನ್‌ನ ಹೇಳಿಕೆ. ಕಮಾಂಡರ್‌ ಹತನಾಗಿದ್ದರೂ, ಆತ ರೂಪಿಸಿದ ಯೋಜನೆ ಹಾಗೇ ಇದೆ. ಈ ಅಳುಕೇ ಈಗ ಅಮೆರಿಕವನ್ನು ಕಾಡುತ್ತಿದೆ. ಇರಾಕ್‌, ಸಿರಿಯಾ, ಲೆಬನಾನ್‌ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಇರುವ ತನ್ನ ರಾಯಭಾರ ಕಚೇರಿ, ಸಿಬ್ಬಂದಿ, ಸೇನಾ ಪಡೆ ಮತ್ತು ಪ್ರಜೆಗಳನ್ನು ರಕ್ಷಿಸುವ ಅನಿವಾರ್ಯತೆ ಅದಕ್ಕಿದೆ.

2. ರಾಕೆಟ್‌ ದಾಳಿ:
ಮಧ್ಯಪ್ರಾಚ್ಯ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಾಗಿರುವ ವಿಶೇಷವಾಗಿ ಇಸ್ರೇಲ್‌, ಸೌದಿ ಅರೇಬಿಯಾ ಅಥವಾ ಯುಎಇಗಳ ಮೇಲೆ ಪದೇ ಪದೆ ರಾಕೆಟ್‌ ದಾಳಿ ನಡೆಸಿ ತೊಂದರೆ ನೀಡುವ ಸಾಧ್ಯತೆಗಳೂ ಇವೆ. ಜತೆಗೆ ಸೇನಾ ಪಡೆಗಳ ಮೇಲೆ ವಿವಿಧ ರೀತಿಯಲ್ಲಿ ದಾಳಿ ನಡೆಸಿ, ಇರಾನ್‌ ತೊಂದರೆ ಕೊಡಬಹುದು.

Advertisement

3. ಅಪಹರಣ, ಸೈಬರ್‌ ವಾರ್‌:
ಅಮೆರಿಕದ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗಳು, ಸೇನಾಪಡೆಯ ಅಧಿಕಾರಿಗಳು, ಯೋಧರನ್ನು ಅಪಹರಿಸಿ ಕೊಲ್ಲಬಹುದು. ಜತೆಗೆ ಸೈಬರ್‌ ವಾರ್‌ ಘೋಷಿಸಬಹುದು. ಐರೋಪ್ಯ ಒಕ್ಕೂಟ, ಆಫ್ರಿಕಾ, ದಕ್ಷಿಣ ಅಮೆರಿಕ ರಾಷ್ಟ್ರಗಳಲ್ಲಿರುವ ಈ ಅಸಾಂಪ್ರದಾಯಿಕ ಯುದ್ಧ ಕ್ರಮಗಳನ್ನು ಯಥೇತ್ಛವಾಗಿ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

