ಟೆಲ್ ಅವೀವ್: ಇರಾನ್ ಭಾನುವಾರ ತನ್ನ ಭೂಪ್ರದೇಶದಿಂದ ನೇರವಾಗಿ ಇಸ್ರೇಲ್ ಗೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಉಡಾಯಿಸಿದೆ. ಇದು ಎರಡು ರಾಷ್ಟ್ರಗಳ ನಡುವಿನ ಯುದ್ಧ ಕಾರ್ಮೋಡವನ್ನು ಉಲ್ಬಣಗೊಳಿಸಿದೆ. ಇರಾನ್ ನಿಂದ 100 ಕ್ಕೂ ಹೆಚ್ಚು ಡ್ರೋನ್‌ಗಳನ್ನು ಉಡಾವಣೆ ಮಾಡಲಾಗಿದೆ ಎಂದು ಇಸ್ರೇಲ್‌ನ ಮಿಲಿಟರಿ ಹೇಳಿದೆ.
ದಾಳಿಯ ಕಾರಣದಿಂದ ಇಸ್ರೇಲ್ ನಾದ್ಯಂತ ಎಚ್ಚರಿಕೆಯ ಸೈರನ್‌ಗಳು ಮೊಳಗುತ್ತಲೇ ಇದ್ದವು, ಸ್ಫೋಟದ ಶಬ್ದಗಳು ಕೇಳುತ್ತಿದ್ದಂತೆ ಜನರು ಬಾಂಬ್ ಶೆಲ್ಟರ್ ಗಳಿಗೆ ಓಡುತ್ತಿದ್ದರು ಎಂದು ವರದಿಯಾಗಿದೆ.
ಇಸ್ರೇಲ್ ಗೆ ಅಮೆರಿಕವು ತನ್ನ ಬೆಂಬಲವನ್ನು ಸೂಚಿಸಿದ ಹೊರತಾಗಿಯೂ ಇಸ್ರೇಲ್ ಪ್ರದೇಶದ ಮೇಲೆ ಇರಾನ್ ನಡೆಸಿದ ಮೊದಲ ನೇರ ದಾಳಿ ಇದಾಗಿದೆ. ದಾಳಿಯಲ್ಲಿ 7 ವರ್ಷದ ಬಾಲಕಿಗೆ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ಇಸ್ರೇಲ್ ಕಡೆಗೆ ಸುಮಾರು 10 ಕ್ರೂಸ್ ಕ್ಷಿಪಣಿಗಳನ್ನು ಒಳಗೊಂಡಂತೆ ಹಲವಾರು ನೆಲದಿಂದ ನೆಲಕ್ಕೆ ಕ್ಷಿಪಣಿಗಳನ್ನು ಉಡಾಯಿಸಿತು, ಅವುಗಳಲ್ಲಿ ಹೆಚ್ಚಿನವು ಇಸ್ರೇಲಿ ಪ್ರದೇಶವನ್ನು ತಲುಪುವ ಮೊದಲು ಯಶಸ್ವಿಯಾಗಿ ತಡೆಹಿಡಿಯಲ್ಪಟ್ಟವು ಎಂದು ಇಸ್ರೇಲ್‌ನ ಸೇನೆಯ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದರು.
ಶ್ವೇತಭವನದ ಪ್ರಕಾರ, ” ಎಲ್ಲಾ ಒಳಬರುವ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಧರೆಗುರುಳಿಸಲು ಇಸ್ರೇಲ್ ಗೆ ಅಮೆರಿಕ ಸಹಾಯ ಮಾಡಿದೆ” ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಇರಾನ್ ದಾಳಿಯ ನಂತರ ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೂರವಾಣಿ ಸಂಭಾಷಣೆ ನಡೆಸಿದ ನಂತರ ಶ್ವೇತಭವನದ ಹೇಳಿಕೆ ಬಂದಿದೆ.
“ಯಾರೆಲ್ಲಾ ನಮಗೆ ಹಾನಿ ಮಾಡುತ್ತಾರೆಯೋ, ನಾವು ಅವರಿಗೆ ಹಾನಿ ಮಾಡುತ್ತೇವೆ” ಎಂದು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಯು.ಎಸ್, ಯು.ಕೆ, ಜರ್ಮನಿ, ಅರ್ಜೆಂಟೀನಾ ಮತ್ತು ಫ್ರಾನ್ಸ್ ಸೇರಿದಂತೆ ಇತರ ರಾಷ್ಟ್ರಗಳು ಇಸ್ರೇಲ್ ಮೇಲಿನ ಇರಾನ್ ದಾಳಿಯನ್ನು ಖಂಡಿಸಿವೆ. ಭಾರತವು ತಕ್ಷಣದ ಉಲ್ಬಣವನ್ನು ತಗ್ಗಿಸಲು ಮತ್ತು ಸಂಯಮ ಕಾಯ್ದುಕೊಳ್ಳಲು ಕರೆ ನೀಡಿದೆ.