Advertisement

ಐಪಿಎಸ್‌ ಅಧಿಕಾರಿ ಮಧುಕರ್‌ ಶೆಟ್ಟಿ ವಿಧಿವಶ

06:26 AM Dec 29, 2018 | |

ಬೆಂಗಳೂರು: ಎಚ್‌ 1 ಎನ್‌ 1 ಸೋಂಕಿನಿಂದ ಬಳಲುತ್ತಿದ್ದ ಐಪಿಎಸ್‌ ಅಧಿಕಾರಿ ಉಡುಪಿ ಮೂಲದ ಡಾ. ಕೆ. ಮಧುಕರ್‌ ಶೆಟ್ಟಿ ಶುಕ್ರವಾರ ರಾತ್ರಿ ಚಿಕಿತ್ಸೆ ಫ‌ಲಕಾರಿಯಾಗದೆ ಹೈದ್ರಾಬಾದ್‌ನ ಕಾಂಟಿನೆಂಟಲ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Advertisement

ಹೈದ್ರಾಬಾದ್‌ನ ಸರ್ದಾರ್‌ ವಲ್ಲಭಾಯ್‌ ಪಟೇಲ್‌ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಎಚ್‌.1 ಎನ್‌ 1 ಸೋಂಕಿನ ಪರಿಣಾಮ, ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಸೋಂಕಿನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೈದ್ರಾಬಾದ್‌ನ ಕಾಂಟಿನೆಂಟಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಉಡುಪಿ ಮೂಲದ ಮಧುಕರ್‌ ಶೆಟ್ಟಿ ಅವರು 1971 ಡಿ.17ರಂದು ಜನಿಸಿದ್ದರು. ದೆಹಲಿಯ ಜವಾಹರಲಾಲ್‌ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಸಮಾಜಶಾಸ್ತ್ರದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿದ್ದರು. 1999ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾದ ಅವರು ಚಿಕ್ಕಮಗಳೂರು, ಚಾಮರಾಜನಗರ, ಲೋಕಾಯುಕ್ತದಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಾಮಾಣಿಕ ಹಾಗೂ ದಕ್ಷ, ಸಾಮಾಜಿಕ ಕಳಕಳಿ ಹೊಂದಿದ ಅಧಿಕಾರಿ ಎಂಬ ಹಿರಿಮೆ ಗಳಿಸಿದ್ದರು.

2011ರಲ್ಲಿ ಉನ್ನತ ವಿದ್ಯಾಭ್ಯಾಸ ರಜೆಯ ಮೇಲೆ ಅಮೆರಿಕಾಗೆ ತೆರಳಿ ಡಾಕ್ಟರೇಟ್‌ ಪದವಿ ಪಡೆದಿದ್ದರು. ವಿದೇಶದಿಂದ ವಾಪಾಸ್‌ ಬಂದ ಬಳಿಕ ಡಿಐಜಿಯಾಗಿ ಬಡ್ತಿ ಪಡೆದು ಕೆಲ ಕಾಲ ಪೊಲೀಸ್‌ ನೇಮಕಾತಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಕೇಂದ್ರ ಸೇವೆಗೆ ತೆರಳಿದ್ದ ಅವರು ಹೈದ್ರಾಬಾದ್‌ನ ಸರ್ದಾರ್‌ ವಲ್ಲಭಾಯ್‌ ಪಟೇಲ್‌ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಪ್ರಾಮಾಣಿಕ ಅಧಿಕಾರಿ:  ಐಪಿಎಸ್‌ ಅಧಿಕಾರಿ ಮಧುಕರ್‌ ಶೆಟ್ಟಿ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು. ವೃತ್ತಿ ಜೀವನದಲ್ಲಿ ಎಂದಿಗೂ ವೈಯಕ್ತಿಕ ವಿಚಾರಕ್ಕೆ ಸರ್ಕಾರಿ ವಾಹನ ಬಳಕೆ ಮಾಡಿದವರಲ್ಲ. ಒಂದು ವೇಳೆ ಬಳಕೆ ಮಾಡಿದರೆ, ತಮ್ಮ ಚಾಲಕನಿಗೆ ಪ್ರತಿ ಕಿ.ಮೀಟರ್‌  ಲೆಕ್ಕ ಹಾಕುವಂತೆ ಸೂಚಿಸಿ, ಹಣ ಪಾವತಿಸುತ್ತಿದ್ದರು. ಅಂತಹ ಅಧಿಕಾರಿಯನ್ನು ಕಳೆದುಕೊಂಡಿರುವುದು ಪೊಲೀಸ್‌ ಇಲಾಖೆ ಮಾತ್ರವಲ್ಲ.

