ಟೆಹರಾನ್ : ಇರಾನ್‌ನ ಹಾಲಿ ಅಧ್ಯಕ್ಷ ಹಸನ್ ರೌಹಾನಿ ಅವರು ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯಗಳಿಸಿರುವುದಾಗಿ ಇರಾನಿನ ಸರಕಾರಿ ಟಿವಿ ಘೋಷಿಸಿದೆ.
ಈ ವಿಜಯದೊಂದಿಗೆ ಹಸನ್ ರೌಹಾನಿ ಅವರಿಗೆ ನಾಲ್ಕು ವರ್ಷಗಳ ಎರಡನೇ ಆಧಿಕಾರಾವಧಿಯು ಪ್ರಾಪ್ತವಾದಂತಾಗಿದೆ. ದೇಶದ ಜನತೆಗೆ ಇನ್ನೂ ಹೆಚ್ಚಿನ ಸ್ವಾತಂತ್ರ್ಯ ಹಾಗೂ ದೇಶಕ್ಕೆ ಜಗದಗಲದ ಬಾಂಧವ್ಯವನ್ನು ಕಲ್ಪಿಸುವ ರೌಹಾನಿ ಅವರ ಕಾರ್ಯಸೂಚಿಯು ಈ ವಿಜಯದೊಂದಿಗೆ ಸಾಕಾರಗೊಳ್ಳಲಿದೆ.
ಮತ ಎಣಿಕೆ ವಿವರಗಳ ಆಧಾರದ ಮೇಲೆ ಹಸನ್ ರೌಹಾನಿ ವಿಜಯಿಯೆಂದು ಘೋಷಿಸಿರುವ ಸರಕಾರಿ ಟಿವಿಯು ಅವರನ್ನು ತನ್ನ ಸಂಕ್ಷಿಪ್ತ ಹೇಳಿಕೆಯಲ್ಲಿ ಅಭಿನಂದಿಸಿದೆ.
68ರ ಹರೆಯದ ರೌಹಾನಿ ಅವರು ಅತ್ಯಂತ ಉದಾರ ಹಾಗೂ ಸುಧಾರಣಾ ಮನೋಭಿಪ್ರಾಯ ದವರಾಗಿದ್ದು ದೇಶದ ಜನತೆಗೆ ಇನ್ನೂ ಹೆಚ್ಚಿನ ರಾಜಕೀಯ ಸ್ವಾತಂತ್ರ್ಯವನ್ನು ಹಾಗೂ ಬಾಹ್ಯ ಜಗತ್ತಿನೊಂದಿಗೆ ಇನ್ನೂ ಹೆಚ್ಚಿನ ಬಾಂಧವ್ಯವನ್ನು ಕಲ್ಪಿಸುವ ಸಂಕಲ್ಪವನ್ನು ಹೊಂದಿದ್ದಾರೆ.
ಪ್ರಾಥಮಿಕ ಮತ ಎಣಿಕೆ ವಿವರಗಳ ಪ್ರಕಾರ ರೌಹಾನಿ ಅವರಿಗೆ 3.89 ಕೋಟಿ ಮತಗಳ ಪೈಕಿ ಈ ತನಕ 2.28 ಕೋಟಿ ಮತಗಳು ಪ್ರಾಪ್ತವಾಗಿವೆ. ನಾಲ್ಕು ಕೋಟಿ ಜನರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಿರುವುದಾಗಿ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.