ಗಾಜಿನ ಮನೆಯಲ್ಲಿ ವಾಸವಾಗಿರುವವರು ಮತ್ತೂಬ್ಬರ ಮನೆಗೆ ಕುಚೋದ್ಯ ಕ್ಕಾದರೂ ಕಲ್ಲು ಹೊಡೆಯಬಾರದು ಎನ್ನುವುದು ನಾಣ್ಣುಡಿ. ಪಾಕಿಸ್ಥಾನದ ವಿಚಾರದಲ್ಲಿ ಇದು ಅಕ್ಷರಶಃ ಅನ್ವಯವಾಗುತ್ತದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕರನ್ನು ನುಗ್ಗಿಸಿ ಕಿತಾಪತಿ ಮಾಡುವ ಪಾಕಿಸ್ಥಾನಕ್ಕೆ ಇರಾನ್ ಬುದ್ಧಿ ಕಲಿಸಿದೆ ಎಂದರೆ ತಪ್ಪಾಗಲಾಗಲಾರದು. ಜೈಶ್-ಅಲ್-ಅದಿಲ್ ಉಗ್ರ ಸಂಘಟನೆ ಕಿಡಿಗೇಡಿತನ ನಡೆಸುತ್ತಿದೆ ಎಂಬ ಕಾರಣಗಳನ್ನು ನೀಡಿ ಮಂಗಳವಾರ ಸಿಸ್ಥಾನ್- ಬಲೂಚಿಸ್ಥಾನ್ ಭಾಗದಲ್ಲಿ ಇರಾನ್ ಉಡಾಯಿಸಿದ 2 ಕ್ಷಿಪಣಿಗಳಿಗೆ ಇಬ್ಬರು ಚಿಣ್ಣರು ಅಸುನೀಗಿ, ಮೂವರು ಗಾಯಗೊಂಡಿದ್ದಾರೆ.
ಈ ಘಟನೆ ಇರಾನ್ ಮತ್ತು ಪಾಕಿಸ್ಥಾನ ನಡುವೆ ರಾಜತಾಂತ್ರಿಕ ಬಾಂಧವ್ಯಕ್ಕೆ ಕೊಡಲಿ ಏಟು ತಂದಿಟ್ಟಿದೆ. ಏಕಪಕ್ಷೀಯವಾಗಿ ನಡೆಸಲಾಗಿರುವ ದಾಳಿಯನ್ನು ಖಂಡಿಸಿ ಪಾಕಿಸ್ಥಾನ ಸರಕಾರ ಟೆಹ್ರಾನ್‌ನಲ್ಲಿ ಇರುವ ತನ್ನ ರಾಯಭಾರಿಯನ್ನು ವಾಪಸ್ ಕರೆಯಿಸಿಕೊಂಡಿದೆ. ಜತೆಗೆ ಇಸ್ಲಾಮಾಬಾದ್‌ನಲ್ಲಿ ಇರುವ ಇರಾನ್ ರಾಯಭಾರಿಯನ್ನು ಕರೆಯಿಸಿಕೊಂಡು ಪ್ರಬಲ ಪ್ರತಿಭಟನೆಯನ್ನೂ ಸಲ್ಲಿಸಿದೆ. ಅಂತಿಮವಾಗಿ ಇರಾನ್ ರಾಯಭಾರಿಯನ್ನು ಉಚ್ಚಾಟಿಸಿದೆ.
ಇದೇ ವಿಚಾರವನ್ನು ಭಾರತದ ಮಟ್ಟಿಗೆ ಅನುಸರಿಸಿ ನೋಡಿದರೆ ಹೇಗೆ ಇರುತ್ತದೆ ಎಂಬುದನ್ನು ಯೋಚಿಸಬೇಕಾಗಿದೆ. ಕೇಂದ್ರದಲ್ಲಿ ಈಗ ಇರುವ ಸರಕಾರ ಅಧಿಕಾರಕ್ಕೆ ಬರುವ ಮೊದಲು ಜಮ್ಮು ಮತ್ತು ಕಾಶ್ಮೀರ ಸೇರಿ ದೇಶದ ವಿವಿಧ ಭಾಗಗಳಲ್ಲಿ ಪಾಕಿಸ್ಥಾನ ಪ್ರೇರಿತ ಉಗ್ರಕೃತ್ಯಗಳು ನಡೆಯುತ್ತಿದ್ದವು. ಆಗ ನೆರೆಯ ದೇಶಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಿದ್ದರೂ, ಮೌನ ಮುರಿದಿರಲಿಲ್ಲ ಅಥವಾ ಹಾರಿಕೆಯ ಉತ್ತರ ನೀಡುತ್ತಿತ್ತು. ಕಾರಣವಿಲ್ಲದೆ ಮತ್ತೂಂದು ರಾಷ್ಟ್ರದ ವಿರುದ್ಧ ಪಿತೂರಿ ನಡೆಸುತ್ತಾ ಹೋದರೆ ಒಂದು ಕಾಲಘಟ್ಟದಲ್ಲಿ ಅದುವೇ ತಿರುಗು ಬಾಣವಾಗುತ್ತದೆ ಎನ್ನುವ ಹಳೆಯ ನಂಬಿಕೆ ಇಲ್ಲಿ ಅನ್ವಯವಾಗುತ್ತದೆ.
