Advertisement

Iran vs Israel; ಏನಿದು ಆಪರೇಶನ್‌ ಒಪೆರಾ?

02:42 AM Oct 27, 2024 | Team Udayavani |

ಜೆರುಸಲೇಂ: ತನ್ನ ಮೇಲೆ ದಾಳಿ ನಡೆದರೆ ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಸೂಕ್ತ ಸಮಯಕ್ಕೆ ಕಾದು, ದಾಳಿ ನಡೆಸುವ ಇಸ್ರೇಲ್‌ ಇದೀಗ ಇರಾನ್‌ ಮೇಲೆ ಸೇಡು ತೀರಿಸಿಕೊಂಡಿದೆ. 100 ಫೈಟರ್‌ ಜೆಟ್‌ಗಳನ್ನು ಬಳಕೆ ಮಾಡಿಕೊಂಡು ನಿಗದಿತ ಗುರಿಗಳ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿ 1981ರಲ್ಲಿ ಇರಾಕ್‌ ಮೇಲೆ ನಡೆಸಿದ “ಆಪರೇಶನ್‌ ಒಪೆರಾ’ವನ್ನು ಹೋಲುವಂತಿದೆ.

Advertisement

ಇರಾನ್‌ ಮೇಲೆ ವಾಯುದಾಳಿ ನಡೆಸಲು ಸಂಪೂರ್ಣ ಸಿದ್ಧತೆ ನಡೆಸಿದ ಇಸ್ರೇಲ್‌ ಸೇನೆ ಇದಕ್ಕಾಗಿ ಎಫ್-35 ಸೇರಿ 100 ಯುದ್ಧ ವಿಮಾನಗಳನ್ನು ಬಳಕೆ ಮಾಡಿಕೊಂಡಿದೆ. ಇರಾನ್‌ನ ಸೇನಾನೆಲೆಗಳ ಮೇಲೆ ದಾಳಿ ಮಾಡುವುದಕ್ಕಾಗಿ ಸುಮಾರು 2000 ಕಿ.ಮೀ.ನಷ್ಟು ದೂರ ಇಸ್ರೇಲ್‌ ಸೇನೆ ಪ್ರಯಾಣ ಮಾಡಿದೆ. ಕೇವಲ ಸೇನಾನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡು 3 ಸುತ್ತಿನ ವಾಯುದಾಳಿ ನಡೆಸಿದ್ದು, ಯಾವುದೇ ಕಚ್ಚಾತೈಲ ಘಟಕ ಹಾಗೂ ಅಣುಸ್ಥಾವರಗಳಿಗೆ ಹಾನಿಯಾಗದಂತೆ ನೋಡಿ ಕೊಳ್ಳಲಾಗಿದೆ.

ಭಾರೀ ಸಿದ್ಧತೆ: ಇರಾಕ್‌ ಮೇಲೆ ದಾಳಿ ಕೈಗೊಂಡಾದ ಇಸ್ರೇಲ್‌ ಹಲವು ಸವಾಲುಗಳನ್ನು ಎದುರಿಸಬೇಕಿತ್ತು. ಇಂಧನ ಕೊರತೆ, ಇತರ ದೇಶಗಳ ಮೇಲಿನ ಹಾರಾಟ ನಡೆಸಬೇಕಿತ್ತು. ಆದರೆ ಇಂತಹ ಸಮಸ್ಯೆಗಳು ಈ ಬಾರಿ ಕಾಡಬಾರದು ಎಂಬ ಕಾರಣಕ್ಕೆ ಸಮಯ ತೆಗೆದು ಕೊಂಡು ಇಸ್ರೇಲ್‌ ಸಂಪೂರ್ಣ ಯೋಜನೆ ರೂಪಿ ಸಿತ್ತು. ಇಸ್ರೇಲ್‌ಗೆ ಯಾವುದೇ ಹಾನಿಯಾಗದೇ ಯಶಸ್ವಿಯಾಗಿ ದಾಳಿ ಪೂರ್ಣಗೊಳಿಸಿತು.

