ಪುಣೆ: ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತೊಮ್ಮೆ ಗೆಲುವು ಸಾಧಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಸೋಲಿನ ಹಾದಿಗೆ ಮರಳಿತು. ಈ ಗೆಲುವಿನೊಂದಿಗೆ ಗುಜರಾತ್ ಗೆಲುವಿನ ಸಂಖ್ಯೆ 6 ಪಂದ್ಯಗಳಲ್ಲಿ 5, ಚೆನ್ನೈ ಸೋಲಿನ ಸಂಖ್ಯೆ 6 ಪಂದ್ಯಗಳಲ್ಲಿ 5!.
ಭಾನುವಾರ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಗುಜರಾತ್ 19.5 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 170 ರನ್ ಗಳಿಸಿತು. ಗುಜರಾತ್ ಪರ ಅದ್ಭುತ ಬ್ಯಾಟಿಂಗ್ ಮಾಡಿದ ಡೇವಿಡ್ ಮಿಲ್ಲರ್ 51 ಎಸೆತಗಳಲ್ಲಿ, 8 ಬೌಂಡರಿ, 6 ಸಿಕ್ಸರ್‌ಗಳ ನೆರವಿನಿಂದ 94 ರನ್ ಚಚ್ಚಿದರು. ರಶೀದ್ ಖಾನ್ ಸ್ಫೋಟಕ 40 ರನ್ ಬಾರಿಸಿದರು.
ಮಿಂಚಿದ ಗಾಯಕ್ವಾಡ್: ಮೊದಲು ಬ್ಯಾಟಿಂಗ್ ಮಾಡಿದ ಗಾಯಕ್ವಾಡ್ 73 ರನ್ ಕೊಡುಗೆ ಸಲ್ಲಿಸಿದರು. ಚೆನ್ನೈ ಸರದಿಯಲ್ಲಿ ಮಿಂಚಿದ ಮತ್ತೂಬ್ಬ ಆಟಗಾರ ಅಂಬಾಟಿ ರಾಯುಡು (46).
ಆರ್‌ಸಿಬಿ ವಿರುದ್ಧ ಸಿಡಿದು ನಿಂತ ರಾಬಿನ್ ಉತ್ತಪ್ಪ ಇಲ್ಲಿ ಸಂಪೂರ್ಣ ವೈಫಲ್ಯ ಕಂಡರು (10 ಎಸೆತ, 3 ರನ್). ಮೊಯಿನ್ ಅಲಿ ಒಂದೇ ರನ್ ಮಾಡಿ ವಾಪಸಾದರು. ಇವರ ವಿಕೆಟ್ ಕಿತ್ತಿದ್ದು ಮೊಹಮ್ಮದ್ ಶಮಿ ಮತ್ತು ಅಲ್ಜಾರಿ ಜೋಸೆಫ್. ಆದರೆ ಇಷ್ಟು ಕಾಲ ತೀವ್ರ ರನ್ ಬರಗಾಲ ಅನುಭವಿಸುತ್ತಿದ್ದ ಋತುರಾಜ್ ಗಾಯಕ್ವಾಡ್ ಮತ್ತು ಅಂಬಾಟಿ ರಾಯುಡು ಈ ಬಾರಿ ಕೈಬಿಡಲಿಲ್ಲ. ಇಬ್ಬರೂ ಸೇರಿಕೊಂಡು ತಂಡವನ್ನು ಮೇಲೆತ್ತಿದರು. ಇವರ 3ನೇ ವಿಕೆಟ್ ಜತೆಯಾಟ ಚೆನ್ನೈ ಚೇತರಿಕೆಯಲ್ಲಿ ಮಹತ್ವದ ಪಾತ್ರ ವಹಿಸಿತು.
ಪವರ್ ಪ್ಲೇಯಲ್ಲಿ 2ಕ್ಕೆ 39 ರನ್ ಮಾಡಿದ್ದ ಚೆನ್ನೈ, 10 ಓವರ್ ಮುಕ್ತಾಯಕ್ಕೆ ಮತ್ತೆ ವಿಕೆಟ್ ಕಳೆದುಕೊಳ್ಳದೆ ಮೊತ್ತವನ್ನು 66ಕ್ಕೆ ಏರಿಸಿತು. ದ್ವಿತೀಯಾರ್ಧದಲ್ಲಿ ಇವರಿಬ್ಬರ ಆಟ ಬಿರುಸುಗೊಂಡಿತು. ಜೋಸೆಫ್, ದಯಾಳ್, ಫರ್ಗ್ಯುಸನ್… ಸೇರಿದಂತೆ ಯಾರಿಗೂ ರಿಯಾಯಿತಿ ತೋರಲಿಲ್ಲ. ಈ ಜೋಡಿ 56 ಎಸೆತಗಳಿಂದ 92 ರನ್ ಪೇರಿಸಿತು. 15ನೇ ಓವರ್‌ನಲ್ಲಿ ರಾಯುಡು ಅವರನ್ನು ಔಟ್ ಮಾಡುವ ಮೂಲಕ ಜೋಸೆಫ್ ಗುಜರಾತ್‌ಗೆ ಅಗತ್ಯವಾದ ಬ್ರೇಕ್ ಒದಗಿಸಿದರು. ರಾಯುಡು ಗಳಿಕೆ 31 ಎಸೆತಗಳಿಂದ 46 ರನ್ (4 ಬೌಂಡರಿ, 2 ಸಿಕ್ಸರ್). ಗಾಯಕ್ವಾಡ್ 48 ಎಸೆತಗಳಿಂದ 73 ರನ್ ಬಾರಿಸಿದರು. ಈ ಆಕರ್ಷಕ ಬೀಸುಗೆಯ ವೇಳೆ 5 ಸಿಕ್ಸರ್, 5 ಫೋರ್ ಸಿಡಿಸಿದರು.
ಪಾಂಡ್ಯ ಗೈರು, ರಶೀದ್ ನಾಯಕ: ತೊಡೆಯ ಸ್ನಾಯುಸೆಳೆತದಿಂದಾಗಿ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯ ಆಡಲಿಳಿಯಲಿಲ್ಲ. ಇವರ ಬದಲು ರಶೀದ್ ಖಾನ್ ತಂಡದ ನೇತೃತ್ವ ವಹಿಸಿದರು.
ಸಂಕ್ಷಿಪ್ತ ಸ್ಕೋರ್: ಚೆನ್ನೈ 20 ಓವರ್, 169/5 (ಋತುರಾಜ್ ಗಾಯಕ್ವಾಡ್ 73, ಅಂಬಾಟಿ ರಾಯುಡು 46, ಅಲ್ಜಾರಿ ಜೋಸೆಫ್ 34ಕ್ಕೆ 2). ಗುಜರಾತ್ 19.5 ಓವರ್, 170/7 (ಡೇವಿಡ್ ಮಿಲ್ಲರ್ 94, ರಶೀದ್ ಖಾನ್ 40, ಡ್ವೇನ್ ಬ್ರಾವೊ 23ಕ್ಕೆ 3).