ಟೆಹ್ರಾನ್: ಐಸ್ ಕ್ರೀಮ್ ಒಂದರ ಜಾಹೀರಾತು ಇದೀಗ ಇರಾನ್ ದೇಶದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಜಾಹೀರಾತಿನ ಕಾರಣದಿಂದಲೇ ಇನ್ನು ಮುಂದೆ ಮಹಿಳೆಯರು ಜಾಹೀರಾತುಗಳಲ್ಲಿ ನಟಿಸಬಾರದು ಎಂದು ಇರಾನ್ ಸರ್ಕಾರ ಆದೇಶಿಸಿದೆ.
ಸಡಿಲವಾದ ಹಿಜಾಬ್ ಧರಿಸಿರುವ ಮಹಿಳೆಯೊಬ್ಬರು ಮ್ಯಾಗ್ನಮ್ ಐಸ್‌ಕ್ರೀಂ ಅನ್ನು ಸವಿಯುತ್ತಿರುವ ಜಾಹೀರಾತು ಇರಾನ್ ನಲ್ಲಿ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಇಸ್ಲಾಮಿಕ್ ದೇಶವಾದ ಇರಾನ್ ನಲ್ಲಿ ಈ ಜಾಹೀರಾತಿನ ವಿರುದ್ಧ ಧರ್ಮಗುರುಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಐಸ್ ಕ್ರೀಮ್ ತಯಾರಾಕ ಸಂಸ್ಥೆಯ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಐಸ್ ಕ್ರೀಮ್ ಕಮರ್ಷಿಯಲ್ ನಿಂದ ಮಹಿಳೆಯರ ಮೌಲ್ಯಗಳಿಗೆ ಅವಮಾನವಾಗಿದೆ ಮತ್ತು ಇದು ಸಾರ್ವಜನಿಕ ಸಭ್ಯತೆಯನ್ನು ಮೀರಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಮತ್ತೆ ಪಿಎಸ್ಐ ಪ್ರಕರಣದ ಸದ್ದು; ಬ್ಲೂಟೂತ್ ಬಳಸಿ ಪಾಸಾಗಿದ್ದ ಪೇದೆ ಸೇರಿ 8 ಅಭ್ಯರ್ಥಿಗಳ ಬಂಧನ
ಇರಾನ್ ನ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶಿ ಇಲಾಖೆಯು ಕಲಾ ಮತ್ತು ಸಿನಿಮಾ ಸ್ಕೂಲ್ ಗಳಿಗೆ ಪತ್ರ ಬರೆದಿದ್ದು, ಇನ್ನು ಮುಂದೆ ಮಹಿಳೆಯರನ್ನು ಬಳಸಿ ಜಾಹೀರಾತುಗಳ ನಿರ್ಮಾಣ ಮಾಡುವಂತಿಲ್ಲ ಎಂದು “ಹಿಜಾಬ್ ಮತ್ತು ಪರಿಶುದ್ಧತೆಯ ನಿಯಮಗಳನ್ನು” ಉಲ್ಲೇಖಿಸಿ ಕಟ್ಟಪ್ಪಣೆ ಹೊರಡಿಸಿದೆ.
1979ರಲ್ಲಿ ಇಸ್ಲಾಮಿಕ್ ಕ್ರಾಂತಿಯ ಬಳಿಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರು ಮಹಿಳೆಯರು ತಲೆಗೆ ಚಾದರ್ ನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಆದೇಶಿಸಿದ್ದರು. ಆದರೆ ಕಳೆದೊಂದು ದಶಕದಿಮದ ಇರಾನ್ ನಲ್ಲಿ ಕಡ್ಡಾಯ ಹಿಜಾಬ್ ವಿರೋಧಿಸಿ ಅನೇಕ ಮಹಿಳೆಯರು ಪ್ರತಿಭಟನೆ ನಡೆಸಿದ್ದು, ಹಲವರು ಜೈಲು ಸೇರಿದ್ದಾರೆ.