ರಾಮನಗರ: ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಸ್ಪರ್ಧಿಸದಿದ್ದರೆ ಕಾರ್ಯಕರ್ತರ ಪರವಾಗಿ ಇಕ್ಬಾಲ್ ಹುಸೇನ್ ಕಣಕ್ಕಿಳಿಯಲಿದ್ದಾರೆ. ಹಾಗೊಮ್ಮೆ ಅವರು ಇಳಿಯದಿದ್ದರೆ ನನ್ನ ಸ್ಪರ್ಧೆ ಖಚಿತ ಎಂದು ಎಂಎಲ್‌ಸಿ ಸಿ.ಎಂ.ಲಿಂಗಪ್ಪ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ಬಿಡದಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಕ್ಷೇತ್ರದ ಕಾರ್ಯಕರ್ತರ ರಕ್ಷಣೆಗಾಗಿ ನನ್ನ ಈ ನಿರ್ಧಾರ ನಿಶ್ಚಲ ಎಂದರು.
ಮೈತ್ರಿ ಧರ್ಮಪಾಲನೆ ಇಲ್ಲದಿದ್ದರೆ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಉಳಿಯುತ್ತೋ, ಬಿಡುತ್ತೋ ಅದರ ಬಗ್ಗೆ ನಮಗೆ ಚಿಂತೆಯಿಲ್ಲ. ನಮಗೆ ನಮ್ಮ ಪಕ್ಷದ ಕಾರ್ಯಕರ್ತರೇ ಮುಖ್ಯ. ನಮ್ಮ ಮತ್ತು ಸ್ಥಳೀಯ ಕಾರ್ಯಕರ್ತರ ಈ ಅಭಿಪ್ರಾಯವನ್ನು ಸಂಸದ ಡಿ.ಕೆ.ಸುರೇಶ್ ಸಹ ಹೊಂದಿದ್ದಾರೆ. ಅವರಿಗೂ ಕ್ಷೇತ್ರದಲ್ಲಿ ಪಕ್ಷ ಮತ್ತು ಪಕ್ಷದ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಹಂಬಲವಿದೆ. ಆದರೆ, ಅವರು ಅಣ್ಣ, ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಎದುರು ಹಾಕಿಕೊಂಡು ರಾಜಕಾರಣ ಮಾಡುವುದು ಹೇಗೆ ಎಂಬ ಕಾರಣಕ್ಕೆ ಸುಮ್ಮನಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಸಚಿವ ಡಿ.ಕೆ.ಶಿವಕುಮಾರ್ ಮುಖ್ಯ ಕಾರಣರಲ್ಲ. ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮುಖ್ಯ ಕಾರಣ. ಡಿ.ಕೆ.ಶಿವಕುಮಾರ್ ಅವರೊಟ್ಟಿಗೆ ಇದ್ದರು ಅಷ್ಟೇ, ಅವರು ಸನ್ನಿವೇಶದ ಶಿಶು ಎಂದರು.