4. ಸೋಲೆಮನಿ ಸ್ನೇಹಿತರು:
ಇರಾನ್‌ನ ಇಸ್ಲಾಮಿಕ್‌ ರೆವೊಲ್ಯೂಷನರಿ ಗಾರ್ಡ್ಸ್ ಕಾಪ್ಸ್‌ìನ ಹಿರಿಯ ಕಮಾಂಡರ್‌ ಆಗಿದ್ದ ಸೋಲೆಮನಿಗೆ ಹಲವು ಉಗ್ರ ಸಂಘಟನೆಗಳಲ್ಲಿ ಮಿತ್ರರಿದ್ದಾರೆ. ಇರಾನ್‌ ಸೇನೆಯ ಖಡ್ಸ್‌ ಪಡೆಯ ಮುಖ್ಯಸ್ಥನಾಗಿದ್ದುಕೊಂಡು ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಹಲವು ಉಗ್ರ ಸಂಘಟನೆಗಳಿಗೆ ಆತ ತರಬೇತಿಯನ್ನು ಹಿಂದಿನ ಅವಧಿಯಲ್ಲಿ ನೀಡಿದ್ದುಂಟು. ಅದನ್ನು ದಾಳವಾಗಿ ಬಳಸಿಕೊಂಡು ಅಮೆರಿಕದ ವಿರುದ್ಧ ಉಗ್ರ ಸಂಘಟನೆಗಳನ್ನು ಛೂ ಬಿಡುವ ಸಾಧ್ಯತೆಯೂ ಇಲ್ಲದೇ ಇಲ್ಲ. ಅದಕ್ಕೆ ಪೂರಕವಾಗಿ ಶುಕ್ರವಾರವೇ ಅಮೆರಿಕ ವಿರುದ್ಧ ಲೆಬನಾನ್‌ನ ಉಗ್ರ ಸಂಘಟನೆ ಹಿಜ್ಬುಲಾ ನಾಯಕ ಹಸನ್‌ ನಸ್ರುಲ್ಲಾ ಸೇಡು ತೀರಿಸಿಯೇ ಸಿದ್ಧ ಎಂದು ಘೋಷಿಸಿಕೊಂಡಿದ್ದ.

ದಿಲ್ಲಿ ಸೇರಿದಂತೆ ಹಲವೆಡೆ ಸೋಲೆಮನಿ ದುಷ್ಕೃತ್ಯ
ಇರಾನ್‌ನ ಹಿರಿಯ ಕಮಾಂಡರ್‌ ಸೋಲೆಮನಿ ಭಾರತದಲ್ಲಿಯೂ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದ. ಆತ ಅಮಾಯಕರ ಸಾವನ್ನು ಸಂಭ್ರಮಿಸುತ್ತಿದ್ದ. ಹೀಗಾಗಿಯೇ ಆತನನ್ನು ಕೊಲ್ಲಲು ಆದೇಶ ನೀಡಲಾಯಿತು ಎನ್ನುವ ಮೂಲಕ ಅಮೆರಿಕ ಅಧ್ಯಕ್ಷ ಟ್ರಂಪ್‌ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದರಿಂದಾಗಿ ವಿಶ್ವದಲ್ಲಿ ಯುದ್ಧಾತುರತೆ ನಿರ್ಮಾಣವಾಗಲಾರದು ಎಂದಿದ್ದಾರೆ. ಶುಕ್ರವಾರದ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಟ್ರಂಪ್‌, “ಸೋಲೆಮನಿ ನವದೆಹಲಿ, ಲಂಡನ್‌ ಸೇರಿದಂತೆ ವಿಶ್ವದ ಹಲವೆಡೆ ಉಗ್ರ ಕೃತ್ಯಗಳಿಗೆ ಕುಮ್ಮಕ್ಕು ನೀಡಿದ್ದ’ ಎಂದು ಹೇಳಿದ್ದಾರೆ.

ಯಾವತ್ತೋ ಸಾಯಬೇಕಾಗಿತ್ತು:
ಸೋಲೆಮನಿ ಯಾವತ್ತೋ ಸಾಯಬೇಕಾಗಿತ್ತು ಎಂದು ಹೇಳಿದ ಅಧ್ಯಕ್ಷ ಟ್ರಂಪ್‌ ಆತನನ್ನು ವಧಿಸುವ ಮೂಲಕ ನಡೆಯಲಿರುವ ಸಂಭಾವ್ಯ ಯುದ್ಧ ತಡೆದಿದ್ದೇವೆ ಎಂದು ಸಮರ್ಥನೆ ನೀಡಿದ್ದಾರೆ. “ಪ್ರತಿಭಟನಾ ನಿರತರಾಗಿದ್ದ 1 ಸಾವಿರ ಪ್ರಜೆಗಳನ್ನು ಇರಾನ್‌ ಸರ್ಕಾರ ಹಿಂಸಿಸಿ ಕೊಂದಿದೆ. ಅದಕ್ಕೆ ಸೋಲೆಮನಿಯೇ ನೇತೃತ್ವ ವಹಿಸಿದ್ದ. ಹೀಗಾಗಿ, ಆತನನ್ನು ಕೊಂದ ಕಾರಣ ಸಾವಿರಾರು ಮುಗ್ಧ ಜೀವಗಳನ್ನು ರಕ್ಷಿಸಲಾಗಿದೆ ಎಂದಿದ್ದಾರೆ. ಇರಾನ್‌ ಸೇನಾಧಿಕಾರಿಯ ಹತ್ಯೆಯಿಂದ ಜಗತ್ತಿನಲ್ಲಿ ಯುದ್ಧ ಭೀತಿ ಉಂಟಾಗದು ಎಂದೂ ಟ್ರಂಪ್‌ ಹೇಳಿದ್ದಾರೆ.