Advertisement

ಇಡೀ ರಾಜ್ಯಕ್ಕೆ ದೊಡ್ಡ ನಷ್ಟ ಎಂದು ಅವರೊಟ್ಟಿಗೆ ಕೆಲಸ ಮಾಡಿದ ಇಲಾಖೆಯ ಕಿರಿಯ ಅಧಿಕಾರಿಯೊಬ್ಬರು ಭಾವುಕರಾದರು. ಜಕ್ಕೂರು ಬಳಿ ಮಧುಕರ್‌ ಶೆಟ್ಟಿ ಅವರು ಪೊಲೀಸ್‌ ಹೌಸಿಂಗ್‌ ಸೊಸೈಟಿ ಮೂಲಕ ಖರೀದಿಸಿದ್ದ  ನಿವೇಶನಕ್ಕೆ  ಭೇಟಿ ನೀಡಿದ ಶೆಟ್ಟಿ ಅವರು, ಒಂದು ವೇಳೆ ರೈತರಿಗೆ ಅನ್ಯಾಯವಾಗಿ ಈ ಭೂಮಿ ಕೊಟ್ಟಿದ್ದರೆ ಅಂತಹ ನಿವೇಶನವೇ ಬೇಡ ಎಂದು ನಿರಾಕರಿಸಿದ್ದರು ಎಂದು  ಆ ಅಧಿಕಾರಿ ಕಣ್ಣೀರಿಟ್ಟರು.

ಮುಖ್ಯಮಂತ್ರಿ ಸಂತಾಪ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಗೃಹಸಚಿವ ಎಂ.ಬಿ. ಪಾಟೀಲ್‌ ಅವರು  ಮಧುಕರ್‌ ಶೆಟ್ಟಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ಸಂತಾಪ ಸೂಚಿಸಿ, ಪೊಲೀಸ್‌ ಇಲಾಖೆಯ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಮಧುಕರ್‌ ಶೆಟ್ಟಿ ಕರಾವಾಳಿಯ ಮನೆ ಮಗನಾಗಿದ್ದರು.

ರಾಜ್ಯದ ಲೋಕಾಯುಕ್ತ ಸಂಸ್ಥೆಯಲ್ಲಿ ಎಸ್ಪಿಯಾಗಿದ್ದ ಅವರು, ಭ್ರಷ್ಟರ ಪಾಲಿಕೆ ಸಿಂಹಸ್ವಪ್ನವಾಗಿದ್ದರು. ಪೊಲೀಸ್‌ ಕಾರ್ಯದ ಜತೆಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳಿ, ಮತ್ತೆ ತಮ್ಮ ಕರ್ತವ್ಯ ಆರಂಭಿಸಿದ್ದ ಮಧುಕರ್‌ ಶೆಟ್ಟಿ ಅವರ ಅಕಾಲಿಕ ಸಾವು ತೀವ್ರ ಆಘಾತ ಉಂಟು ಮಾಡಿದೆ ಎಂದು ಹೇಳಿದ್ದಾರೆ. 

