Advertisement

Iran-Pakistan ಯುದ್ದೋನ್ಮಾದ: ಮತ್ತೊಂದು ಸಮರಕ್ಕೆ ಮುನ್ನುಡಿಯೇ?

01:19 AM Jan 19, 2024 | Team Udayavani |

ಇಸ್ಲಾಮಾಬಾದ್‌: ರಷ್ಯಾ-ಉಕ್ರೇನ್‌, ಇಸ್ರೇಲ್‌-ಪ್ಯಾಲೆಸ್ತೀನ್‌ ಯುದ್ಧವು ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿರುವಂತೆಯೇ ಈಗ ಮತ್ತೊಂದು ಯುದ್ಧಕ್ಕೆ ಜಗತ್ತು ಸಾಕ್ಷಿಯಾಗುವ ಲಕ್ಷಣ ಗೋಚರಿಸಿದೆ. ಕಳೆದ ಎರಡು ದಿನಗಳಿಂದ ನಡೆದ ಬೆಳವಣಿಗೆಗಳು ಇರಾನ್‌ ಮತ್ತು ಪಾಕಿಸ್ಥಾನ‌ದಲ್ಲಿ ಯುದ್ಧದ ಕಾರ್ಮೋಡವನ್ನು ಹಬ್ಬಿಸಿದ್ದು, ದಾಳಿ-ಪ್ರತಿದಾಳಿಗಳು ಮತ್ತೂಂದು ಸಮರಕ್ಕೆ ಮುನ್ನುಡಿ ಬರೆದಿದೆ.

Advertisement

ಬುಧವಾರವಷ್ಟೇ ಇರಾನ್‌ ಪಾಕಿಸ್ಥಾನ‌ದ ಬಲೂಚಿಸ್ತಾನದ ಪ್ರಾಂತದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಇದಕ್ಕೆ ಗುರುವಾರ ಪ್ರತಿಕಾರ ತೀರಿಸಿರುವ ಪಾಕಿಸ್ಥಾನ, ಇರಾನ್‌ನ ಗಡಿಭಾಗದಲ್ಲಿ ಕ್ಷಿಪಣಿ ದಾಳಿ ನಡೆಸಿ, 9 ಮಂದಿಯ ಸಾವಿಗೆ ಕಾರಣವಾಗಿದೆ. ಇದು ಎರಡೂ ರಾಷ್ಟ್ರಗಳ ನಡುವೆ ಉದ್ನಿಗ್ನತೆ ಸೃಷ್ಟಿಸಿರುವುದು ಮಾತ್ರವಲ್ಲದೇ, ಪಾಕ್‌ ಮೇಲೆ ಮತ್ತೂಂದು ಹಂತದ ದಾಳಿಗೆ ಇರಾನ್‌ ಸಜ್ಜಾಗಿದೆ ಎಂಬ ಸುದ್ದಿಗಳೂ ಹರಡತೊಡಗಿವೆ. ಒಂದು ವೇಳೆ, ಇದು ನಿಜವಾದಲ್ಲಿ ಅಂದರೆ ಇರಾನ್‌ ಮತ್ತು ಪಾಕ್‌ ಯುದ್ಧ ನಡೆದರೆ ಅದರ ಪರಿಣಾಮ ಮಾತ್ರ ಇಸ್ರೇಲ್‌-ಪ್ಯಾಲೆಸ್ತೀನ್‌ ಯುದ್ಧಕ್ಕಿಂತಲೂ ಗಂಭೀರವಾಗಿರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಗುರುವಾರ ಮಾತನಾಡಿರುವ ಪಾಕ್‌ ಅಧ್ಯಕ್ಷ ಆರಿಫ್ ಅಳ್ವಿ, ನಾವು ಎಲ್ಲ ದೇಶಗಳ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಗೌರವಿಸುತ್ತೇವೆ. ಉಳಿದ ದೇಶಗಳೂ ಪಾಕಿಸ್ಥಾನ‌ದ ಸಾರ್ವಭೌಮತೆಯನ್ನು ಗೌರವಿಸಬೇಕು. ನಮ್ಮ ರಾಷ್ಟ್ರೀಯ ಭದ್ರತೆಯ ವಿಚಾರ ಬಂದಾಗ ನಾವು ಯಾವ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

