ಲಂಡನ್: ಇರಾನ್‌ನಿಂದ ತೈಲ ಆಮದಿಗೆ ಅಮೆರಿಕ ಹೇರಿದ ನಿಷೇಧ ದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ತೈಲ ಬೆಲೆ ಈ ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 74.70 ಡಾಲರ್ ಆಗಿದ್ದು, ಕಳೆದ ನವೆಂಬರ್ ನಂತರದಲ್ಲಿ ಅತ್ಯಧಿಕ ವಾಗಿದೆ. ಸೋಮವಾರ ಒಂದೇ ದಿನ ಬ್ರೆಂಟ್ ಕಚ್ಚಾ ತೈಲ 2 ಡಾಲರ್ ಏರಿಕೆ ಕಂಡಿತ್ತು. ಮೇಯಿಂದ ಜಾರಿಗೆ ಬರಲಿರುವ ಅಮೆರಿಕದ ಆದೇಶ ಪ್ರಕಾರ, ಭಾರತ ಸೇರಿದಂತೆ ಏಳು ದೇಶಗಳು ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವಂತಿಲ್ಲ. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಪೂರೈಕೆ ಕಡಿಮೆಯಾಗಲಿದ್ದು, ಬೆಲೆ ಏರಿಕೆಯಾಗಿದೆ. ಆದರೆ ಮುಂದಿನ ತಿಂಗಳುಗಳಲ್ಲಿ ಸೌದಿ ಅರೇಬಿಯಾ ಹಾಗೂ ಒಪೆಕ್‌ನ ಇತರ ಸದಸ್ಯ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಹೆಚ್ಚಿಸುವುದನ್ನು ಆಧ ರಿಸಿ ಬೆಲೆ ನಿರ್ಧಾರವಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 80 ಡಾಲರ್ ತನಕ ಏರುವ ಸಾಧ್ಯತೆಯಿದೆ.
ಮೇ 23ರ ಬಳಿಕ 5-10ರೂ. ಏರಿಕೆ?
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಏರಿಕೆಯಾಗಿದ್ದರೂ ಇನ್ನೂ ದೇಶೀಯ ಮಾರುಕಟ್ಟೆಗೆ ಇದರ ಬಿಸಿ ತಟ್ಟಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ಕಾಂಗ್ರೆಸ್, ಇರಾನ್‌ನಿಂದ ತೈಲ ಆಮದು ಮಾಡಿ ಕೊಳ್ಳಲು ಅಮೆರಿಕ ಅವಕಾಶ ನೀಡದೇ ಇರುವುದು ಮೋದಿ ಸರಕಾರದ ವೈಫಲ್ಯ ಎಂದಿದ್ದಾರೆ. ಅಲ್ಲದೆ, ಚುನಾವಣೆ ಮುಗಿಯುವ ತನಕ ತೈಲ ದರವನ್ನು ಏರಿಕೆ ಮಾಡ ದಂತೆ ತೈಲ ಕಂಪನಿಗಳಿಗೆ ಮೋದಿ ಸೂಚಿಸಿದ್ದಾರೆ. ಮೇ 23 ರಂದು ಚುನಾವಣೆ ಫಲಿತಾಂಶ ಪ್ರಕಟವಾಗು ತ್ತಿದ್ದಂತೆಯೇ, ಪೆಟ್ರೋಲ್ ಹಾಗೂ ಡೀಸೆಲ್ ಲೀಟರ್‌ಗೆ 5 ರಿಂದ 10 ರೂ. ಏರಿಕೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಹೇಳಿದ್ದಾರೆ.