2012ರಲ್ಲಿ ಸ್ಥಾಪನೆಗೊಂಡ ಜೈಶ್-ಅಲ್-ಅದಿಲ್ ಉಗ್ರ ಸಂಘಟನೆಯ ಮೇಲೆ ಇರಾನ್ ಮತ್ತು ಅಮೆರಿಕ ಈಗಾಗಲೇ ನಿಷೇಧ ಹೇರಿವೆ. ಆ ಉಗ್ರ ಸಂಘಟನೆ ಪಾಕಿಸ್ಥಾನದ ಘಾತಕ ಗುಪ್ತಚರ ಸಂಸ್ಥೆ ಐಎಸ್‌ಐ ಜತೆಗೆ ಕೈ ಜೋಡಿಸಿದೆ. ಇದೇ ಸಂಘಟನೆ ನಮ್ಮ ದೇಶದ ಪ್ರಜೆ ಕುಲಭೂಷಣ ಜಾಧವ್ ಅವರನ್ನು ಅಪಹರಿಸಿ ಪಾಕ್ ಸರಕಾರಕ್ಕೆ ಹಸ್ತಾಂತರಿಸಿದೆ. ಪಾಕಿಸ್ಥಾನ ಹಾಗೂ ಇರಾನ್ ಸಿಸ್ಥಾನ್-ಬಲೂಚಿಸ್ಥಾನ ವ್ಯಾಪ್ತಿ ಸೇರಿದಂತೆ ಒಟ್ಟು 904 ಕಿಮೀ ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿದೆ. ಜೈಶ್-ಅಲ್-ಅದಿಲ್ ಸಂಘಟನೆ ಈ ಗಡಿ ವ್ಯಾಪ್ತಿಯಲ್ಲಿ ಇರಾನ್ ವಿರುದ್ಧ ದಾಳಿ ನಡೆಸುತ್ತಾ ಬಂದಿದೆ.
ಕಳೆದ ವರ್ಷವಂತೂ ಎರಡೂ ದೇಶಗಳ ಗಡಿ ನಡುವೆ ರಕ್ತದೋಕುಳಿಯೇ ಹರಿದಿದೆ. ಕಳೆದ ತಿಂಗಳು ಈ ಸಂಘಟನೆಯ ದಾಳಿಗೆ11 ಮಂದಿ ಇರಾನ್ ಪೊಲೀ ಸರು ಸಾವಿಗೀಡಾಗಿದ್ದರು. ಕಳೆದ ವರ್ಷದ ಜು.23ರಂದು ನಾಲ್ವರು ಇರಾನಿ ಪೊಲೀಸರನ್ನು ಇದೇ ಸಂಘಟನೆ ಕೊಂದಿತ್ತು. ಮೇನಲ್ಲಿ ಐವರನ್ನು ಗುಂಡಿನ ಕಾಳಗ ವೊಂದರಲ್ಲಿ ಹತ್ಯೆ ಮಾಡಿತ್ತು. ಈ ಮೂಲಕ ಪಾಕಿಸ್ಥಾನ ಭಾರತ ಮಾತ್ರವಲ್ಲದೆ, ಇರಾನ್ ಜತೆಗೆ ಕೂಡ ಬಾಂಧವ್ಯ ಕೆಡಿಸಿಕೊಂಡಿದೆ. ಜತೆಗೆ ಅಲ್ಲಿಯೂ ಉಗ್ರರನ್ನು ಒಳನುಗ್ಗಿಸಿ ರಕ್ತದೋಕುಳಿ ಹರಿಸುವ ಕೆಲಸವನ್ನೇ ಕಾಯಂ ಮಾಡಿಕೊಂಡಿದೆ.
ಹದಗೆಟ್ಟಿರುವ ಪಾಕಿಸ್ಥಾನದ ಅರ್ಥ ವ್ಯವಸ್ಥೆಯ ಲಾಭ ಪಡೆದುಕೊಳ್ಳುವ ನಿಟ್ಟಿನಲ್ಲಿ ಚೀನಾ ಸೇರಿದಂತೆ ಕೆಲವೊಂದು ದೇಶಗಳು ಅದಕ್ಕೇ ಬೆಂಬಲ ನೀಡುತ್ತಿರು ವುದು ದುರದೃಷ್ಟಕರ. ಈ ಬಿಕ್ಕಟ್ಟು ಕೇವಲ 2 ರಾಷ್ಟ್ರಗಳ ನಡುವಿನದ್ದು ಎಂದು ಯಾರೂ ತಿಳಿದುಕೊಳ್ಳುವಂತೆ ಇಲ್ಲ. ಇಸ್ರೇಲ್-ಹಮಾಸ್ ನಡುವಿನ ಕಾಳಗ ಈಗಾಗಲೇ ಮಧ್ಯಪ್ರಾಚ್ಯ ಪರಿಸ್ಥಿತಿಯನ್ನು ಬಾಣಲೆಯಿಂದ ಬೆಂಕಿಗೆ ತಂದಿಟ್ಟಿದೆ. ಪಾಕ್ ಮೇಲೆ ಇರಾನ್ ದಾಳಿ ಅದಕ್ಕೆ ಸೇರ್ಪಡೆಯಾಗದಂತೆ ನೋಡಿಕೊಳ್ಳಬೇಕಾಗಿದೆ.