Advertisement
ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ, ಕೂಟದ ನೂತನ ತಂಡಗಳಾದ ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ರೇಸ್‌ನಲ್ಲಿರುವುದು ಇಲ್ಲಿನ ವಿಶೇಷ. ಈ ತಂಡಗಳೆರಡು ದ್ವಿತೀಯ ಸುತ್ತಿನ ಹೋರಾಟಕ್ಕೆ ಇಳಿಯಲಿದ್ದು, ಗೆದ್ದ ತಂಡ ಪ್ಲೇ ಆಫ್ ಗೆ ಲಗ್ಗೆ ಇಡಲಿದೆ.
Related Articles
“ಕನಸಿನ ಓಟ’ದಲ್ಲಿ ತೊಡಗಿರುವ ಲಕ್ನೋ ಮತ್ತು ಗುಜರಾತ್ ತಂಡಗಳ ಪ್ಲೇ ಆಫ್ ಪ್ರವೇಶದ ಬಗ್ಗೆ ಅನುಮಾನವಿಲ್ಲ. ಆದರೆ ಇದಿನ್ನೂ ಅಧಿಕೃತಗೊಂಡಿಲ್ಲ, ಅಷ್ಟೇ. ಇದು 10 ತಂಡಗಳ ಕೂಟವಾದ್ದರಿಂದ ಪ್ಲೇ ಆಫ್ ಪ್ರವೇಶಕ್ಕೆ 18 ಅಂಕಗಳ ಅಗತ್ಯವಿದೆ. ಮಂಗಳವಾರದ ಪಂದ್ಯದಲ್ಲಿ ಒಂದು ತಂಡ ಈ ಗುರಿಯನ್ನು ಸಾಧಿಸಲಿದೆ.
Advertisement
ಲಕ್ನೋ ಕಳೆದ 4 ಪಂದ್ಯಗಳನ್ನು ಗೆದ್ದ ಹುಮ್ಮಸ್ಸಿನಲ್ಲಿದೆ. ಇನ್ನೊಂದೆಡೆ, ಬಹಳ ಬೇಗ ಪ್ಲೇ ಆಫ್ ನಾಗಾಲೋಟಗೈಯುತ್ತಿದ್ದ ಗುಜರಾತ್‌ಗೆ ಸತತ 2 ಸೋಲಿನಿಂದ ತುಸು ಹಿನ್ನಡೆಯಾಗಿದೆ. ಇದನ್ನು ಗಮನಿಸುವಾಗ, ಯಾವ ತಂಡವೂ ಸುಲಭದಲ್ಲಿ ಅಥವಾ ಬಹಳ ಬೇಗ ಪ್ಲೇ ಆಫ್ ಪ್ರವೇಶಿಸಬಾರದು ಎಂಬ ಐಪಿಎಲ್‌ನ “ಅಲಿಖಿತ ನಿಯಮ’ ಇಲ್ಲಿ ವರ್ಕ್‌ಔಟ್ ಆಗಿರಲಿಕ್ಕೂ ಸಾಕು ಎಂದೆನಿಸುತ್ತದೆ. ಕೊನೆಯ ಪಂದ್ಯದ ತನಕವೂ ಲೀಗ್ ಸ್ಪರ್ಧೆಗಳ ಕುತೂಹಲ ಉಳಿಯಬೇಕು ಎಂಬ ಲೆಕ್ಕಾಚಾರ ಇಲ್ಲಿರುವ ಎಲ್ಲ ಸಾಧ್ಯತೆಗಳಿವೆ.
ಲಕ್ನೋ ಹೆಚ್ಚು ಬಲಿಷ್ಠಮೇಲ್ನೋಟಕ್ಕೆ ಲಕ್ನೋ ತಂಡವೇ ಹೆಚ್ಚು ಬಲಿಷ್ಠವಾಗಿ ಕಾಣುತ್ತಿದೆ. ಹಿಂದಿನೆರಡು ಪಂದ್ಯಗಳಲ್ಲಿ ಡೆಲ್ಲಿ ಮತ್ತು ಕೆಕೆಆರ್‌ಗೆ ಸೋಲುಣಿಸಿ ಅಗ್ರಸ್ಥಾನ ಅಲಂಕರಿಸಿರುವ ಲಕ್ನೋದ ಬ್ಯಾಟಿಂಗ್ ಹಾಗೂ ಬೌಲಿಂಗ್ ವೈವಿಧ್ಯಮಯ. ನಾಯಕ ರಾಹುಲ್ ಕೆಲವು ಪಂದ್ಯಗಳಲ್ಲಿ ಖಾತೆ ತೆರೆಯದೇ ಹೋದರೂ 11 ಪಂದ್ಯಗಳಿಂದ 451 ರನ್ ಗಳಿಸಿದ್ದನ್ನು ಮರೆಯು ವಂತಿಲ್ಲ. 2 ಶತಕ, 2 ಅರ್ಧ ಶತಕ ಇದರಲ್ಲಿ ಒಳಗೊಂಡಿದೆ. ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ ಬ್ಯಾಟಿಂಗ್ ಜವಾಬ್ದಾರಿಯನ್ನು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ. ಆಯುಷ್ ಬದೋನಿ ಹಿಂದಿನ ಲಯಕ್ಕೆ ಮರಳಿದರೆ ತಂಡಕ್ಕೆ ಹೆಚ್ಚು ಲಾಭವಿದೆ. ಲಕ್ನೋದ ಹೆಚ್ಚುಗಾರಿಕೆಯೆಂದರೆ ಆಲ್‌ರೌಂಡರ್. ಕೃಣಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಮಾರ್ಕಸ್ ಸ್ಟೋಯಿನಿಸ್ ಇಲ್ಲಿನ ಪ್ರಮುಖರು. ಬೌಲಿಂಗ್ ವಿಭಾಗ ಹೆಚ್ಚು ಘಾತಕ. ಕಳೆದ ಪಂದ್ಯದಲ್ಲಿ ಬಲಿಷ್ಠ ಕೆಕೆಆರ್ 14.3 ಓವರ್‌ಗಳಲ್ಲಿ 101ಕ್ಕೆ ದಿಂಡುರುಳಿದ್ದೇ ಇದಕ್ಕೆ ತಾಜಾ ನಿದರ್ಶನ. ಮೊಹ್ಸಿನ್ ಖಾನ್, ಆವೇಶ್ ಖಾನ್, ದುಷ್ಮಂತ ಚಮೀರ, ಹೋಲ್ಡರ್ ವೇಗದ ದಾಳಿಯ ಮುಂಚೂಣಿಯಲ್ಲಿದ್ದಾರೆ. ಅಸ್ಥಿರಗೊಂಡ ಗುಜರಾತ್
ಗುಜರಾತ್ ಎಷ್ಟೇ ಕಠಿನ ಸ್ಥಿತಿಯಿಂದಲೂ ಪಾರಾಗಿ ಜಯ ಗಳಿಸುತ್ತ ಬಂದಿರುವ ತಂಡ. ಆದರೆ ಮುಂಬೈ ವಿರುದ್ಧ ಅಂತಿಮ ಓವರ್‌ನಲ್ಲಿ 9 ರನ್ ಗಳಿಸಲಾಗದೇ ಸೋಲನುಭವಿಸಿದ್ದನ್ನು ಕಂಡಾಗ ಏನೇನೋ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ತಂಡದ ಬ್ಯಾಟಿಂಗ್ ವಿಭಾಗ ಹೆಚ್ಚು ಸ್ಥಿರತೆ ತೋರಬೇಕಾದ ಅಗತ್ಯವಿದೆ. ಆರಂಭದ ಕೆಲವು ಪಂದ್ಯಗಳಲ್ಲಿ ತೋರ್ಪಡಿಸಿದ ಪರಾಕ್ರಮವನ್ನು ಗುಜರಾತ್ ಈಗೀಗ ತೋರ್ಪಡಿ ಸುತ್ತಿಲ್ಲ. ಗಿಲ್, ನಾಯಕ ಪಾಂಡ್ಯ, ಮಿಲ್ಲರ್, ತೆವಾಟಿಯ ಅವರ ಜೋಶ್ ಮಾಯವಾದಂತಿದೆ. ವಿಶ್ವ ದರ್ಜೆಯ ಬೌಲರ್ ಮೊಹಮ್ಮದ್ ಶಮಿ ಕಳೆದ 3 ಪಂದ್ಯಗಳಲ್ಲಿ 124 ರನ್ ನೀಡಿ 2 ವಿಕೆಟ್‌ಗಳನ್ನಷ್ಟೇ ಕೆಡವಿದ್ದಾರೆ. ಫರ್ಗ್ಯುಸನ್ ನಿರೀಕ್ಷಿತ ಯಶಸ್ಸು ಕಂಡಿಲ್ಲ. ರಶೀದ್ ಖಾನ್ ಅವರ ಲೆಗ್‌ಸ್ಪಿನ್ ಮ್ಯಾಜಿಕ್ ಈ ವರ್ಷ ನಡೆದೇ ಇಲ್ಲ. ಈ ವೈಫಲವ್ಯವನ್ನು ಬ್ಯಾಟಿಂಗ್ ವಿಭಾಗದಲ್ಲಿ ಹೋಗಲಾಡಿಸಿಕೊಳ್ಳುವ ಪ್ರಯತ್ನವನ್ನೇನೋ ಮಾಡುತ್ತಿದ್ದಾರೆ. ಲಕ್ನೋಗೆ ಇದು ಸೇಡಿನ ಪಂದ್ಯ
ಇದು ಲಕ್ನೋಗೆ ಸೇಡಿನ ಪಂದ್ಯ. ಕಾರಣ, ಮೊದಲ ಸುತ್ತಿನ ಪಂದ್ಯದಲ್ಲಿ ಅನುಭವಿಸಿದ 5 ವಿಕೆಟ್ ಸೋಲು. ಈ ಪಂದ್ಯದಲ್ಲಿ ಲಕ್ನೋ ಮೊದಲ ಎಸೆತದಲ್ಲೇ ನಾಯಕ ರಾಹುಲ್ ವಿಕೆಟ್ ಕಳೆದುಕೊಂಡು 6 ವಿಕೆಟಿಗೆ 158 ರನ್ನುಗಳ ಸಾಮಾನ್ಯ ಸ್ಕೋರ್ ದಾಖಲಿಸಿತ್ತು. ಅತ್ತ ಶುಭಮನ್ ಗಿಲ್ ಕೂಡ ಸೊನ್ನೆ ಸುತ್ತಿದರೂ ಗುಜರಾತ್ 19.4 ಓವರ್‌ಗಳಲ್ಲಿ 5 ವಿಕೆಟಿಗೆ 161 ರನ್ ಬಾರಿಸಿ ಗೆದ್ದು ಬಂದಿತ್ತು. ರಾಹುಲ್ ತೇವಾಟಿಯ ಅಜೇಯ 40, ಹಾರ್ದಿಕ್ ಪಾಂಡ್ಯ 33, ಮ್ಯಾಥ್ಯೂ ವೇಡ್ ಮತ್ತು ಡೇವಿಡ್ ಮಿಲ್ಲರ್ ತಲಾ 30 ರನ್ ಬಾರಿಸಿ ತಂಡವನ್ನು ದಡ ಮುಟ್ಟಿಸಿದ್ದರು.