ಕಚ್ಚಾ ತೈಲ ದರ ಏರಿಕೆ ಭೀತಿ
ಈಗಾಗಲೇ ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರು ಸರಕು ಸಾಗಣೆ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದು, ಜಾಗತಿಕ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇಷ್ಟಾದರೂ ಅಂತಾರಾಷ್ಟ್ರೀಯ ಕಚ್ಚಾ ತೈಲದ ದರ ಸ್ಥಿರವಾಗಿದೆ. ಆದರೆ, ಈಗ ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ದಿನೇ ದಿನೆ ತೀವ್ರಗೊಳ್ಳುತ್ತಿರುವುದು ಕಚ್ಚಾ ತೈಲದ ದರವನ್ನು ಗಗನಕ್ಕೇರಿಸುವ ಭೀತಿಯನ್ನು ಹುಟ್ಟುಹಾಕಿದೆ. ಅರಬಿಯನ್‌ ಗಲ್ಫ್ ಮತ್ತು ಗಲ್ಫ್ ಆಫ್ ಒಮನ್‌ ಮಧ್ಯೆ ಇರುವ ಹೊರ್ಮುಝ್ ಸಂಧಿಯ ಮೂಲಕ ಪ್ರತೀ ದಿನ ಸುಮಾರು 17 ದಶಲಕ್ಷ ಬ್ಯಾರೆಲ್‌ ಕಚ್ಚಾ ತೈಲ (ಜಾಗತಿಕ ಪೂರೈಕೆಯ ಆರನೇ ಒಂದರಷ್ಟು) ಸಾಗಣೆಯಾಗುತ್ತದೆ. ಒಂದು ವೇಳೆ ಇರಾನ್‌ ಏನಾದರೂ ಈ ಮಾರ್ಗವನ್ನು ಮುಚ್ಚುವುದಾಗಿ ಘೋಷಿಸಿದರೆ, ಕಚ್ಚಾ ತೈಲದ ದರ ಒಂದೇ ತಿಂಗಳಲ್ಲಿ ಶೇ.20ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಇಡೀ ಜಗತ್ತಿಗೆ ಅತೀದೊಡ್ಡ ಶಾಕ್‌ ನೀಡುವ ಸಾಧ್ಯತೆಯಿದೆ.

ಪಾಕ್‌ ಪರ ಅಮೆರಿಕ, ಇರಾನ್‌ ಪರ ಭಾರತ: ಚೀನ ತಟಸ್ಥ ನಿಲುವು
ಇರಾನ್‌-ಪಾಕ್‌ ಸಂಘರ್ಷದಲ್ಲಿ ಅಮೆರಿಕ ಪಾಕ್‌ ಪರ ನಿಂತರೆ, ಭಾರತವು ಇರಾನ್‌ ನಿಲುವನ್ನು ಸಮರ್ಥಿಸಿಕೊಂಡಿದೆ. ಇನ್ನು, ಚೀನ ತಟಸ್ಥ ನಿಲುವು ತಾಳಿದೆ. ಪಾಕಿಸ್ಥಾನದ ಮೇಲೆ ಇರಾನ್‌ ನಡೆಸಿದ ದಾಳಿಯನ್ನು ಖಂಡಿಸಿರುವ ಅಮೆರಿಕ, 2 ದಿನಗಳಲ್ಲಿ ಮೂರು ದೇಶಗಳ ಮೇಲೆ ದಾಳಿ ನಡೆಸಿ ಇರಾನ್‌ ಅವುಗಳ ಸಾರ್ವಭೌಮತ್ವವನ್ನು ಉಲ್ಲಂ ಸಿದೆ ಎಂದು ಟೀಕಿಸಿದೆ. ಇನ್ನು, ಬುಧವಾರ ಪಾಕ್‌ ಮೇಲೆ ಇರಾನ್‌ ನಡೆಸಿದ ದಾಳಿಗೆ ಪ್ರತಿಕ್ರಿಯಿಸಿದ್ದ ಭಾರತ, ಯಾವುದೇ ದೇಶ ಸ್ವಯಂರಕ್ಷಣೆಗೆ ಕ್ರಮ ಕೈಗೊಂಡರೆ, ಅದನ್ನು ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದಿತ್ತು. ಆದರೆ ಗುರುವಾರ ಪಾಕ್‌ ಮೇಲೆ ಇರಾನ್‌ ನಡೆಸಿದ ದಾಳಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಭಾರತ ತಿಳಿಸಿದೆ. ಇನ್ನೊಂದೆಡೆ
ಚೀನ ಸರಕಾರ ಸಂಧಾನದ ಆಯ್ಕೆ ಮುಂದಿಟ್ಟಿದೆ. ಎರಡೂ ದೇಶಗಳ ನಡುವೆ ಅಗತ್ಯ ಬಿದ್ದರೆ ಮಾತುಕತೆಗೆ ನೇತೃತ್ವ ವಹಿಸುತ್ತೇವೆ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next