ಬೆಂಗಳೂರು: ರಾಜ್ಯದ ದಕ್ಷ ಪೊಲೀಸ್ ಅಧಿಕಾರಿ, 2011ನೇ ಬ್ಯಾಚ್‌ನ ಐಪಿಎಸ್ ಆಫೀಸರ್ ಕೆ.ಅಣ್ಣಾಮಲೈ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರನ್ನು ಭೇಟಿ ಮಾಡಿದ ಅಣ್ಣಾಮಲೈ ಕೆಲ ಹೊತ್ತು ಚರ್ಚಿಸಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಡಿಜಿ-ಐಜಿಪಿ ಮೂಲಕ ರಾಜ್ಯ ಸರ್ಕಾರಕ್ಕೆ ರಾಜೀನಾಮೆ ಪತ್ರ ರವಾನಿಸಲಾಗಿದೆ.
ರಾಜ್ಯದ ದಕ್ಷ ಪೊಲೀಸ್ ಅಧಿಕಾರಿ ಎನ್ನಿಸಿಕೊಂಡಿದ್ದ ಅಣ್ಣಾಮಲೈ ರಾಜೀನಾಮೆ ಪೊಲೀಸ್ ಅಧಿಕಾರಿಗಳು ಮಾತ್ರವಲ್ಲದೆ, ಸಾರ್ವಜನಿಕ ವಲಯದಲ್ಲೂ ಅಚ್ಚರಿ ಮೂಡಿಸಿದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಅವರು ಹೇಳಿಕೆ ನೀಡಿದ್ದಾರೆ. ಆದರೆ, ‘ಯಾವುದೇ ಒತ್ತಡವಿಲ್ಲ. ವೈಯಕ್ತಿಕ ಜೀವನದ ಕಾರಣಗಳಿಂದ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ರಾಜೀನಾಮೆ ಪತ್ರದಲ್ಲಿ ಅಣ್ಣಾಮಲೈ ಹೇಳಿಕೊಂಡಿದ್ದಾರೆ.
ರಾಜೀನಾಮೆ ಪತ್ರದಲ್ಲಿ ಏನಿದೆ?: ‘ತಮ್ಮ ರಾಜಿನಾಮೆ ಕುರಿತು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ವರದಿಗಳ ಬಗ್ಗೆ ಕೆಲವೊಂದು ವಿಚಾರವನ್ನು ಹೇಳಲು ಇಚ್ಛಿಸುತ್ತೇನೆ. ಮೇ 28ರಂದು ತಮ್ಮ ಭಾರತೀಯ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ್ದು, ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲ ಸಮಯ ಹಿಡಿಯುತ್ತದೆ. ಸುದೀರ್ಘ ಆರು ತಿಂಗಳಿನಿಂದ ಯೋಚಿಸಿ ಈ ನಿರ್ಧಾರ ತೆಗೆದುಕೊಂಡಿ ರುವುದಾಗಿ’ ಅಣ್ಣಾಮಲೈ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.
‘ನಾನು ನನ್ನ ಖಾಕಿಯೊಂದಿಗೆ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ. ನನ್ನ ಸಹದ್ಯೋಗಿಗಳ ಜೊತೆ 9 ವರ್ಷ ಕಳೆದ ಸುಂದರವಾದ ಕ್ಷಣಗಳನ್ನು ನಾನು ಎಂದಿಗೂ ಮರೆಯುವಂತಿಲ್ಲ. ಪೊಲೀಸ್ ಅಧಿಕಾರಿಯಾಗಿ ಕೆಲಸ ದೇವರಿಗೆ ಹತ್ತಿರವಾದ ಕೆಲಸ. ಹೆಚ್ಚು ಒತ್ತಡ ಇರುವ ಕೆಲಸಗಳು ಅತೀ ಕಡಿಮೆ ಸಮಯದಲ್ಲಿ ಬರುತ್ತದೆ. ನಾನು ಸಾಕಷ್ಟು ಸಮಾರಂಭಗಳಿಂದ ದೂರು ಉಳಿದುಕೊಂಡಿದ್ದೆ. ನನಗೆ ಸಹಾಯ ಮಾಡಿದ ವ್ಯಕ್ತಿಗಳ ಕಷ್ಟದ ಸಂದರ್ಭದಲ್ಲಿ ಅವರೊಂದಿಗೆ ಇರಲು ಸಾಧ್ಯವಾಗಲಿಲ್ಲ.’
