Advertisement

ಇರಾನ್‌ –ಅಮೆರಿಕ ಸಂಘರ್ಷ : ಚಿನ್ನ ಮಾರುಕಟ್ಟೆ ದುಬಾರಿ, ಸಂಕಷ್ಟಗಳ ಸರಣಿ ಆರಂಭ ?

10:08 AM Jan 07, 2020 | Team Udayavani |

ಇರಾನ್‌ ಹಾಗೂ ಅಮೆರಿಕ ನಡುವೆ ತಲೆದೋರಿರುವ ಯುದ್ಧದ ಪರಿಸ್ಥಿತಿಯಿಂದ ಭಾರತಕ್ಕೆ ಸಂಕಷ್ಟ ಬಂದೊದಗಿದೆ. ತೈಲ ಬೆಲೆಯೂ ಏರಿಕೆಯಾಗಲಾರಂಭಿಸಿದೆ. ಸದ್ಯ ಚಿನ್ನದ ಬೆಲೆ ಗಗನಕ್ಕೇರಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ. ಚಿನ್ನ ಮಾರುಕಟ್ಟೆ ದಿನೇ ದಿನೆ ದುಬಾರಿಯಾಗುತ್ತಾ ಸಾಗಿದೆ. 24 ಕ್ಯಾರೆಟ್‌ ಚಿನ್ನದ ದರದಲ್ಲಿ ಸೋಮವಾರ 780 ರೂ. ಏರಿಕೆಯಾಗಿದೆ. ಮತ್ತೂಂದೆಡೆ ರೂಪಾಯಿ ಮೌಲ್ಯವೂ ಕುಸಿಯುತ್ತಿದ್ದು, ಬೆಲೆ ಏರಿಕೆ ಬಿಸಿ ಹೆಚ್ಚಾಗತೊಡಗಿದೆ.

Advertisement

ಸೋಮವಾರ ಎಷ್ಟಾಯಿತು?
24 ಕ್ಯಾರೆಟ್‌ ಚಿನ್ನದ ದರದಲ್ಲಿ 780 ರೂ. ಏರಿಕೆಯಾಗಿದೆ. ಈ ಮೂಲಕ ಬೆಳ್ಳಿ ದರ 50 ಸಾವಿರ ಗಡಿ ದಾಟಿದೆ. ಬೆಂಗಳೂರಲ್ಲಿ 10 ಗ್ರಾಂ., 24 ಕ್ಯಾರೆಟ್‌ ಚಿನ್ನದ ಇಂದಿನ ದರ 42,230 ರೂ. ನಿಗದಿಯಾಗಿದೆ. ಮುಂಬಯಿ ಮಾರುಕಟ್ಟೆಯಲ್ಲಿ 10 ಗ್ರಾಂ. 24 ಕ್ಯಾರೆಟ್‌ ಚಿನ್ನದ ಇಂದಿನ ದರ 42,135 ರೂ.ಗೆ ಏರಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 42,110 ರೂ.ಗೆ ವಹಿವಾಟು ನಡೆದಿದೆ.

ತೈಲ ಬೆಲೆ ಏರಿಕೆ
ಇರಾನ್‌ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ದಿಢೀರ್‌ ಏರಿಕೆಯಾಗಿದೆ. ಬ್ರೆಂಟ್‌ ಕಚ್ಚಾ ತೈಲದ ಬೆಲೆ ಶೇ.4.39ರಷ್ಟು ಏರಿಕೆಯಾಗಿದ್ದು ಒಂದು ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 69.16 ಡಾಲರ್‌ (ಅಂದಾಜು 4,900 ರೂ.) ತಲುಪಿದೆ. ಈ ಹಿಂದೆ ಒಂದು ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 66.25 ಡಾಲರ್‌ (ಅಂದಾಜು 4,700 ರೂ.) ಇತ್ತು.