ನಂ.1 ಭಯೋತ್ಪಾದಕ:
ತಮ್ಮ ನಿರ್ದೇಶನದ ಮೇರೆಗೇ ಆತನನ್ನು ವಧಿಸಲಾಯಿತು ಎಂದು ಘೋಷಣೆ ಮಾಡಿದ ಟ್ರಂಪ್‌, ಹಲವು ಘಾತಕ ಕೃತ್ಯಗಳ ರೂವಾರಿ ಆತ “ವಿಶ್ವದ ನಂ.1 ಭಯೋತ್ಪಾದಕ’ ಎಂದಿದ್ದಾರೆ. ತಮ್ಮ ನೇತೃತ್ವದ ಸರ್ಕಾರದಲ್ಲಿ ಉಗ್ರರ ವಿರುದ್ಧ ಯಾವ ಕರುಣೆಯೂ ಇಲ್ಲ. ಅಮೆರಿಕದ ಹಿತಾಸಕ್ತಿಗೆ, ನಾಗರಿಕರಿಗೆ ತೊಂದರೆ ಕೊಟ್ಟವರನ್ನು ಎಲ್ಲಿಯೇ ಇದ್ದರೂ, ಹುಡುಕಿ ಕೊಲ್ಲುತ್ತೇವೆ. ದೇಶದ ರಾಜತಾಂತ್ರಿಕರು, ಸೈನಿಕರು, ನಾಗರಿಕರನ್ನು ರಕ್ಷಣೆ ಮಾಡಿಯೇ ಮಾಡುತ್ತೇವೆ. ಸೋಲೆಮನಿ ನೇತೃತ್ವದಲ್ಲಿ ಇಸ್ಲಾಮಿಕ್‌ ರೆವೊಲ್ಯೂಷನರಿ ಗಾರ್ಡ್‌ ಕಾಪ್ಸ್‌ì ಮತ್ತು ಖುದ್‌Õ ಪಡೆ ಸಾವಿರಾರು ಮಂದಿಯನ್ನು ಗುರಿಯಾಗಿಸಿಕೊಂಡು, ಕೊಂದಿದೆ. ನಾವು ವಿಶ್ವದಲ್ಲಿಯೇ ಅತ್ಯಂತ ಉತ್ತಮ ಗುಪ್ತಚರ ವ್ಯವಸ್ಥೆ, ಸೇನೆಯನ್ನು ಹೊಂದಿದ್ದೇವೆ. ಅಮೆರಿಕದವರನ್ನು ಜಗತ್ತಿನಲ್ಲಿ ಎಲ್ಲಿಯೇ ಆಗಲಿ ಹೆದರಿಸಿದರೆ, ಅದನ್ನು ಪರಿಹರಿಸಲಾಗುತ್ತದೆ ಮತ್ತು ಯಾವುದೇ ಅಪಾಯವನ್ನು ಎದುರಿಸಲು ಸಿದ್ಧರಾಗಿದ್ದೇವೆ ಎಂದು ಇರಾನ್‌ ಅನ್ನು ಕೇಂದ್ರೀಕರಿಸಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next