ಗಂಗಾವತಿ: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅನ್ಸಾರಿ ಅವರಿಂದ ಮಾತ್ರ ಸರ್ವ ಜನಾಂಗ ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯವಾಗಿದೆ. ಬಿಜೆಪಿಗೆ ಸಾಥ್ ನೀಡುವ ವ್ಯಕ್ತಿಗಳಿಂದ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ದೂರು ನೀಡಿದ್ದು ಖಂಡನೀಯವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಶಾಮೀದ್ ಮನಿಯಾರ್ ತಿಳಿಸಿದರು.
ಅವರು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹರಿಪ್ರಸಾದ್ ಅವರಿಗೆ ದೂರು ನೀಡಿದವರಿಗೆ ತಿರುಗೇಟು ನೀಡಿ ಮಾತನಾಡಿದರು.
ಮಾಜಿ ಸಂಸದ ಎಚ್.ಜಿ.ರಾಮುಲು ಆರೋಗ್ಯ ಕ್ಷೇಮ ವಿಚಾರಣೆಗೆ ಆಗಮಿಸಿದ್ದ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಕೆಲವು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾದ ಮುಖಂಡರು, ಜೆಡಿಎಸ್ ಕಾರ್ಯಕರ್ತರು ಅನ್ಸಾರಿ ಬಗ್ಗೆ ದೂರು ನೀಡಿದರೆ ಕಾಂಗ್ರೆಸ್ ಹೈಕಮಾಂಡ ತಲೆ ಕೆಡಿಸಿಕೊಳ್ಳುವುದಿಲ್ಲ. ಇದರಿಂದ ಎಚ್‌ಆರ್‌ಜಿ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ. ಕಾಂಗ್ರೆಸ್ ಸೇರ್ಪಡೆಗೂ ಮುಂಚೆ ತಮ್ಮ ಆಪ್ತರಿಂದ ಅನ್ಸಾರಿ ವಿರುದ್ಧ ದೂರು ಕೊಡಿಸುವುದು ಸರಿಯಲ್ಲ. ಈಗಾಗಲೇ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಇಡೀ ರಾಜ್ಯದಲ್ಲಿಯೇ ಪ್ರಥಮವಿದ್ದು ಹೈಕಮಾಂಡ್ ಸಹ ಮುಂದಿನ ಅಸೆಂಬ್ಲಿ ಚುನಾವಣೆಯ ಟಿಕೇಟ್ ಖಚಿತ ಮಾಡಿದೆ.
ಅನ್ಸಾರಿ ಜಾತ್ಯತೀತ, ಧರ್ಮಾತೀತ ಮತ್ತು ಅಭಿವೃದ್ಧಿ ಪರವಾಗಿ ಇರುವ ವ್ಯಕ್ತಿಯಾಗಿದ್ದಾರೆ. ಅವರ ಅವಧಿಯಲ್ಲಿ ಅಂಜನಾದ್ರಿ, ಪಂಪಾಸರೋವರ ಹಾಗೂ ವಾಲೀಕೀಲ್ಲಾ ಆದಿಶಕ್ತಿ ದೇಗುಲಗಳ ಅಭಿವೃದ್ಧಿಗೆ ಕೋಟ್ಯಾಂತರ ರೂ.ಗಳ ಅನುದಾನ ಮಂಜೂರಿ ಮಾಡಿಸಿದ್ದರು. ಮುಂದಿನ ಚುನಾವಣೆಯಲ್ಲಿ ಮತ್ತೆ ಗೆದ್ದು ಸರಕಾರದಲ್ಲಿ ಮಂತ್ರಿಯಾಗಿ ಉತ್ತರ ಪ್ರದೇಶದ ಅಯೋಧ್ಯೆಗಿಂತಲೂ ಹೆಚ್ಚಿನ ಅಭಿವೃದ್ಧಿ ಮಾಡಲಿದ್ದಾರೆ ಇದನ್ನು ಯಾರಿಂದಲೂ ತಪ್ಪಿಸಲು ಆಗಲ್ಲ.
ಇದನ್ನೂ ಓದಿ :
ಬಿ.ಕೆ.ಹರಿಪ್ರಸಾದ್ ಅವರಿಗೆ ಕೆಲವರು ದೂರು ನೀಡುವ ಸಂದರ್ಭದಲ್ಲಿ ವಿಡಿಯೋ ಮಾಡಿದ್ದು ಈ ವಿಡಿಯೋವನ್ನು ಬಿಜೆಪಿ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಮುಂದಿನ ಚುನಾವಣೆಯನ್ನು ದೃಷ್ಠಿ ಇಟ್ಟುಕೊಂಡು ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆಯೂ ಆಕ್ಷೇಪಾರ್ಹವಾಗಿ ಮಾತನಾಡಿದ್ದು ಖಂಡನೀಯವಾಗಿದೆ. ಈ ವಿಡಿಯೋವನ್ನು ಸಿದ್ದರಾಮಯ್ಯನವರಿಗೆ ಕಳುಹಿಸಿ ಪಕ್ಷ ನಿಷ್ಠವಂತ ಕಾರ್ಯಕರ್ತರು ಯಾರು ಪಕ್ಷ ದ್ರೋಹಿಗಳು ಯಾರು ಎಂಬ ಬಗ್ಗೆ ವಿವರಣೆ ತಿಳಿಸಲಾಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯ ಸೋಮನಾಥ ಭಂಡಾರಿ, ಯುವ ಕಾಂಗ್ರೆಸ್ ಮುಖಂಡ ಮಲ್ಲಿದೇಶ ದೇವರ ಮನಿ ಇದ್ದರು.