ವೀರಪ್ಪನ್‌ ವಿಶೇಷ ಪಡೆಯಲ್ಲಿ ಸೇವೆ: ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಪುತ್ರ ಮಧುಕರ್‌ ಶೆಟ್ಟಿ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಎಸ್ಪಿಯಾಗಿದ್ದರು. ಚಿಕ್ಕಮಗಳೂರು ಜಿಲ್ಲಾವರಿಷ್ಠಾಧಿಕಾರಿ ಬಡ್ತಿ ಪಡೆದು ಕರ್ತವ್ಯ ನಿರ್ವಹಿಸುವ ವೇಳೆ ಹಳ್ಳಿಯೊಂದರಲ್ಲಿ ದಲಿತರ ಭೂಮಿಯನ್ನು ಕಬಳಿಸಿದ್ದವರ ವಿರುದ್ಧ ಕ್ರಮ ಕೈಗೊಂಡು, ಜಮೀನು ವಾಪಸ್‌ ಕೊಡಿಸಿದ್ದರು. ಇದಕ್ಕೆ ಅಂದಿನ ಜಿಲ್ಲಾಧಿಕಾರಿ ಹರ್ಷಾಗುಪ್ತ ಕೂಡ ಸಹಕಾರ ನೀಡಿದ್ದರು.

ಹೀಗಾಗಿ ಚಿಕ್ಕಮಗಳೂರಿನ ಆ ಹಳ್ಳಿಗೆ “ಗುಪ್ತಶೆಟ್ಟಿ’ ಎಂದು ಹೆಸರಿಡಲಾಗಿದೆ. ನಕ್ಸಲ್‌ ನಿಗ್ರಹ ಪಡೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ನಕ್ಸಲರು ಮುಖ್ಯವಾಹಿನಿಗೆ ಬರಬೇಕು ಎಂದು ಬಯಸಿದ್ದರು. ದಂತಚೋರ ವಿರಪ್ಪನ್‌ ಬಂಧನಕ್ಕೆ ರಚಿಸಿದ್ದ “ವಿಶೇಷ ಕಾರ್ಯ ಪಡೆ’ಯಲ್ಲಿ ಮಧುಕರ್‌ ಶೆಟ್ಟಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಲೋಕಾಯುಕ್ತ ಎಸ್ಪಿಯಾಗಿದ್ದ ವೇಳೆ ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಸಿಂಹಸ್ಪಪ್ನವಾಗಿದ್ದರು.

ಸಿ.ಎಂ.ಸಂತಾಪ: ಐಪಿಎಸ್‌ ಅಧಿಕಾರಿ ಮಧುಕರ ಶೆಟ್ಟಿ ನಿಧನಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಧುಕರ್‌ ಶೆಟ್ಟಿ ಅವರು ಹೈದರಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದಾಗ ಅಲ್ಲಿನ ವೈದ್ಯರೊಂದಿಗೆ ಮಾತನಾಡಿ¨ªೆ. ಅವರ ಪರಿಸ್ಥಿತಿ ಗಂಭೀರವಾಗಿದ್ದರೂ ಸಾವಿನೊಂದಿಗೆ ಹೋರಾಡಿ ಜಯಿಸುವರೆಂದು ನಂಬಿದ್ದೆ.

ಅವರ ಅಕಾಲಿಕ ನಿಧನ ತೀವ್ರ ಆಘಾತ ಉಂಟು ಮಾಡಿದೆ. ಅತ್ಯುತ್ತಮ ಅಧಿಕಾರಿಯಾಗಿದ್ದ ಅವರು ನೇರ ನಡೆ ನುಡಿಗಳಿಂದ ಜನಪ್ರಿಯರಾಗಿದ್ದರು ಎಂದು ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದ್ದಾರೆ. ಗೃಹ ಸಚಿವ ಎಂ.ಬಿ.ಪಾಟೀಲ್‌, ಮಹಿಳಾ ಮತ್ತು ಮಕ್ಕಳ ಅಭಿವೃದಿ ಸಚಿವೆ ಡಾ. ಜಯಮಾಲ ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next