ಬಿಜೆಪಿ ಸೇರಿದ್ದಕ್ಕೆ ಸಹಮತ ಇಲ್ಲ: ತಮ್ಮ ಪುತ್ರ ಎಲ್.ಚಂದ್ರಶೇಖರ್ ಅವರು ಬಿಜೆಪಿ ಸೇರಿರುವ ಬಗ್ಗೆ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ತಮ್ಮ ಕುಟುಂಬದಲ್ಲಿ ಯಾವ ಸಹಮತವೂ ಇಲ್ಲ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಆತ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ. ಇಕ್ಬಾಲ್ ಅಥವಾ ಚಂದ್ರಶೇಖರ್ ಎಂಬ ಚರ್ಚೆಗಳು ನಡೆದವು. ಇಕ್ಬಾಲ್ ಹುಸೇನ್‌ಗೆ ಹೋಲಿಸಿದರೆ ಚಂದ್ರಶೇಖರ್ ಬಳಿ ಕೆಲವು ಕೊರತೆ ಇತ್ತು. ಮೇಲಾಗಿ, ಆತ ಎಂಎಲ್‌ಎ ಸ್ಥಾನಕ್ಕೆ ಸ್ಪರ್ಧಿಸುವುದಕ್ಕೆ ತಮ್ಮ ಪತ್ನಿಯ ವಿರೋಧವೂ ಇತ್ತು ಎಂದರು. ಎಲ್.ಚಂದ್ರಶೇಖರ್ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಮಾತೇ ಇಲ್ಲ. ಇಬ್ಬರು ಮಕ್ಕಳು ನನ್ನೊಡನೆ ಇರ್ತಾರೆ, ಇನ್ನೊಬ್ಬ ಬೇರೆ ಇರ್ತಾನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಇನ್ನೆರಡು ದಿನದಲ್ಲಿ ನಿರ್ಧಾರ: ಜಿಪಂ ಮಾಜಿ ಅಧ್ಯಕ್ಷ, ಸಾರ್ವತ್ರಿಕ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಇಕºಲ್ ಹುಸೇನ್ ಮಾತನಾಡಿ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಬೇಕು ಎಂಬುದು ಕಾರ್ಯಕರ್ತರ ಒತ್ತಾಯ. ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 70 ಸಾವಿರ ಮತಗಳು ಲಭ್ಯವಾಗಿವೆ. ಇಷ್ಟು ಮತಗಳನ್ನು ತಂದು ಕೊಟ್ಟ ಕಾರ್ಯಕರ್ತರನ್ನು ಎಲ್ಲಿಗೆ ಕಳುಹಿಸಬೇಕು ಎಂಬ ಪ್ರಶ್ನೆಯನ್ನು ವರಿಷ್ಠರ ಮುಂದೆ ಇಡಲಾಗಿದೆ. ಅಭ್ಯರ್ಥಿಯ ಸ್ಪರ್ಧೆ ಬಗ್ಗೆ ನಾಯಕರ ಅಭಿಪ್ರಾಯ ಮುಖ್ಯವಲ್ಲ. ಕಾರ್ಯಕರ್ತರ ಅಭಿಪ್ರಾಯಗಳು ಮುಖ್ಯ. ಬೇರು ಮಟ್ಟದ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಲು ಬೂತ್ ಹಾಗೂ ಹೋಬಳಿ ಮಟ್ಟದಲ್ಲಿ ಸಭೆಗಳು ಇನ್ನೆರಡು ದಿನಗಳಲ್ಲಿ ನಡೆಯಲಿದೆ. ಪಕ್ಷ ಅಭ್ಯರ್ಥಿಯನ್ನು ಸೂಚಿಸದಿದ್ದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಪರ ಅಭ್ಯರ್ಥಿಯೊಬ್ಬರನ್ನು ಕಣಕ್ಕೆ ಇಳಿಸುವ ನಿರ್ಧಾರ ಕೈಗೊಳ್ಳಾಗುವುದು ಎಂದು ತಿಳಿಸಿದರು.
ಪಕ್ಷ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ, ಮೈತ್ರಿ ಅಭ್ಯರ್ಥಿಯ ಪರವಾಗಿ ನಾನಲ್ಲ, ನನ್ನ ಹೆಣವೂ ಪ್ರಚಾರಕ್ಕೆ ಹೋಗೋಲ್ಲ. ಪಕ್ಷದ ವರಿಷ್ಠರು ಹೇಳಿದ್ದೆಲ್ಲ ಕೇಳಿದ್ದಾಗಿದೆ. ಅಧಿಕೃತ ಅಭ್ಯರ್ಥಿ ಕಣಕ್ಕಿಳಿಯದಿದ್ದರೆ ನಮ್ಮ ನಿರ್ಧಾರವನ್ನು ನಾವೇ ಕೈಗೊಳ್ಳುತ್ತೇವೆ. ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತೇವೆ.
– ಸಿ.ಎಂ.ಲಿಂಗಪ್ಪ, ಎಂಎಲ್‌ಸಿ