Advertisement

ವಿಹಾರಿ ಶತಕ, ಮಾಯಾಂಕ್‌ ಅರ್ಧಶತಕ

12:30 AM Feb 13, 2019 | |

ನಾಗ್ಪುರ: ಕನ್ನಡಿಗ ಮಾಯಾಂಕ್‌ ಅಗರ್ವಾಲ್‌ (95 ರನ್‌) ಹಾಗೂ ಹನುಮ ವಿಹಾರಿ (114 ರನ್‌) ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಹಾಲಿ ರಣಜಿ ಚಾಂಪಿಯನ್‌ ವಿದರ್ಭ ವಿರುದ್ಧದ ಇರಾನಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಶೇಷ ಭಾರತ ಮೊದಲ ದಿನ ಪ್ರಥಮ ಇನ್ನಿಂಗ್ಸ್‌ನಲ್ಲಿ 330 ರನ್‌ ಪೇರಿಸಿ ಆಲೌಟಾಗಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಶೇಷ ಭಾರತಕ್ಕೆ ಮಾಯಾಂಕ್‌ ಅಗರ್ವಾಲ್‌ ಹಾಗೂ ಅನ್ಮೋಲ್‌ಪ್ರೀತ್‌ ಸಿಂಗ್‌ (15 ರನ್‌) ನೆರವಾದರು. ಇವರಿಬ್ಬರು ಮೊದಲ ವಿಕೆಟಿಗೆ 46 ರನ್‌ ಜತೆಯಾಟ ನಿರ್ವಹಿಸಿ ಉತ್ತಮ ಆರಂಭ ನೀಡಿದರು. ಎರಡನೇ ವಿಕೆಟಿಗೆ ಒಂದಾದ ಮಾಯಾಂಕ್‌ ಹಾಗೂ ಹನುಮ ವಿಹಾರಿ 125 ರನ್‌ ಜತೆಯಾಟ ನಡೆಸಿ ತಂಡ ಭಾರೀ ಮೊತ್ತ ಪೇರಿಸುವ ಸೂಚನೆ ನೀಡಿದರು. ಆದರೆ ಈ ಹಂತದಲ್ಲಿ ಮಾಯಾಂಕ್‌ ಔಟಾದರು. ಕೇವಲ 5 ರನ್‌ ಅಂತರದಿಂದ ಅವರು ಶತಕ ತಪ್ಪಿಸಿಕೊಂಡರು. 134 ಎಸೆತ ಎದುರಿಸಿದ ಮಾಯಾಂಕ್‌ 10 ಬೌಂಡರಿ, 3 ಸಿಕ್ಸರ್‌ ಮೂಲಕ ಗುಡುಗಿದರು. 

ಅಗರ್ವಾಲ್‌ ಪತನದ ಬಳಿಕ ಶೇಷ ಭಾರತ ದಿಢೀರ್‌ ಕುಸಿತ ಅನುಭವಿಸಿತು. ಅಗ್ರ ಕ್ರಮಾಂಕದಲ್ಲಿ ನಾಯಕ ಅಜಿಂಕ್ಯ ರಹಾನೆ (13 ರನ್‌) ಶ್ರೇಯಸ್‌ ಅಯ್ಯರ್‌ (19 ರನ್‌), ಇಶಾನ್‌ ಕಿಶನ್‌ (2 ರನ್‌), ಕೆ.ಗೌತಮ್‌ (7 ರನ್‌) ಪೆವಿಲಿಯನ್‌ಗೆ ಪರೇಡ್‌ ನಡೆಸಿದರು. ಇದರಿಂದಾಗಿ ತಂಡ ದೊಡ್ಡ ಮೊತ್ತವನ್ನು ಒಟ್ಟುಗೂಡಿಸುವಲ್ಲಿ ಹಿನ್ನಡೆ ಅನುಭವಿಸಿತು.  ಹನುಮ ವಿಹಾರಿ ಒಟ್ಟು 211 ಎಸೆತ ಎದುರಿಸಿ 11 ಬೌಂಡರಿ ಮತ್ತು 2 ಸಿಕ್ಸರ್‌ ಮೂಲಕ ಶತಕ ಬಾರಿಸಿದ್ದರಿಂದ ಶೇಷ ಭಾರತ ಸಾಧಾರಣ ಮೊತ್ತ ಪೇರಿಸುವಂತಾಯಿತು. 

ವಿದರ್ಭ ಬಿಗು ದಾಳಿ
ವಿದರ್ಭ ಬೌಲರ್‌ಗಳಾದ ಆದಿತ್ಯ ಸರ್ವಟೆ (99ಕ್ಕೆ 3), ಅಕ್ಷಯ್‌ ವಖಾರೆ (62ಕ್ಕೆ 3) ಹಾಗೂ ರಜನೀಶ್‌ ಗುರ್ಬಾನಿ (58ಕ್ಕೆ 2) ಬಿಗು ಬೌಲಿಂಗ್‌ ನಡೆಸಿ ಶೇಷ ಭಾರತಕ್ಕೆ ಆಘಾತ ನೀಡಿದರು. ಪರಿಣಾಮ ಶೇಷ ಭಾರತದ ಮಧ್ಯಮ ಕ್ರಮಾಂಕ ಕುಸಿಯಿತು.

ಸಂಕ್ಷಿಪ್ತ ಸ್ಕೋರು: ಶೇಷಭಾರತ ಪ್ರಥಮ ಇನ್ನಿಂಗ್ಸ್‌ 330 ಆಲೌಟ್‌ (ಮಾಯಾಂಕ್‌ ಅಗರ್ವಾಲ್‌ 95, ಹನುಮ ವಿಹಾರಿ 114, ರಾಹುಲ್‌ ಚಾಹರ್‌ 22, ರಜಪೂತ್‌ 25, ಆದಿತ್ಯ ಸರ್ವಟೆ 99ಕ್ಕೆ 3, ಅಕ್ಷಯ್‌ ವಖಾರೆ 62ಕ್ಕೆ 3, ರಜನೀಶ್‌ ಗುರ್ಬಾನಿ 58ಕ್ಕೆ 2).

Advertisement
Advertisement

Udayavani is now on Telegram. Click here to join our channel and stay updated with the latest news.

Next