Advertisement
ಕೆಲವರು ಹಸಿರು, ಬಿಳಿ ಮತ್ತು ಕೆಂಪು ಬಣ್ಣದ ಧ್ವಜವನ್ನು ಹೊದ್ದುಕೊಂಡರೆ, ಕೆಲವರು ಧ್ವಜದ ಬಣ್ಣವನ್ನು ಮುಖದಲ್ಲಿ ಚಿತ್ರಿಸಿಕೊಂಡಿದ್ದರು. ಇದು ಫುಟ್‌ಬಾಲ್‌ನ ಮಹಿಳಾ ಅಭಿಮಾನಿಗಳಿಗೆ ಸಿಕ್ಕಿರುವ ಅಪೂರ್ವ ಗೆಲುವು ಎನ್ನುವುದನ್ನು ಅವರ ನಗುವೇ ಸಾರುತ್ತಿತ್ತು. ಇರಾನ್ ತಂಡ ಗೋಲು ಬಾರಿಸಿದಾಗಲೆಲ್ಲ ಮಹಿಳೆಯರ ಸಂಭ್ರಮದ ಕೂಗು ಮುಗಿಲು ಮುಟ್ಟುತ್ತಿತ್ತು!
ಸಂಪ್ರದಾಯವಾದಿ ದೇಶವಾದ ಇರಾನಿನ ಧಾರ್ಮಿಕ ಮುಖಂಡರು ಸುಮಾರು 40 ವರ್ಷಗಳ ಹಿಂದೆ, ಮಹಿಳೆಯರು ಫುಟ್‌ಬಾಲ್ ಮತ್ತು ಇನ್ನಿತರ ಆಟಗಳನ್ನು ನೋಡಬಾರದು ಎಂದು ಫತ್ವಾ ಹೊರಡಿಸಿದ್ದರು. ಚಡ್ಡಿ, ಟಿ-ಶರ್ಟ್ ಧರಿಸಿ ಆಡುವ ಪುರುಷರ ದೇಹಗಳನ್ನು ಮಹಿಳೆಯರು ನೋಡಬಾರದು ಎನ್ನುವುದೇ ಈ ಫತ್ವಾ ಹಿಂದಿದ್ದ ತರ್ಕ. ಕಳೆದ ವರ್ಷ ಸಹಾರ್ ಖೋಡಯರಿಯ ಎಂಬ ಯುವತಿ ಯುವಕನಂತೆ ವೇಷ ಧರಿಸಿ ಫುಟ್‌ಬಾಲ್ ಪಂದ್ಯ ವೀಕ್ಷಿಸಲು ಹೋಗಿ ಸಿಕ್ಕಿ ಬಿದ್ದಿದ್ದಳು. ಈ ತಪ್ಪಿಗೆ ಜೈಲು ಶಿಕ್ಷೆಯಾಗಬಹುದು ಎಂದು ಹೆದರಿ ಆಕೆ ನ್ಯಾಯಾಲಯದಲ್ಲೇ ಆತ್ಮಾಹುತಿ ಮಾಡಿಕೊಂಡ ಘಟನೆಯೂ ಸಂಭವಿಸಿತ್ತು.
Related Articles
ಈ ಘಟನೆಯ ಬಳಿಕ ಎಚ್ಚೆತ್ತ ಫಿಫಾ ಮಹಿಳೆಯರಿಗೆ ಯಾವುದೇ ನಿರ್ಬಂಧವಿಲ್ಲದೆ ಫುಟ್‌ಬಾಲ್ ವೀಕ್ಷಿಸಲು ಅವಕಾಶ ನೀಡಬೇಕು, ಇದಕ್ಕೆ ತಪ್ಪಿದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿತ್ತು. ವಿಶ್ವ ಫುಟ್‌ಬಾಲ್ ಕೂಟದಿಂದ ಬಹಿಷ್ಕಾರಕ್ಕೆ ಒಳಗಾಗುವ ಭೀತಿಯಲ್ಲಿದ್ದ ಇರಾನ್, ಕಡೆಗೂ ಮಹಿಳೆಯರಿಗೆ ಫುಟ್‌ಬಾಲ್ ವೀಕ್ಷಿಸಲು ಅನುಮತಿ ನೀಡಿತು. ಇದರ ಪರಿಣಾಮವೆಂಬಂತೆ, ಗುರುವಾರ ಮೊದಲ ಬಾರಿಗೆ ಮಹಿಳೆಯರು ಸ್ಟೇಡಿಯಂ ಮುಗಿಬಿದ್ದು ಸಂಭ್ರಮಿಸಿದರು.
2022ರ ವಿಶ್ವಕಪ್‌ಗಾಗಿ ಇರಾನ್ ಮತ್ತು ಕಾಂಬೊಡಿಯ ನಡುವೆ ನಡೆದ ಅರ್ಹತಾ ಪಂದ್ಯ ಮಹಿಳೆಯರ ಹೋರಾಟಕ್ಕೆ ದಕ್ಕಿದ ಗೆಲುವಿಗೆ ಸಾಕ್ಷಿಯಾಯಿತು. ಸುಮಾರು 4,500 ಮಹಿಳೆಯರು ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ವೀಕ್ಷಿಸಿದರು. ಈ ಪಂದ್ಯವನ್ನು ಇರಾನ್ 14-0 ಭಾರೀ ಅಂತರದಲ್ಲಿ ಜಯಿಸಿದೆ.
Advertisement