ಇರಾನ್‌ ಸೇರಿ 3 ದೇಶದಲ್ಲಿ ವಿಮಾನ ಹಾರಾಟ ಸ್ಥಗಿತ
ಇರಾನ್‌ ಮೇಲೆ ಇಸ್ರೇಲ್‌ ದಾಳಿ ಬೆನ್ನಲ್ಲೇ ಇರಾನ್‌, ಇರಾಕ್‌ ಮತ್ತು ಸಿರಿಯಾಗಳ ಮೇಲೆ ವಿಮಾನ ಹಾರಾಟವನ್ನು ನಿರ್ಬಂಧಿಸಲಾಗಿದೆ. ವಿಮಾನಗಳ ಹಾರಾಟವನ್ನು ವರದಿ ಮಾಡುವ ಫ್ಲೈಟ್‌ರಡಾರ್‌ ಸಂಸ್ಥೆಯ ಪ್ರಕಾರ ಈ 3 ದೇಶಗಳ ಮೇಲೆ ಯಾವುದೇ ವಿಮಾನಗಳು ಹಾರಾಟ ನಡೆಸುತ್ತಿಲ್ಲ. ಸಂಭಾವ್ಯ ದಾಳಿಯ ಭೀತಿ ಇರುವುದರಿಂದ ವಿಮಾನ ಹಾರಾಟವನ್ನು ನಿರ್ಬಂಧಿಸಿರುವ ಸಾಧ್ಯತೆ ಇದೆ. ಆದರೆ ಶೀಘ್ರ ವಿಮಾನ ಸಂಚಾರ ಆರಂಭಿಸುವುದಾಗಿ ಇರಾನ್‌ ಹೇಳಿದೆ ಎಂದು ಮೂಲಗಳು ತಿಳಿಸಿವೆ.

ಇಸ್ರೇಲ್‌ ವಾಯುನೆಲೆ ಮೇಲೆ ಹೆಜ್ಬುಲ್ಲಾ ದಾಳಿ
ಇರಾನ್‌ ಮೇಲೆ ಇಸ್ರೇಲ್‌ ವಾಯುದಾಳಿ ನಡೆಸಿದ ಬೆನ್ನಲ್ಲೇ ಟೆಲ್‌ಅವೀವ್‌ ಮೇಲೆ ಹೆಜ್ಬುಲ್ಲಾ ಉಗ್ರರು ದಾಳಿ ನಡೆಸಿದ್ದಾರೆ. ಇಸ್ರೇಲ್‌ನ ವಾಯುನೆಲೆ ಮೇಲೆ ಈ ದಾಳಿ ನಡೆಸಲಾಗಿದೆ. ಅಲ್ಲದೇ ಲೆಬನಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಸ್ರೇಲ್‌ ಪಡೆಗಳ ಮೇಲೂ ದಾಳಿ ಮಾಡಲಾಗಿದೆ. ಇಸ್ರೇಲ್‌ 80 ಪ್ರದೇಶಗಳ ಮೇಲೆ ದಾಳಿ ನಡೆದಿದೆ ಎಂದು ಹೆಜ್ಬುಲ್ಲಾ ಹೇಳಿದೆ. ಗಾಜಾದಲ್ಲಿರುವ ಹಮಾಸ್‌ ಮತ್ತು ಲೆಬನಾನ್‌ನಲ್ಲಿರುವ ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿಕೊಂಡು ಇತ್ತೀಚಿನ ದಿನಗಳಲ್ಲಿ ತೀವ್ರ ದಾಳಿಯನ್ನು ಇಸ್ರೇಲ್‌ ಕೈಗೊಂಡಿತ್ತು.

