Advertisement

IPS ಅಧಿಕಾರಿ ಅಮೃತ್‌ ಪೌಲ್‌ಗೆ ಜಾಮೀನು

09:38 PM Sep 25, 2023 | Team Udayavani |

ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣದ ಆರೋಪದಲ್ಲಿ ಜೈಲು ಪಾಲಾಗಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಅವರಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Advertisement

ಜಾಮೀನು ಕೋರಿ ಅಮೃತ್‌ ಪೌಲ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಅರ್ಜಿದಾರ ಆರೋಪಿ ಜಾಮೀನು ಸಿಕ್ಕ ಬಳಿಕ ತನಿಖೆಗೆ ಸಹಕರಿಸಬೇಕು. ಸಾಕ್ಷ್ಯಗಳ ನಾಶಕ್ಕೆ ಪ್ರಯತ್ನಿಸಬಾರದು. ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರಬಾರದು. ವಿಚಾರಣಾ ನ್ಯಾಯಾಲಯದ ಅನುಮತಿಯಿಲ್ಲದೆ ಹೊರ ದೇಶಕ್ಕೆ ಪ್ರಯಾಣ ಮಾಡಬಾರದು. ಐದು ಲಕ್ಷ ರೂ. ಗಳ ಬಾಂಡ್‌ ಮತ್ತು ಇಬ್ಬರ ಶ್ಯೂರಿಟಿ ನೀಡಬೇಕೆಂದು ನ್ಯಾಯಪೀಠ ಷರತ್ತುಗಳನ್ನು ವಿಧಿಸಿದೆ.
ಅರ್ಜಿಯ ವಿಚಾರಣೆ ವೇಳೆ ಸರ್ಕಾರದ ಪರ ಎಸ್‌ಪಿಪಿ ಪಿ. ಪ್ರಸನ್ನಕುಮಾರ್‌, ವಾದ ಮಂಡಿಸಿ, ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಉತ್ತರ ಪತ್ರಿಕೆಗಳನ್ನು ತಿದ್ದಲು ಕಾರಣರಾಗಿದ್ದರು. ಅಲ್ಲದೆ, ಹಗರಣ ನಡೆದ ವೇಳೆ ಅಮೃತ್‌ ಪೌಲ್‌ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದರು. ಆ ಸಮಯದಲ್ಲಿ ಅವರು ಸುಳ್ಳು ದಾಖಲೆಗಳ ಮೂಲಕ ಕಚೇರಿಗೆ ವೈದ್ಯಕೀಯ ರಜೆ ಹಾಕಿ ಹಗರಣ ನಡೆಯಲು ಕಾರಣವಾಗಿದ್ದರು.

ಉತ್ತರ ಪತ್ರಿಕೆಗಳನ್ನು ತಿದ್ದಿದ 2021ರ ಅಕ್ಟೋಬರ್‌ 7, 8 ಮತ್ತು 16ರಂದು ಆರೋಪಿಯು ವೈದ್ಯಕೀಯ ರಜೆಯಲ್ಲಿ ಇದ್ದುದಾಗಿ ಹೇಳಿ ಪ್ರಮಾಣಪತ್ರ ನೀಡಿದ್ದಾರೆ. ಆದರೆ, ಅವರು ಆ ದಿನಗಳಂದು ತಮ್ಮ ಪ್ರಮಾಣ ಪತ್ರದಲ್ಲಿ ಹೇಳಿರುವ ಯಲಹಂಕ ನ್ಯೂ ಟೌನ್‌ಲ್ಲಿರುವ ನವಚೇತನ ಆಸ್ಪತ್ರೆಯಲ್ಲಿ ಯಾವುದೇ ಚಿಕಿತ್ಸೆ ಪಡೆದೇ ಇಲ್ಲ. ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಅಂತೆಯೇ, ಆ ದಿನಗಳಲ್ಲಿ ಸ್ಟ್ರಾಂಗ್‌ ರೂಮ್‌ ಬೀಗಗಳನ್ನು ತಮ್ಮ ವೈಯಕ್ತಿಕ ಕೊಠಡಿಯಲ್ಲಿರಿಸಿದ್ದರು. ಅಲ್ಲಿಂದ ಬೇರೆಯವರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ಪ್ರತಿಪಾದಿಸಿದ್ದರು.

ಅರ್ಜಿದಾರರ ಪರ ಹಿರಿಯ ವಕೀಲ ಎಂ ಎಸ್‌ ಶ್ಯಾಮಸುಂದರ್‌, ಪ್ರಕರಣ ಕುರಿತಂತೆ ವಿಚಾರಣಾ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಹಂತ ಹಂತವಾಗಿ ದೋಷಾರೋಪ ಪಟ್ಟಿ ಸಲ್ಲಿಸುತ್ತಿದ್ದು, ಇದು ಸಿಆರ್‌ಪಿಸಿ ಕಲಂ 173ಕ್ಕೆ ತದ್ವಿರುದ್ಧವಾಗಿದೆ. ಅರ್ಜಿದಾರರು ಕಳೆದ ಒಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ವಿಚಾರಣಾ ನ್ಯಾಯಾಲಯವು ಅವರ ವಿರುದ್ಧದ ಯಾವುದೇ ಅಪರಾಧಗಳನ್ನು ಸಂಜ್ಞೆಯ ಅಪರಾಧ ಎಂದು ಪರಿಗಣಿಸದೇ ಇರುವ ಕಾರಣ ಅವರ ಬಂಧನ ಕಾನೂನು ಬಾಹಿರವಾಗಿದೆ. ಅಲ್ಲದೆ, ಹಂತ ಹಂತವಾಗಿ ದೋಷಾರೋಪ ಪಟ್ಟಿ ಸಲ್ಲಿಸುವ ಪ್ರಕ್ರಿಯೆ ಸಿಆರ್‌ಪಿಸಿ ಕಲಂ 173ರ ಅಡಿಯಲ್ಲಿ ಆರೋಪಿಗಳ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ವಿವರಿಸಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next