ಟೆಹರಾನ್ : ಇರಾನ್ ಜತೆಗಿನ ಮೈಲುಗಲ್ಲು ಅಣ್ವಸ್ತ್ರ ವಹಿವಾಟನ್ನು ತಾನು ಕೈಬಿಡಲು ಸಿದ್ಧ ಎಂದು ವಾಷಿಂಗ್ಟನ್ ನೀಡಿದ ಎಚ್ಚರಿಕೆಗೆ ಸಡ್ಡು ಹೊಡೆಯುವ ರೀತಿಯಲ್ಲಿ ಇರಾನ್ ತಾನು ಇಂದು ಶನಿವಾರ ಮಧ್ಯಮ ವ್ಯಾಪ್ತಿಯ ಅಣು ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಾರ್ಥವಾಗಿ ಪ್ರಯೋಗಿಸಿರುವುದಾಗಿ ಹೇಳಿಕೊಂಡಿದೆ.
ಇರಾನ್ ನಿನ್ನೆಯಷ್ಟೇ ಉನ್ನತ ಮಟ್ಟದ ಮಿಲಿಟರಿ ಪರೇಡ್‌ನಲ್ಲಿ ಪ್ರದರ್ಶಿಸಿದ್ದ ಖೋರಮ್‌ಶಹರ್ ಕ್ಷಿಪಣಿಯನ್ನು ಪ್ರಯೋಗಾರ್ಥವಾಗಿ ಯಶಸ್ವಿಯಾಗಿ ಪರೀಕ್ಷಿಸಿದ ವಿಡಿಯೋ ಚಿತ್ರಿಕೆಯನ್ನು ಇರಾನ್ ಸರಕಾರಿ ಒಡೆತನದ ಟಿವಿ ಪ್ರಸಾರ ಮಾಡಿದೆ.
ಹಾರಾಟ ನಿರತವಾಗಿದ್ದ ವಿಮಾನದ ಮೂತಿಯಿಂದ ಚಿತ್ರೀಕರಿಸಿಕೊಂಡ ಕ್ಷಿಪಣಿ ಪರೀಕ್ಷಾ ವಿಡಿಯೋವನ್ನು ಇರಾನ್ ಸರಕಾರಿ ಟಿವಿ ಪ್ರಸಾರ ಮಾಡಿರುವುದು ಗಮನಾರ್ಹವಾಗಿದೆ.
ಹಾಗಿದ್ದರೂ ಇರಾನ್ ಸರಕಾರಿ ಟಿವಿ, ಈ ಕ್ಷಿಪಣಿ ಪ್ರಯೋಗದ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ;ಆದರೂ ಈ ಪರೀಕ್ಷಾರ್ಥ ಕ್ಷಿಪಣಿ ಉಡಾವಣೆಯು ಬೇಗನೆ ನಡೆಯಲಿದೆ ಎಂದು ನಿನ್ನೆ ಶುಕ್ರವಾರ ಅಧಿಕಾರಿಗಳು ಹೇಳಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಒಂದೆಡೆ ಉತ್ತರ ಕೊರಿಯ, ಇನ್ನೊಂದೆಡೆ ಇರಾನ್, ತಮ್ಮ ಪರಮಾಣು ಕಾರ್ಯಕ್ರಮಗಳ ಮೂಲಕ ಅಮೆರಿಕಕ್ಕೆ ಮಾತ್ರವಲ್ಲದೇ ಇಡಿಯ ವಿಶ್ವ ಸುರಕ್ಷೆಗೇ ಸಡ್ಡು ಹೊಡೆಯುತ್ತಿರುವುದು ಕಳವಳಕಾರಿಯಾಗಿದೆ.