‘ಕಳೆದ ವರ್ಷ ಕೈಲಾಸ ಮಾನಸ ಸರೋವರಕ್ಕೆ ಭೇಟಿ ನೀಡಿದ್ದಾಗ ನನ್ನ ಜೀವನದಲ್ಲಿ ನನ್ನ ಆದ್ಯತೆಗಳ ಬಗ್ಗೆ ಮನವರಿಕೆ ಆಯಿತು. ಹಿರಿಯ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ನಿಧನ ನನ್ನ ಜೀವನದ ಬಗ್ಗೆ ಯೋಚಿಸಲು ಸಹಾಯ ಮಾಡಿತು. ಎಲ್ಲ ಒಳ್ಳೆಯ ಕ್ಷಣಗಳು ಮುಗಿಯುತ್ತಾ ಬಂದಿದೆ. ಖಾಕಿ ಸಮಯ ಇಲ್ಲಿಗೆ ಕೊನೆಯಾಗುತ್ತದೆ ಎಂದು ನಿರ್ಧರಿಸಿದ್ದೇನೆ. ಕಳೆದ ಆರು ತಿಂಗಳಿಂದ ರಾಜೀನಾಮೆ ಬಗ್ಗೆ ಯೋಚನೆ ಮಾಡಿದ್ದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅನನುಕೂಲವಾಗಬಾರದು ಎಂಬ ಉದ್ದೇಶಕ್ಕೆ ರಾಜೀನಾಮೆ ಸಲ್ಲಿಸಿರಲಿಲ್ಲ. ನನ್ನ ರಾಜೀನಾಮೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಇದು ನನಗೆ ಹಾಗೂ ನನ್ನ ಬೆಸ್ಟ್ ಫ್ರೆಂಡ್ ಅಂದರೆ ನನ್ನ ಪತ್ನಿಗೆ ಭಾವನಾತ್ಮಕ ಸಮಯ’.
ಮುಂದೆ ಏನು?: ‘ನನ್ನ ಮುಂದಿನ ನಿರ್ಧಾರ ಬಗ್ಗೆ ತಿಳಿದುಕೊಳ್ಳಲು ಬಯಸುವವರಿಗೆ ಹೇಳುವುದೇನೆಂದರೆ, ನಾನೊಬ್ಬ ಸಣ್ಣ ಮನುಷ್ಯ. ದೊಡ್ಡ ಕನಸು ಹೊಂದಿದ್ದೇನೆ. ಜೀವನದಲ್ಲಿ ಕಳೆದುಕೊಂಡಿರುವ ಸಣ್ಣ-ಪುಟ್ಟ ಸಂತೋಷಗಳನ್ನು ಪಡೆಯಲು ಸಮಯ ಬೇಕಿದೆ. ಬೆಳೆಯುತ್ತಿರುವ ನನ್ನ ಮಗನಿಗೆ ಒಬ್ಬ ಉತ್ತಮ ತಂದೆ ಆಗಬೇಕು. ನಾನು ನನ್ನ ಮನೆಗೆ ಮರಳಿ ಕೃಷಿ ಮಾಡುತ್ತೇನೆ. ನಾನೇ ಸಾಕಿದ ಕುರಿಗಳು ನನ್ನ ಮಾತನ್ನು ಕೇಳುತ್ತದೆಯೋ ಎಂಬುದನ್ನು ನೋಡಬೇಕು. ಏಕೆಂದರೆ ನಾನು ಈಗ ಪೊಲೀಸ್ ಅಧಿಕಾರಿ ಅಲ್ಲ.’
ಜೀವನ ಎಂಬುದೇ ದೊಡ್ಡ ಅವಕಾಶ. ಜೀವನವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಕಾರ್ಕಳ, ಉಡುಪಿ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ನನ್ನ ಜತೆ ನ್ಯಾಯಕ್ಕಾಗಿ ಹೋರಾಡಿದ ಪ್ರತಿಯೊಬ್ಬ ವ್ಯಕ್ತಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಹಿರಿಯ ಅಧಿಕಾರಿಗಳು ಕಲಿಸಿಕೊಟ್ಟ ಮಾರ್ಗದರ್ಶನ ಹಾಗೂ ನನಗಿಂತ ಸ್ಮಾರ್ಟ್ ಆದ ಕಿರಿಯ ಅಧಿಕಾರಿಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ. ನನ್ನ ಕಾನ್ಸ್‌ಟೇಬಲ್ಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ಘನತೆಯಿಂದ ಹಾಗೂ ಹೆಮ್ಮೆಯಿಂದ ನನ್ನ ಸೇವೆಯನ್ನು ಸಲ್ಲಿಸಿದ್ದೇನೆ ಎಂದು ಭಾವಿಸಿದ್ದೇನೆ. ಯಾವುದೇ ಸಮಯದಲ್ಲಿ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಒಂದು ಮಾತು ಸತ್ಯ. ನಾನು ನಿಮ್ಮನ್ನು ಹಾಗೂ ಮುಖ್ಯವಾಗಿ ನಿಮ್ಮ ಪ್ರೀತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪತ್ರದಲ್ಲಿ ಭಾವನ್ಮಾಕವಾಗಿ ಪತ್ರ ಬರೆದಿದ್ದಾರೆ.