ಭಾರತಕ್ಕೆ ಭಾರೀ ಹೊಡೆತ
ಅಮೆರಿಕ ಮತ್ತು ಇರಾನ್‌ ಸಂಘರ್ಷದಿಂದಾಗಿ ಭಾರತ ಭಾರೀ ಸಮಸ್ಯೆ ಎದುರಿಸಲಿದೆ. ಈಗಾಗಲೇ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಡಾಲರ್‌ಗೆ ಶೇ 4.5ರಷ್ಟು ಏರಿಕೆಯಾಗಿ, 68.23 ಡಾಲರ್‌ಗೆ (4,895 ರೂ.) ತಲುಪಿದೆ. ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚಳವಾಗಿ, ಅವುಗಳ ಬೆಲೆಯೂ ಏರಿಕೆಯಾಗಿದೆ.

ಅಪಾಯ ಇದ್ದೇ ಇದೆ
ಕೊಲ್ಲಿಯಲ್ಲಿ ಸಂಘರ್ಷ ಶಮನವಾಗದೇ ಇದ್ದರೆ ಎರಡನೇ ಹಂತದ ಪರಿಣಾಮಗಳನ್ನು ಎದುರಿಸಲು ಭಾರತ ಸಜ್ಜಾಗಬೇಕಾಗುತ್ತದೆ. ತೈಲ ಆಮದಿನ ಮೇಲೆ ದೇಶವು ಮಾಡಬೇಕಾದ ವೆಚ್ಚ ದುಪ್ಪಟ್ಟಾಗಲಿದೆ. ಅಗತ್ಯ ಇರುವ ತೈಲದ ಶೇ. 80ಕ್ಕಿಂತ ಹೆಚ್ಚು ಭಾಗವನ್ನು ಭಾರತವು ಆಮದು ಮಾಡಿಕೊಳ್ಳುತ್ತಿರುವುದರಿಂದ ಸಮಸ್ಯೆಯ ತೀವ್ರತೆ ಹೆಚ್ಚಾಗಲಿದೆ.

Advertisement

ಮುಂಗಡ ಪತ್ರಕ್ಕೆ ಹಿನ್ನಡೆ ಸಾಧ್ಯತೆ
ಕೇಂದ್ರ ಸರಕಾರ ತನ್ನ ವಾರ್ಷಿಕ ಮುಂಗಡ ಪತ್ರವನ್ನು ತಯಾರಿಸುವ ಸಂದರ್ಭದಲ್ಲಿಯೇ ಈ ಬಿಕ್ಕಟ್ಟು ಸೃಷ್ಠಿಯಾಗಿದೆ. ಹಾಗಾಗಿ, ದೊಡ್ಡ ಮಟ್ಟದ ತೆರಿಗೆ ವಿನಾಯಿತಿ, ಅರ್ಥ ವ್ಯವಸ್ಥೆಯ ಚೇತರಿಕೆಗೆ ಕೈಗೊಳ್ಳಬಹುದಾದ ಕ್ರಮಗಳನ್ನು ನಾವು ನಿರೀಕ್ಷೆ ಮಾಡುವಂತಿಲ್ಲ. ಆಕರ್ಷಕ ವಿನಾಯಿತಿಗಳು ಈ ಬಜೆಟ್‌ನಲ್ಲಿ ಕಂಡುಬರುವುದು ಕಷ್ಟ ಎಂದು ಹೇಳಲಾಗುತ್ತಿದೆ. ತೈಲದ ಮೇಲೆ ಮಾಡುತ್ತಿರುವ ವೆಚ್ಚ ಹೆಚ್ಚುತ್ತಿರುವುದರ ಬಗ್ಗೆ ಆರ್‌ಬಿಐ ಈಗಾಗಲೇ ಕಳವಳ ವ್ಯಕ್ತಪಡಿಸಿದೆ.

ಇಂಧನ ಹೆಚ್ಚು ಅಪಾಯ ಯಾಕೆ?
ಸಂಘರ್ಷ ಮುಂದುವರಿದರೆ ಇರಾನ್‌ನಿಂದ ತೈಲ ಪೂರೈಕೆಗೆ ತೊಡಕಾಗಬಹುದು. ಅಮೆರಿಕದಿಂದ ಭಾರತಕ್ಕೆ ಜಲ ಮಾರ್ಗದ ಮೂಲಕ ಆಗುವ ತೈಲ ಪೊರೈಕೆಯನ್ನು ಇರಾನ್‌ ಗುರಿ ಮಾಡಿಕೊಳ್ಳುವ ಅಪಾಯವೂ ಇದೆ. ಈಗಾಗಲೇ ಇರಾನ್‌ನಿಂದ ತೈಲ ಖರೀದಿ ಮಾಡಬಾರದು ಎಂದು ಭಾರತದ ಮೇಲೆ ಅಮೆರಿಕ ಒತ್ತಡ ಹೇರುತ್ತಲೇ ಬಂದಿದೆ.

