ರಾಜ್‌ಕೋಟ್: ಕೊನೆಯ ಹಂತದಲ್ಲಿ ಬ್ಯಾಟಿಂಗ್ ಹೋರಾಟವೊಂದನ್ನು ಜಾರಿಯಲ್ಲಿರಿಸಿದ ಸೌರಾಷ್ಟ್ರ, ಇರಾನಿ ಕಪ್ ಪಂದ್ಯದಲ್ಲಿ 92 ರನ್ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಮೂರನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 368 ರನ್ ಗಳಿಸಿದೆ.
276 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಸೌರಾಷ್ಟ್ರದ ದ್ವಿತೀಯ ಸರದಿಯ 5 ವಿಕೆಟ್ 87 ರನ್ನಿಗೆ ಉದುರಿ ಹೋಗಿತ್ತು. ಇದರಲ್ಲಿ ಚೇತೇಶ್ವರ್ ಪೂಜಾರ ವಿಕೆಟ್ ಕೂಡ ಸೇರಿತ್ತು. ಅವರು ಇಲ್ಲಿಯೂ ಒಂದರ ಗಡಿ ದಾಟಲಿಲ್ಲ.
ಸೌರಾಷ್ಟ್ರದ ಈ ಕುಸಿತಕ್ಕೆ ಕೆಳ ಹಂತದ ಆಟಗಾರರು ತಡೆಯಾದರು. ಉಳಿದ 3 ವಿಕೆಟ್ ನಷ್ಟದಲ್ಲಿ 281 ರನ್ ಒಟ್ಟುಗೂಡಿತು. ಶೆಲ್ಡನ್ ಜಾಕ್ಸನ್ 71, ಅರ್ಪಿತ್ ವಸವಾಡ 55, ಪ್ರೇರಕ್ ಮಂಕಡ್ 72, ನಾಯಕ ಜೈದೇವ್ ಉನಾದ್ಕತ್ ಅಜೇಯ 78 ರನ್ ಬಾರಿಸಿ ತಂಡವನ್ನು ಇನ್ನಿಂಗ್ಸ್ ಸೋಲಿನಿಂದ ಪಾರುಮಾಡಿದರು.ಶೇಷ ಭಾರತ ಪರ ಕುಲದೀಪ್ ಸೇನ್ ಮತ್ತು ಸೌರಭ್ ಕುಮಾರ್ ತಲಾ 3 ವಿಕೆಟ್ ಉರುಳಿಸಿದರು.
ಪಂದ್ಯವಿನ್ನೂ ಎರಡು ದಿನ ಕಾಣಲಿಕ್ಕಿದ್ದು, ಸೌರಾಷ್ಟ್ರ ಸೋಲಿನಿಂದ ಪಾರಾಗುವ ಸಾಧ್ಯತೆ ದೂರವೆಂದೇ ಹೇಳಬೇಕಾಗುತ್ತದೆ.
ಸಂಕ್ಷಿಪ್ತ ಸ್ಕೋರ್: ಸೌರಾಷ್ಟ್ರ-98 ಮತ್ತು 8 ವಿಕೆಟಿಗೆ 368 (ಉನಾದ್ಕತ್ ಬ್ಯಾಟಿಂಗ್ 78, ಮಂಕಡ್ 72, ಜಾಕ್ಸನ್ 71, ವಸವಾಡ 55, ಸೌರಭ್ ಕುಮಾರ್ 80ಕ್ಕೆ 3, ಕುಲದೀಪ್ ಸೇನ್ 85ಕ್ಕೆ 3).