ಗ್ವಾಲಿಯರ್: ಯಶಸ್ವಿ ಜೈಸ್ವಾಲ್ ಅವರ ದಾಖಲೆಯ ದ್ವಿಶತಕ, ಆರಂಭಕಾರ ಅಭಿಮನ್ಯು ಈಶ್ವರನ್ ಅವರ ಅಮೋಘ ಶತಕ ಹಾಗೂ ಇವರಿಬ್ಬರ ನಡುವಿನ ತ್ರಿಶತಕದ ಜತೆಯಾಟದಿಂದ ಮಧ್ಯಪ್ರದೇಶ ವಿರುದ್ಧದ “ಇರಾನಿ ಕಪ್’ ಕ್ರಿಕೆಟ್ ಪಂದ್ಯದ ಮೊದಲ ದಿನವೇ ಶೇಷ ಭಾರತ ತಂಡ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶೇಷ ಭಾರತ 3 ವಿಕೆಟ್ ನಷ್ಟಕ್ಕೆ 381 ರನ್ ರಾಶಿ ಹಾಕಿದೆ. ಇದರಲ್ಲಿ ಯಶಸ್ವಿ ಜೈಸ್ವಾಲ್ ಕೊಡುಗೆ 213 ರನ್. ಅವರು ಇರಾನಿ ಕಪ್‌ನಲ್ಲಿ ದ್ವಿಶತಕ ಬಾರಿಸಿದ ಅತೀ ಕಿರಿಯ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾದರು (21 ವರ್ಷ, 63 ದಿನ). ಇದು ಜೈಸ್ವಾಲ್ ಅವರ ಇರಾನಿ ಕಪ್ ಪದಾರ್ಪಣ ಪಂದ್ಯವೆಂಬುದು ವಿಶೇಷ.
ಜೈಸ್ವಾಲ್ ಅವರ ದ್ವಿಶತಕ 230 ಎಸೆತಗಳಲ್ಲಿ ದಾಖ ಲಾಯಿತು. ಅಂತಿಮವಾಗಿ 259 ಎಸೆತ ಎದುರಿಸಿ ಸೊಗ ಸಾದ ಇನ್ನಿಂಗ್ಸ್ ಕಟ್ಟಿದರು. ಸಿಡಿಸಿದ್ದು ಬರೋಬ್ಬರಿ 30 ಬೌಂಡರಿ ಹಾಗೂ 3 ಸಿಕ್ಸರ್. ಅವರು ಇರಾನಿ ಕಪ್‌ನಲ್ಲಿ ಡಬಲ್ ಸೆಂಚುರಿ ಹೊಡೆದ 10ನೇ ಆಟಗಾರ.
ಅಭಿಮನ್ಯು ಈಶ್ವರನ್ 240 ಎಸೆತಗಳಿಂದ 154 ರನ್ ಬಾರಿಸಿದರು (17 ಬೌಂಡರಿ, 2 ಸಿಕ್ಸರ್). ನಾಯಕ ಮಾಯಾಂಕ್ ಅಗರ್ವಾಲ್ ಕೇವಲ 2 ರನ್ ಮಾಡಿ ನಿರ್ಗಮಿಸಿದ ಬಳಿಕ ಅಭಿಮನ್ಯು-ಜೈಸ್ವಾಲ್ ಕ್ರೀಸ್ ಆಕ್ರಮಿಸಿಕೊಂಡರು. ದಿನದಾಟದ ಕೊನೆಯ ಹಂತದಲ್ಲಿ ಶೇಷ ಭಾರತ ಇವರಿಬ್ಬರನ್ನೂ ಕಳೆದುಕೊಂಡಿತು. ಅಭಿಮನ್ಯು ರನೌಟಾದರು. ಆವೇಶ್ ಖಾನ್ 2 ವಿಕೆಟ್ ಉರುಳಿಸಿದರು.
ಈ ಬಾರಿಯ ರಣಜಿ ಋತುವಿನಲ್ಲಿ ಕೇವಲ 315 ರನ್ ಗಳಿಸಿ, ಟಾಪ್-50ರಲ್ಲೂ ಕಾಣಿಸಿಕೊಳ್ಳದ ಯಶಸ್ವಿ ಜೈಸ್ವಾಲ್ “ಇರಾನಿ ಕಪ್’ಗೆ ಆಯ್ಕೆಯಾಗಲು ಮುಖ್ಯ ಕಾರಣ, ಇವರ ಮೇಲೆ ಆಯ್ಕೆಗಾರರು ಹಾಗೂ ಕೋಚ್ ರಾಹುಲ್ ದ್ರಾವಿಡ್ ಇರಿಸಿದ ನಂಬಿಕೆ. ಇದನ್ನು ಜೈಸ್ವಾಲ್ ಹುಸಿಗೊಳಿಸಲಿಲ್ಲ.
ಸಂಕ್ಷಿಪ್ತ ಸ್ಕೋರ್: ಶೇಷ ಭಾರತ-3 ವಿಕೆಟಿಗೆ 381 (ಯಶಸ್ವಿ ಜೈಸ್ವಾಲ್ 213, ಅಭಿಮನ್ಯು ಈಶ್ವರನ್ 154, ಆವೇಶ್ ಖಾನ್ 51ಕ್ಕೆ 2).