ಇರಾನ್‌ ನಡೆ ಕುತೂಹಲ
ಹತ್ಯೆ ಬಳಿಕ ಬ್ಯಾರೆಲ್‌ ಕಚ್ಚಾ ತೈಲದ ಬೆಲೆ ಶೇ. 4ರಷ್ಟು ಏರಿಕೆ ಆಗಿದೆ. ಅಮೆರಿಕಕ್ಕೆ ಪ್ರತೀಕಾರ ತೀರಿಸಬೇಕು ಎನ್ನುತ್ತಿರುವ ಇರಾನ್‌ ಮೇಲೆ ಕೆಲವು ಆಯ್ಕೆಗಳಿವೆ. ಹರ್ಮಜ್‌ ಜಲಸಂಧಿಯನ್ನು ಮುಚ್ಚುವುದು. ಪರ್ಷಿಯನ್‌ ರಾಷ್ಟ್ರಗಳಿಂದ ತೈಲ ಬರುವುದಕ್ಕೆ ಇರುವ ಏಕೈಕ ಸಮುದ್ರ ಮಾರ್ಗ ಇದು. ಎರಡು ವರ್ಷಗಳ ಹಿಂದೆ ಅಮೆರಿಕವು ಇರಾನ್‌ ಮೇಲೆ ಆರ್ಥಿಕ ದಿಗ್ಬಂಧನ ಹಾಕಿದಾಗ ಹೀಗೇ ಮಾಡಲಾಗಿತ್ತು.

ಇಂಧನ ಬೆಲೆ ಏರಿಕೆ; ಹಲವು ಸಮಸ್ಯೆಗೆ ಕಾರಣ
ಭಾರತಕ್ಕೆ ತೈಲ ಪೂರೈಸುವ ಪ್ರಮುಖ ದೇಶಗಳಲ್ಲಿ ಇರಾನ್‌ ಕೂಡ ಒಂದು. 2018-19ರಲ್ಲಿ ಇರಾನ್‌ನಿಂದ 2.3 ಕೋಟಿ ಟನ್‌ ತೈಲ ಆಮದಾಗಿದೆ. ಇದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 5ರಷ್ಟು ಹೆಚ್ಚು ಎಂಬುದು ಗಮನಾರ್ಹ. ಭಾರತಕ್ಕೆ ಇರಾಕ್‌ ಮತ್ತು ಸೌದಿ ಅರೇಬಿಯಾದ ಅತಿ ಹೆಚ್ಚು ತೈಲ ಪೂರೈಸುವ ದೇಶವಾಗಿದ್ದು, ಬಳಿಕದ ಸ್ಥಾನದಲ್ಲಿ ಇರಾನ್‌ ಇದೆ.

ಡಿಸೆಂಬರ್‌ 2ರ ಬಳಿಕ ಕಚ್ಚಾ ತೈಲದ ಬೆಲೆ ಶೇ. 14ರಷ್ಟು ಏರಿಕೆಯಾಗಿದೆ. ಹಾಗಾಗಿ, ಈಗಿನ ಪರಿಸ್ಥಿತಿಯೇ ಭಾರತದ ಬಜೆಟ್‌ ಲೆಕ್ಕಾಚಾರವನ್ನು ಏರುಪೇರಾಗಿಸಬಹುದು. ಸೌದಿಯ ಅರಾಮ್ಕೊ ಕಂಪನಿಯ ಮೇಲೆ ಕಳೆದ ಸೆಪ್ಟೆಂಬರ್‌ನಲ್ಲಿ ಡ್ರೋನ್‌ ದಾಳಿಯಾದಾಗ ಕಚ್ಚಾ ತೈಲ ಬೆಲೆ ಬ್ಯಾರಲ್‌ ಒಂದಕ್ಕೆ 71.95 ಡಾಲರ್‌ ಏರಿಕೆಯಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next