Advertisement

ಇರಾನ್‌ ಪೊಲೀಸ್‌ ಬೆಂಗಾವಲು ವಾಹನ ಮೇಲೆ ದಾಳಿ: 10 ಸಾವು
ಇರಾನ್‌ನ ಪ್ರಕ್ಷುಬ್ಧ ಪ್ರದೇಶವಾದ ಸಿಸ್ಥಾನ್‌ ಮತ್ತು ಬಲೂಚಿಸ್ಥಾನ್‌ ಪ್ರಾಂತದಲ್ಲಿ ಶನಿವಾರ ಪೊಲೀಸ್‌ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿದ್ದು, 10 ಅಧಿಕಾರಿಗಳು ಮೃತಪಟ್ಟಿದ್ದಾರೆ. ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಇರಾನ್‌ನಲ್ಲಿರುವ ಬಲೂಚ್‌ ಜನರ ಪರವಾದ ಹಾಲ್‌ವಾಶ್‌ ಈ ದಾಳಿಯ ಬಗ್ಗೆ ಹೆಚ್ಚಿನ ವಿವರಣೆಯನ್ನು ನೀಡಿದೆ. ಆದರೆ ಇಡೀ ದಾಳಿಯಲ್ಲಿ ಯಾವುದೇ ಸ್ಫೋಟಕಗಳನ್ನು ಬಳಕೆ ಮಾಡದೇ ಕೇವಲ ಗುಂಡು ಹಾರಿಸಿ 2 ವಾಹನಗಳಲ್ಲಿದ್ದ ಅಧಿಕಾರಿಗಳನ್ನು ಹತ್ಯೆ ಮಾಡಲಾಗಿದೆ. ಇನ್ನೂ ಸಹ ಯಾವುದೇ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಇರಾನ್‌ ಮತ್ತು ಇಸ್ರೇಲ್‌ ನಡುವಿನ ಭಾರೀ ಸಂಘರ್ಷದ ನಡುವೆಯೇ ಈ ದಾಳಿ ನಡೆಯುತ್ತಿರುವುದು ಜನರಲ್ಲಿ ಆತಂಕವನ್ನು ಹೆಚ್ಚು ಮಾಡಿದೆ.

ಇಸ್ರೇಲ್‌ ಮೇಲೆ ಇರಾಕ್‌ ಸೇನೆ ನಡೆಸಿದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್‌ ಸೇನೆ ನಡೆಸಿದ ವಾಯುದಾಳಿಯೇ “ಆಪರೇಶನ್‌ ಒಪೆರಾ’. 1981ರ ಜೂ.7ರಂದು ಇಸ್ರೇಲ್‌ ಸೇನೆ ಈ ದಾಳಿ ನಡೆಸಿದ್ದು, ನಿರ್ಮಾಣ ಹಂತದಲ್ಲಿದ್ದ ಇರಾಕ್‌ನ ಅಣುಸ್ಥಾವರವನ್ನು ಇದರಲ್ಲಿ ಧ್ವಂಸ ಮಾಡಲಾಗಿತ್ತು. ಇದಕ್ಕಾಗಿ 1,400 ಕಿ.ಮೀ. ದೂರ ಇಸ್ರೇಲ್‌ ವಿಮಾನಗಳು ಪ್ರಯಾಣಿಸಿದ್ದವು. ಈ ದಾಳಿಯಲ್ಲಿ ಇರಾಕ್‌ನ 10 ಸೈನಿಕರು ಮೃತಪಟ್ಟಿದ್ದರು. ಇದಕ್ಕಾಗಿ ಇಸ್ರೇಲ್‌ ಬಳಕೆ ಮಾಡಿಕೊಂಡಿದ್ದ ಎಫ್-16 ಸೇರಿದಂತೆ 14 ಯುದ್ಧ ವಿಮಾನಗಳು ಸಂಜೆ 4 ಗಂಟೆಗೆ ಇಸ್ರೇಲ್‌ನಿಂದ ಹೊರಟು, 5.30ರ ಸುಮಾರಿಗೆ ಒಸಿರಾಕ್‌ ಅಣುಸ್ಥಾವರವನ್ನು ನಾಶ ಮಾಡಿದ್ದವು. ಅಲ್ಲದೇ ಯಾವುದೇ ಅಪಾಯವಿಲ್ಲದೇ ಎಲ್ಲ ವಿಮಾನಗಳು ಹಿಂದಿರುಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next